ಕೊಲ್ಲಿ ರಾಷ್ಟ್ರದಲ್ಲಿ ಯೋಗ ಪಸರಿಸುತ್ತಿರುವ ಕನ್ನಡತಿ..!

By Kannadaprabha NewsFirst Published Jun 21, 2021, 11:18 AM IST
Highlights

* ಉಸಿರಾಟದ ತರಬೇತಿಯಿಂದ ಕೋವಿಡ್‌ ರೋಗಿಗಳು ಬೇಗ ಗುಣಮುಖ
* ಕನ್ನಡತಿ ಸಾಧನೆಗೆ ಕೊಲ್ಲಿಯಲ್ಲಿ ಪ್ರಶಂಸೆ
* ಶ್ರೀಲಂಕಾ ರಾಯಭಾರಿಗೂ ಯೋಗ ತರಬೇತಿ
 

ಕೀರ್ತಿ ತೀರ್ಥಹಳ್ಳಿ

ಬೆಂಗಳೂರು(ಜೂ.21):  ಒಮಾನ್‌ ದೇಶದಲ್ಲಿ ನೆಲೆಸಿರುವ ಕನ್ನಡತಿ, ಯೋಗ ಪಟು ಹಾಗೂ ಕಲಾವಿದೆ ಡಾ. ಕವಿತಾ ರಾಮಕೃಷ್ಣ ಭಾರತೀಯ ಮೂಲದ ಯೋಗವನ್ನು ಮುಸ್ಲಿಂ ರಾಷ್ಟ್ರಗಳಿಗೂ ಪರಿಚಯಿಸುವ ಮಹತ್ತರ ಕೆಲಸ ಮಾಡುತ್ತಿರುವುದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಸೂರ‍್ಯ ನಮಸ್ಕಾರ ಮತ್ತು ವಿವಿಧ ಯೋಗಾಸನದ ಮೂಲಕ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆಂದು ಸಾರುತ್ತಾ ಒಮಾನ್‌ ರಾಜವಂಶಸ್ಥರೂ ಸೇರಿದಂತೆ ಹಲವರಿಗೆ ಕವಿತಾ ಯೋಗ ಕಲಿಸಿಕೊಡುತ್ತಿದ್ದಾರೆ.

ಕವಿತಾ ಅವರ ಯೋಗಾಭ್ಯಾಸದಿಂದ ಹಲವರು ಪ್ರೇರೇಪಿತರಾಗಿ ಯೋಗವನ್ನು ತಮ್ಮ ದೈನಂದಿನ ಚಟುವಟಿಕೆಯಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ರಾಯಭಾರಿ ಸಹ ಸೇರಿದ್ದಾರೆ. ಅಷ್ಟೇ ಅಲ್ಲದೆ, ಕವಿತಾ ಅವರು ಹೇಳಿಕೊಟ್ಟ ಸೂರ‍್ಯ ನಮಸ್ಕಾರ ವಿಧಾನವನ್ನು ನಿತ್ಯ ಪಾಲನೆ ಮಾಡುತ್ತಿರುವುದರಿಂದ ಕೋವಿಡ್‌ನಿಂದ ಬಹುಬೇಗ ಗುಣಮುಖರಾಗಿರುವುದಾಗಿ ಇಬ್ಬರು ಕೋವಿಡ್‌ ರೋಗಿಗಳು ಹೇಳಿಕೊಂಡಿದ್ದಾರೆ. ಮುಂಜಾನೆ ಸೂರ‍್ಯನಿಗೆ ಅಭಿಮುಖವಾಗಿ ನಿಂತು 12 ರೀತಿಯ ಆಸನ ಭಂಗಿಯನ್ನು ಮಾಡುವುದೇ ಸೂರ‍್ಯ ನಮಸ್ಕಾರ. ಇದರಿಂದ ಉಸಿರಾಟ ಪ್ರಕ್ರಿಯೆ ಸರಾಗವಾಗುತ್ತದೆ.

ವಿಶ್ವಕ್ಕೆ ಭಾರತ ಕೊಟ್ಟ ಅತ್ಯಂತ ಮಹತ್ವದ ಕೊಡುಗೆ ಯೋಗ: ಸಿಎಂ ಬಿಎಸ್‌ವೈ

ಒಮಾನ್‌ ರಾಜವಂಶಸ್ಥರ ಜತೆ ಯೋಗ:

ಕವಿತಾ ರಾಮಕೃಷ್ಣ ಅವರ ‘ತಮೋಘ್ನ’ ಹೆಸರಿನ ಎನ್‌ಜಿಒ ಒಮಾನ್‌ನ ಪ್ರಸಿದ್ಧ ಮಾನಸಿಕ ಆರೋಗ್ಯ ಕ್ಲಿನಿಕ್‌ ‘ವಿಸ್ಪರ್‌ ಆಫ್‌ ಸೆರೆನಿಟಿ’ ಜೊತೆ ಒಪ್ಪಂದ ಮಾಡಿಕೊಂಡಿದೆ. ಒಮಾನ್‌ ರಾಜವಂಶಸ್ಥರು ಸ್ಥಾಪಿಸಿರುವ ಈ ಕ್ಲಿನಿಕ್‌ ತಮೋಘ್ನ ಜೊತೆ ಸೇರಿ ಯೋಗ, ಕಲೆ ಮುಂತಾದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ.

ಕವಿತಾ ಯೋಗ ಮತ್ತು ಸಮಾಜ ಸೇವೆಗೆ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಅಮೆರಿಕದಲ್ಲಿರುವ ಯೋಗ ಯುನಿವರ್ಸಿಟಿ ಈ ಹಿಂದೆಯೇ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಇನ್ನು ಕವಿತಾ ರಚಿಸಿರುವ ‘ತಮೋಘ್ನ’ ಕೃತಿಯು ಯೋಗದ ಇತಿಹಾಸ, ಯೋಗ ತತ್ವಶಾಸ್ತ್ರದ ಇತಿಹಾಸ, ಸೂರ‍್ಯನಮಸ್ಕಾರದ ಪ್ರಯೋಜನದ ಮೇಲೆ ಬೆಳಕು ಚೆಲ್ಲಿದೆ.

ಕವಿತಾ ಅವರಿಂದ ಪ್ರೇರಣೆಗೊಂಡು ಸೂರ‍್ಯ ನಮಸ್ಕಾರ ಕಲಿತೆ. ಈ ಆಸನದಿಂದ ದೈಹಿಕ ಮತ್ತು ಮಾನಸಿಕ ಅನುಕೂಲಗಳಿವೆ. ಇದು ಅತ್ಯಂತ ಸರಳ ಯೋಗಾಸನ. ಇದರಿಂದ ಶ್ವಾಸಕೋಶಕ್ಕೆ ಮಾತ್ರವಲ್ಲದೆ ಜೀರ್ಣಾಂಗ ವ್ಯವಸ್ಥೆ, ಸ್ನಾಯು ಮತ್ತು ಕೀಲುಗಳೂ ಸಹ ಪ್ರಯೋಜನ ಪಡೆಯುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಇಂಥ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಕವಿತಾರಿಂದ ಯೋಗ ಕಲಿತವರು ಐದಾ ಬಿಂತ್‌ ಅಹ್ಮದ್‌ ಬುಸೈದಿ ತಿಳಿಸಿದ್ದಾರೆ. 

ಕೋವಿಡ್‌ ಸಂದರ್ಭದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಯೋಗ ಸಹಾಯಕ. ಕೊರೋನಾ ವೈರಸ್‌ ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುವುದರಿಂದ ಸೂರ‍್ಯ ನಮಸ್ಕಾರ ಅಥವಾ ಈ ರೀತಿಯ ಯೋಗಾಭ್ಯಾಸಗಳು ಬಹಳ ಪ್ರಸ್ತುತ. ಕವಿತಾ ಅವರಿಂದ ಯೋಗ ಕಲಿಯಲು ಆರಂಭಿಸಿದಾಗಿನಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಜೊತೆಗೆ ಚಯಾಪಚಯ ಕ್ರಿಯೆಯೂ ಉತ್ತಮವಾಗಿದೆ ಎಂದು ಒಮಾನ್‌ನ ಖ್ಯಾತ ಫ್ಯಾಷನ್‌ ಡಿಸೈನರ್‌ ಜಾಮ್‌ಜಾಮ್‌ ಹೇಳಿದ್ದಾರೆ. 
 

click me!