ನಗರದ 2 ಕಡೆ ಐಷಾರಾಮಿ ರೈಲ್ವೆ ಬೋಗಿಯ ರೆಸ್ಟೋರೆಂಟ್‌!

By Kannadaprabha News  |  First Published Jul 22, 2023, 5:09 AM IST

  ನಗರದ ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲ್ವೆ ನಿಲ್ದಾಣದಲ್ಲಿ ‘ರೈಲ್‌ಕೋಚ್‌ ರೆಸ್ಟೋರೆಂಟ್‌’ ಶೀಘ್ರವೇ ನಿರ್ಮಾಣವಾಗಲಿದೆ. ಐಷಾರಾಮಿ ರೈಲ್ವೆ ಬೋಗಿಯಲ್ಲಿ ಕುಳಿತು ಉಪಾಹಾರ ಸೇವಿಸುವ ಹೊಸ ಅನುಭವವನ್ನು ಇವು ನೀಡಲಿವೆ.


ಮಯೂರ್‌ ಹೆಗಡೆ

ಬೆಂಗಳೂರು (ಜು.22) :  ನಗರದ ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲ್ವೆ ನಿಲ್ದಾಣದಲ್ಲಿ ‘ರೈಲ್‌ಕೋಚ್‌ ರೆಸ್ಟೋರೆಂಟ್‌’ ಶೀಘ್ರವೇ ನಿರ್ಮಾಣವಾಗಲಿದೆ. ಐಷಾರಾಮಿ ರೈಲ್ವೆ ಬೋಗಿಯಲ್ಲಿ ಕುಳಿತು ಉಪಾಹಾರ ಸೇವಿಸುವ ಹೊಸ ಅನುಭವವನ್ನು ಇವು ನೀಡಲಿವೆ.

Tap to resize

Latest Videos

ಈಗಾಗಲೇ ನೈಋುತ್ಯ ರೈಲ್ವೆ ವಲಯವು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೋಗಿ ‘ರೈಲ್‌ಕೋಚ್‌ ರೆಸ್ಟೋರೆಂಟ್‌’ ನಿರ್ಮಿಸಿದೆ. ಅಲ್ಲಿ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯ ಎರಡು ನಿಲ್ದಾಣದಲ್ಲಿ ಈ ಹೋಟೆಲನ್ನು ತೆರೆಯಲು ನೈಋುತ್ಯ ರೈಲ್ವೆ ಮುಂದಾಗಿದೆ. ಎರಡೂ ನಿಲ್ದಾಣಗಳ ದ್ವಾರಗಳ ಸಮೀಪವೇ ಇನ್ನೆರಡು ತಿಂಗಳಲ್ಲಿ ಇವುಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಇವು ಗ್ರಾಹಕರನ್ನು ಆಕರ್ಷಿಸಲಿವೆ.

ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ

ಗುಜರಿಗೆ ಹೋಗುವಂತಿರುವ ಹಳೆಯ ರೈಲ್ವೆ ಬೋಗಿಗಳನ್ನು ನವೀಕರಣಗೊಳಿಸಿ ‘ರೈಲ್‌ಕೋಚ್‌ ರೆಸ್ಟೋರೆಂಟ್‌’ ರೂಪಿಸಲಾಗುತ್ತಿದೆ. ಬೋಗಿಯಲ್ಲಿನ ಪ್ರಯಾಣಿಕರ ಆಸನಗಳನ್ನು ತೆಗೆದು, ಉಪಾಹಾರ ಸೇವಿಸಲು ಅನುಕೂಲವಾಗುವ ಆರಾಮ ಆಸನಗಳನ್ನು ಅಳವಡಿಸಲಾಗುವುದು. ಹವಾ ನಿಯಂತ್ರಿತ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಇವು ಹೊಂದಿರಲಿವೆ. ಜೊತೆಗೆ ಬೋಗಿಯೊಳಗೆ ರಾಜ್ಯದ ಕಲಾಕುಸುರಿ, ರೈಲ್ವೆ ಇತಿಹಾಸವನ್ನು ಇಲ್ಲಿ ವೀಕ್ಷಿಸುವ ಅವಕಾಶ ಇರಲಿದೆ.

ಕಳೆದ ಜೂನ್‌ನಲ್ಲಿ ರೈಲ್ವೆ ಮಂಡಳಿಯಿಂದ ‘ರೈಲ್‌ಕೋಚ್‌ ರೆಸ್ಟೋರೆಂಟ್‌’ ನಿರ್ಮಿಸಲು ಇ-ಹರಾಜಿನ ಮೂಲಕ ಟೆಂಡರ್‌ ಕರೆಯಲಾಗಿತ್ತು. ಕೆಎಸ್‌ಆರ್‌ ನಿಲ್ದಾಣದಲ್ಲಿ ರೈಲ್ವೆ ಬೋಗಿ ನಿರ್ಮಿಸುವ ಹೊಣೆಯನ​ು​್ನ ಓಂ ಇಂಡಸ್ಟ್ರೀಸ್‌ ಪ್ರೈವೇಟ್‌ ಲಿಮಿಟೆಡ್‌ ಪಡೆದಿದೆ. ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಗೌರವ್‌ ಎಂಟರ್‌ಪ್ರೈಸಸ್‌ ಈ ರೆಸ್ಟೋರೆಂಟ್‌ ನಿರ್ಮಿಸಲಿದೆ. ಐದು ವರ್ಷಗಳ ಒಪ್ಪಂದ ಇದಾಗಿ​ದೆ. ಪರವಾನಗಿ ಶುಲ್ಕವಾಗಿ .7.54 ಕೋಟಿ ಪಡೆಯಲಾಗುವುದು ಎಂದು ನೈಋುತ್ಯ ರೈಲ್ವೆ ಬೆಂಗಳೂರು ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನೈಋುತ್ಯ ರೈಲ್ವೆಯ ಎಂಜಿನಿಯರಿಂಗ್‌ ವಿಭಾಗ ಶೀಘ್ರವೇ ಇಲ್ಲಿ ರೈಲ್ವೆ ಟ್ರ್ಯಾಕ್‌ಗಳನ್ನು ಅಳವಡಿಸುವ ಕಾರ್ಯ ಆರಂಭಿಸಲಿದೆ. ಮಂಡಳಿಯಿಂದ ಪರವಾನಗಿ ಸಿಕ್ಕ ಬಳಿಕ ರೈಲ್ವೆ ಬೋಗಿಗಳನ್ನು ಇಲ್ಲಿ ಅಳವಡಿಸಲಾಗುವು​ದು. ಬಳಿಕ ಇಲ್ಲಿ ಸುಮಾರು 60 ದಿನಗಳಲ್ಲಿ ಕೋಚ್‌ಗಳನ್ನು ಐಷಾರಾಮಿ ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸುವ ಕಾರ್ಯ ನಡೆಯಲಿದೆ.

ಜೊತೆಗೆ ಇವು ದಿನದ 24 ಗಂಟೆಯೂ ತೆರೆದಿರಲಿವೆ. ಏಕಕಾಲಕ್ಕೆ ಸುಮಾರು 50 ಮಂದಿ ಒಳಾಂಗಣದಲ್ಲಿ ಕುಳಿತುಕೊಳ್ಳಬಹುದು. ಬೋಗಿ ಪಕ್ಕವೂ ಆಸನ ವ್ಯವಸ್ಥೆ ಇರಲಿದೆ. ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್‌ ಸೇರಿದಂತೆ ಹತ್ತು ಹಲವು ಬಗೆಯ ಖಾದ್ಯಗಳು ಇಲ್ಲಿ ಲಭ್ಯವಾಗಲಿವೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿಯೂ ಉಟೋಪಹಾರ ನೀಡಲಾಗುವುದು. ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇದನ್ನು ನಿರ್ಮಿಸಲಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಸ​ದ್ಯಕ್ಕೆ ಎರಡೂ ನಿಲ್ದಾಣದಲ್ಲಿ ಒಂದೊಂದು ಬೋಗಿಗಳಲ್ಲಿ ರೈಲ್ವೆ ರೆಸ್ಟೋರೆಂಟನ್ನು ಆರಂಭಿಸಲಾಗುವುದು. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಇದಕ್ಕಾಗಿ ನೀಡಲಾಗುವುದು ಎಂದು ನೈಋುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕರಾದ ಕುಸುಮಾ ಹರಿಪ್ರಸಾದ್‌ ತಿಳಿಸಿದರು.

 

ಮಲಗಿದ್ದ ಬಾಲಕನ ಕಾಲಿನಿಂದ ಒದ್ದು ಎಬ್ಬಿಸಿದ ಪೊಲೀಸ್‌: ವೀಡಿಯೋ ವೈರಲ್ ವ್ಯಾಪಕ ಆಕ್ರೋಶ

‘ರೈಲ್‌ಕೋಚ್‌ ರೆಸ್ಟೋರೆಂಟ್‌’ ಅಕ್ಟೋಬರ್‌ ಅಂತ್ಯಕ್ಕೆ ನಿರ್ಮಾಣವಾಗಲಿದೆ. ಪ್ರಯಾಣಿಕರು, ರೈಲ್ವೇ ನಿಲ್ದಾಣಕ್ಕೆ ಬರುವವರಿಗೆ ಹೊಸ ಅನುಭದೊಂದಿಗೆ ಊಟೋಪಹಾರ ಸವಿಯಲು ಅನುವಾಗುವಂತೆ ಇವನ್ನು ರೂಪಿಸಲಾಗುತ್ತಿದೆ.

-ಕುಸುಮಾ ಹರಿಪ್ರಸಾದ್‌, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ, ನೈಋುತ್ಯ ರೈಲ್ವೇ ಬೆಂಗಳೂರು ವಲಯ

click me!