
ಬೆಂಗಳೂರು (ಏ.30): ಬಸ್ ಪ್ರಯಾಣ ದರ ಹೆಚ್ಚಳದ ನಂತರ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರಿಂದ ಒತ್ತಡ ಹೆಚ್ಚುತ್ತಿದ್ದು, ಈ ಕುರಿತಂತೆ ಸರ್ಕಾರ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಟೋ ಚಾಲಕರ ಸಂಘ ಆಗ್ರಹಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆಟೋ ಪ್ರಯಾಣ ದರ ಹೆಚ್ಚಳ ಮಾಡುವಂತೆ 2023ರಿಂದ ಆಟೋ ಚಾಲಕರ ಸಂಘಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿವೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಎರಡ್ಮೂರು ಬಾರಿ ಸಭೆಯನ್ನೂ ನಡೆಸಲಾಗಿದೆ. ಅಲ್ಲದೆ, ಕಳೆದ ಮಾರ್ಚ್‌ನಲ್ಲಿಯೇ ದರ ಹೆಚ್ಚಳದ ಆದೇಶ ಮಾಡಲಾಗುತ್ತದೆ ಎಂದೂ ಹೇಳಲಾಗಿತ್ತು. ಆದರೆ, ಏಪ್ರಿಲ್ ತಿಂಗಳು ಮುಕ್ತಾಯವಾಗುತ್ತಿದ್ದರೂ ಇನ್ನೂ ದರ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಆಟೋ ಚಾಲಕರು, ಶೀಘ್ರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳದ ಆದೇಶ ಹೊರಡಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಆಟೋ ಚಾಲಕನ ಬಳಿ ಕನ್ನಡದಲ್ಲಿ ದರ ಚೌಕಾಸಿಗೆ ಚಾಟ್‌ಜಿಪಿ ಬಳಸಿದ ವಿದ್ಯಾರ್ಥಿ, ವೈರಲ್ ವಿಡಿಯೋ
ಈ ಕುರಿತು ಪ್ರತಿಕ್ರಿಯಿಸಿರುವ ಆಟೋ ಚಾಲಕರ ಸಂಘದ ರುದ್ರಮೂರ್ತಿ, ನಿಯಮದಂತೆ ಪ್ರತಿ 3 ವರ್ಷಕ್ಕೊಮ್ಮೆ ಆಟೋ ಪ್ರಯಾಣ ದರದಲ್ಲಿ ಏರಿಕೆಯಾಗಬೇಕು. ಆದರೆ, 2021ರಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಸದ್ಯ ಕನಿಷ್ಠ ದರ ಮೊದಲ 2 ಕಿ.ಮೀಗೆ ₹30 ಇದ್ದು, ಅದನ್ನು ₹40ಕ್ಕೆ ಹಾಗೂ ಅದಾದ ನಂತರ ಪ್ರತಿ ಕಿಮೀ ಪ್ರಯಾಣ ದರವನ್ನು ₹15 ರಿಂದ ₹20ಕ್ಕೆ ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. ಅದರಂತೆ ದರ ಹೆಚ್ಚಳದ ಆದೇಶ ಹೊರಡಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಆಟೋ ಚಾಲಕರ ಹಗಲು ದರೋಡೆ, ಮುಂಬೈ ಮೂಲದ ಕಂಪನಿ ಸಿಇಒ ಟ್ವೀಟ್ ವೈರಲ್
ಮೀಟರ್ ದರ ಬದಲು ಹೆಚ್ಚು ಹಣ: ಸಂಘರ್ಷ
ಆಟೋ ಗ್ಯಾಸ್ ಸೇರಿದಂತೆ ಇನ್ನಿತರ ಎಲ್ಲ ವಸ್ತುಗಳ ದರ ಹೆಚ್ಚಳವಾಗಿದೆ. ನಿಯಮದಂತೆ ಮೀಟರ್ ದರ ಬದಲು ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಇದು ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಇದನ್ನು ತಪ್ಪಿಸಲು. ಪ್ರಯಾಣ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಆಟೋ ಪ್ರಯಾಣ ದರ ಹೆಚ್ಚಿಸಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಆಟೋ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ರುದ್ರಮೂರ್ತಿ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ