ಮಂಗಳೂರು ವಿವಿ ಕಾಲೇಜಿನಲ್ಲಿ ಡಾ.ಶಂಶುಲ್‌ ಇಸ್ಲಾಂ ಭಾಷಣ; ಎಬಿವಿಪಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ

By Kannadaprabha NewsFirst Published Sep 10, 2023, 6:39 AM IST
Highlights

  ಮಂಗಳೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಕ್ಕೆ ಎಡಪಂಥೀಯ ಚಿಂತನೆಯ ದೆಹಲಿ ವಿವಿ ನಿವೃತ್ತ ಸಹಪ್ರಾಧ್ಯಾಪಕ ಡಾ.ಶಂಸುಲ್ ಇಸ್ಲಾಂ ಅವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಮಂಗಳೂರು (ಸೆ.10) :  ಮಂಗಳೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಕ್ಕೆ ಎಡಪಂಥೀಯ ಚಿಂತನೆಯ ದೆಹಲಿ ವಿವಿ ನಿವೃತ್ತ ಸಹಪ್ರಾಧ್ಯಾಪಕ ಡಾ.ಶಂಸುಲ್ ಇಸ್ಲಾಂ ಅವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಎಡಪಂಥೀಯ ಚಿಂತನೆಗಳನ್ನು ಕಾಲೇಜು ಆವರಣದಲ್ಲಿ ಬಿತ್ತಬಾರದು, ‘ಮಂಗಳೂರು ವಿವಿಯನ್ನು ರಕ್ಷಿಸಿ, ಶಂಸುಲ್ ಇಸ್ಲಾಂ ಹಿಂದಕ್ಕೆ ಹೋಗಿ’ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಲೇಜಿನ ಹೊರ ಆವರಣದಲ್ಲಿ ಅಭಾವಿಪ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದಾಗ ಪೊಲೀಸರು ಬಂಧಿಸಿದರು. ಆದರೆ ಒಳಗಡೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಡಾ.ಶಂಸುಲ್ ಇಸ್ಲಾಂ ಭಾಷಣ ಮುಕ್ತಾಯ ವರೆಗೂ ಸುಮಾರು ಎರಡು ಗಂಟೆ ಕಾಲ ಘೋಷಣೆ ಕೂಗುತ್ತಾ ಪ್ರತಿಭಟಿಸುತ್ತಲೇ ಇದ್ದರು. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಬ್ಯಾರಿಕೇಡ್ ಹಾಕಿ ವಿದ್ಯಾರ್ಥಿಗಳು ಸಭಾಂಗಣಕ್ಕೆ ನುಗ್ಗದಂತೆ ನಿರ್ಬಂಧಿಸಿದರು. ಪ್ರತಿಭಟನೆ ವಾಪಸ್ ಪಡೆಯುವಂತೆ ಪೊಲೀಸರು ವಿದ್ಯಾರ್ಥಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಇಡೀ ಕಾಲೇಜು ಆವರಣಕ್ಕೆ ಪೊಲೀಸ್ ಸರ್ಪಕಾವಲು ಹಾಕಲಾಗಿತ್ತು.

ನಿಜಗುಣಾನಂದ ಶ್ರೀಗೆ ಜೀವ ಬೆದರಿಕೆ ಪತ್ರ; 'ಇದು ಲವ್ ಲೆಟರ್' - ಸ್ವಾಮೀಜಿ

ಹುತಾತ್ಮರ ಫಲಕ ಅನಾವರಣ:

ಹೊರಗೆ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆಯೇ ಡಾ.ಶಂಸುಲ್ ಇಸ್ಲಾಂ ಸಭಾಂಗಣಕ್ಕೆ ಆಗಮಿಸಿದರು. ಕರ್ನಾಟಕದಲ್ಲಿ 1857ರ ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ಸಂಬಂಧಿಸಿ ನಾಲ್ಕು ಘಟನೆಗಳು ಹಾಗೂ ಆ ಘಟನೆಗಳಲ್ಲಿ ಪ್ರಾಣತ್ಯಾಗ ಮಾಡಿದ 136 ಹುತಾತ್ಮರ ಹೆಸರುಗಳ ಫಲಕವನ್ನು ಈ ಸಂದರ್ಭ ಕಾಲೇಜಿನ ಆವರಣದಲ್ಲಿ ಅನಾವರಣಗೊಳಿಸಲಾಯಿತು.

ಅಭಾವಿಪ ರಾಷ್ಟ್ರದ್ರೋಹಿ:

ಬಳಿಕ ಮಾತನಾಡಿದ ಡಾ.ಶಂಸುಲ್ ಇಸ್ಲಾಂ, ಇದು ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮ, ಇದು ಭಾರತಮಾತೆಯನ್ನು ಗೌರವಿಸಿದಂತೆ, ಇದನ್ನು ವಿರೋಧಿಸುವವರು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಅಭಾವಿಪ ಪ್ರತಿಭಟನಾಕಾರರು ರಾಷ್ಟ್ರದ್ರೋಹಿಗಳು, ಅವರು ಆರ್‌ಎಸ್‌ಎಸ್‌ನ ಒಂದು ಭಾಗ. ಗಾಂಧಿಯನ್ನು ಕೊಂದವರು ಯಾರು? ಅವರನ್ನು ಪಾಕಿಸ್ತಾನಿ ಅಥವಾ ಐಎಸ್‌ಐ ಕೊಂದಿಲ್ಲ. ಹುಸಿ ಹಾಗೂ ನಕಲಿ ರಾಷ್ಟ್ರೀಯವಾದಿಯಿಂದ ಗಾಂಧೀಜಿ ಕೊಲ್ಲಲ್ಪಟ್ಟರು. ಗಾಂಧೀಜಿ ನಿಜವಾದ ಸನಾತನಿ ಆಗಿದ್ದರು, ಗಾಂಧಿ ಕೊಂದ ಗೋಡ್ಸೆಯನ್ನು ಆರ್‌ಎಸ್‌ಎಸ್‌ನವರು ಕೃಷ್ಣನಿಗೆ ಹೋಲಿಸಿದ್ದರು, ಈ ಬಗ್ಗೆ ನನ್ನಲ್ಲಿ ದಾಖಲೆ ಇದೆ ಎಂದು ಪ್ರತಿಕ್ರಿಯಿಸಿದರು.

ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಜಯರಾಜ್ ಅಮೀನ್, ಸಿಪಿಐ ಮುಖಂಡ ಡಾ.ಸಿದ್ಧನಗೌಡ ಪಾಟೀಲ್ ಇದ್ದರು.

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪ್ರಾಸ್ತಾವಿಕ ಮಾತನಾಡಿದರು. ನಾಗೇಶ್ ಕಲ್ಲೂರು ವಂದಿಸಿದರು.

ಪ್ರಾಂಶುಪಾಲರ ಜತೆ ವಾಗ್ವಾದ:

ಡಾ.ಶಂಸುಲ್ ಇಸ್ಲಾಂ ಉಪನ್ಯಾಸ ಕಾರ್ಯಕ್ರಮ ಮುಕ್ತಾಯ ಬಳಿಕ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಅನುಮತಿ ಯಾಕೆ ನೀಡುವುದು ಎಂದು ಪ್ರಾಂಶುಪಾಲರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಪ್ರಾಂಶುಪಾಲರು, ಕಾಲೇಜು ನಡೆಸುವುದು ನಾನಲ್ಲ, ಕುಲಪತಿಗಳು ಎಂದು ಹೇಳಿ ಜಾರಿಕೊಂಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಪ್ರಾಂಶುಪಾಲರು ಕಾರ್ಯಕ್ರಮಕ್ಕೆ ಹಾಜರಾಗಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ನಾನು ಕುಲಪತಿಗಳು ಬಂದಿರುವುದಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಪ್ರಾಂಶುಪಾಲರು ಸಮಜಾಯಿಷಿ ನೀಡಿದ್ದಾರೆ. ಮಾತನ್ನು ಹಿಡಿತದಲ್ಲಿಟ್ಟುಕೊಂಡು ವರ್ತಿಸುವಂತೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಿವೃತ್ತ ಪ್ರಾಧ್ಯಾಪಕರಿಗೇ ಮುತ್ತಿಗೆ ಯತ್ನ!:

ಡಾ.ಶಂಸುಲ್ ಇಸ್ಲಾಂ ಅವರು ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಅವರಿಗೆ ಮುತ್ತಿಗೆ ಹಾಕಲು ಕಾಯುತ್ತಿದ್ದ ಅಭಾವಿಪ ಕಾರ್ಯಕರ್ತರು ಮಂಗಳೂರು ವಿವಿ ನಿವೃತ್ತ ಪ್ರೊಫೆಸರ್, ಇತಿಹಾಸ ತಜ್ಞ ಪ್ರೊ.ಕೇಶವನ್ ವೇಲುಹತ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು. ಅಲ್ಲಿದ್ದ ಪೊಲೀಸರು ತಕ್ಷಣ ಪ್ರೊ. ಕೇಶವನ್ ಅವರನ್ನು ಬೆಂಗಾವಲಿನೊಂದಿಗೆ ಕಾರ್ಯಕ್ರಮದ ವೇದಿಕೆಯತ್ತ ಸುರಕ್ಷಿತವಾಗಿ ಕರೆದೊಯ್ದರು. ಪ್ರೊ.ಕೇಶವನ್ ಅವರನ್ನು ಡಾ. ಶಂಸುಲ್ ಇಸ್ಲಾಂ ಎಂದು ತಪ್ಪಾಗಿ ಗ್ರಹಿಸಿ ಮುತ್ತಿಗೆಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ.

ಹಿಂದುತ್ವವಾದಿಗಳು ಮುಸ್ಲಿಮರನ್ನು ಕೊಂದಿಲ್ಲ!

ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರಿಗೆ ಗೌರವ ಗೀತೆ ಹಾಡಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಂಸುಲ್ ಇಸ್ಲಾಂ, ಇತಿಹಾಸದಿಂದ ಮರೆಯಾಗಿರುವ ಪ್ರಥಮ ಸ್ವಾತಂತ್ರ ಸಂಗ್ರಾಮದ ಹೀರೋಗಳ ಬಲಿದಾನದ ವಿವರವನ್ನು ನಾನು ದಾಖಲೆಗಳ ಮೂಲಕ ಜನರ ಮುಂದಿಡುವ ಪ್ರಯತ್ನ ನಡೆಸುತ್ತಿದ್ದೇನೆ. ಇವರು ಹುತಾತ್ಮರು ಅಲ್ಲ ಎಂದಾದರೆ ಇವರ ವಿರುದ್ಧ ಪ್ರಕರಣ ದಾಖಲಿಸಲಿ. ಪ್ರತಿಭಟಿಸುವವರು, ವಿರೋಧಿಸುವವರು ಇದರ ವಿರುದ್ಧ ಹೋರಾಟ ನಡೆಸಲಿ ಎಂದು ಸವಾಲೆಸೆದರು.

ಮಂಗಳೂರು ವಿವಿಯಲ್ಲಿ ಡಾ.ಶಂಸುಲ್‌ ಇಸ್ಲಾಂ ಉಪನ್ಯಾಸ: ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಹಿಂದುತ್ವವಾದಿಗಳು ಮುಸ್ಲಿಮರ ವಿರೋಧಿಗಳು ಎಂಬುದು ತಪ್ಪು ಗ್ರಹಿಕೆ. ವಾಸ್ತವದಲ್ಲಿ ಹಿಂದುತ್ವವಾದಿಗಳು ಪ್ರಜಾಪ್ರಭುತ್ವ ವಿರೋಧಿಗಳು. ಹಿಂದುತ್ವವಾದಿಗಳು ಮುಸ್ಲಿಮರನ್ನು ಕೊಂದಿಲ್ಲ. ಬದಲಾಗಿ ಮಹಾತ್ಮಗಾಂಧಿ, ಕಲಬುರಗಿ, ಪನ್ಸಾರೆ, ನರೇಂದ್ರ ದಾಬೋಲ್ಕರ್, ಗೌರಿ ಮೊದಲಾದವರನ್ನು ಕೊಂದಿರುವುದು ಎಂದರು.

ಕೊನೆಯಲ್ಲಿ ಲಾಲ್ ಸಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದರಲ್ಲದೆ, ಭದ್ರತೆ ಕಲ್ಪಿಸಿದ ಪೊಲೀಸರಿಗೆ ಧನ್ಯವಾದ ತಿಳಿಸಿದರು. ಅವರು ಭಾಷಣ ಮುಗಿಸಿ ನಿರ್ಗಮಿಸುವಾಗಲೂ ವಿದ್ಯಾರ್ಥಿಗಳು ಧಿಕ್ಕಾರ ಘೋಷಣೆ ಕೂಗಿದರು.

click me!