17 ಜಿಲ್ಲೆ ಇಂದು ಅನ್‌ಲಾಕ್‌: 54 ದಿನ ಬಳಿಕ ಸಾರಿಗೆ ಬಸ್ ಸಂಚಾರ!

By Kannadaprabha NewsFirst Published Jun 21, 2021, 7:41 AM IST
Highlights

* 17 ಜಿಲ್ಲೆ ಇಂದು ಅನ್‌ಲಾಕ್‌

* ವಹಿವಾಟು ಪುನಾರಂಭಕ್ಕೆ ಸಿದ್ಧತೆ

* 54 ದಿನ ಬಳಿಕ ಎಸ್ಸಾರ್ಟಿಸಿ ಬಸ್‌ ಸಂಚಾರ

ಬೆಂಗಳೂರು(ಜೂ.21): ಕೊರೋನಾ ಎರಡನೇ ಅಲೆಯಿಂದಾಗಿ ಸ್ತಬ್ಧಗೊಂಡಿದ್ದ ರಾಜ್ಯದ 17 ಜಿಲ್ಲೆಗಳು 54 ದಿನಗಳ ಬಳಿಕ ಸಹಜ ಚಟುವಟಿಕೆಯತ್ತ ಮರಳುತ್ತಿದ್ದು, ಸೋಮವಾರದಿಂದ ಅನ್ವಯವಾಗುವಂತೆ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಹುತೇಕ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಸಡಿಲಗೊಳಿಸಲಾಗಿದೆ.

ಇದರಿಂದ 54 ದಿನಗಳ ಬಳಿಕ ಬೆಂಗಳೂರು ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ಸುಗಳು ಸೇವೆಗೆ ಸಿದ್ಧವಾಗಿವೆ. 3000 ಕೆಎಸ್‌ಆರ್‌ಟಿಸಿ ಬಸ್ಸುಗಳು, 2000 ಈಶಾನ್ಯ ಸಾರಿಗೆ ಬಸ್‌ಗಳು, 1500 ವಾಯವ್ಯ ಸಾರಿಗೆ ಬಸ್‌ಗಳು 17 ಜಿಲ್ಲೆಗಳಿಗೆ ಸೀಮಿತವಾಗದೆ ರಾಜ್ಯಾದ್ಯಂತ (ಮೈಸೂರು, ದಕ್ಷಿಣ ಕನ್ನಡ ಹೊರತುಪಡಿಸಿ) ಶೇ.50ರಷ್ಟುಸೀಟು ಸಾಮರ್ಥ್ಯದೊಂದಿಗೆ ರಸ್ತೆಗಿಳಿಯುತ್ತಿವೆ. ಇದೇ ವೇಳೆ ಬೆಂಗಳೂರಿನಲ್ಲಿ 2 ಸಾವಿರ ಬಿಎಂಟಿಸಿ ಬಸ್ಸು, ಪ್ರತಿ ಐದು ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲು ಶೇ.50ರಷ್ಟುಪ್ರಯಾಣಿಕರೊಂದಿಗೆ ಸಂಚರಿಸಲು ಸಿದ್ಧವಾಗಿವೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಬೆಳಗ್ಗೆ 7ರಿಂದ 11 ಗಂಟೆ, ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಮಾತ್ರ ಸಂಚರಿಸಲಿದೆ.

ಬಸ್ಸುಗಳಲ್ಲಿ ಮೂವರು ಕೂರುವ ಆಸನದಲ್ಲಿ ಇಬ್ಬರು ಹಾಗೂ ಇಬ್ಬರು ಕೂರುವ ಆಸನದಲ್ಲಿ ಓರ್ವ ಪ್ರಯಾಣಿಕ (ಕಿಟಕಿ ಬದಿ) ಕುಳಿತು ಪ್ರಯಾಣಿಸಬೇಕು. ಪ್ರಯಾಣಿಕರು ಹಾಗೂ ಚಾಲನಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಕೊರೋನಾ ನಿಯಮಾವಳಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಮೆಟ್ರೋ, ಬಸ್ಸು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕೊರೋನಾ ಪರೀಕ್ಷೆ ಶಿಬಿರಗಳನ್ನು ಏರ್ಪಡಿಸಲಾಗಿದೆ.

ಹೋಟೆಲ್‌ಗೆ ಅವಕಾಶ:

17 ಜಿಲ್ಲೆಗಳಲ್ಲಿ 54 ದಿನಗಳ ಬಳಿಕ ಹೋಟೆಲ್‌, ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ (ಮದ್ಯ ಹೊರತುಪಡಿಸಿ) ಸೀಟಿಂಗ್‌ ವ್ಯವಸ್ಥೆಗೆ ಅನುಮತಿ ನೀಡಿದ್ದು, ಎಲ್ಲಾ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲಿಕರು ಸೋಮವಾರದಿಂದ ಶೇ.50ರಷ್ಟುಸೀಟಿಂಗ್‌ ಜತೆ ಸೇವೆ ನೀಡಲು ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆ 5ರಿಂದ ಸಂಜೆ 6 ಗಂಟೆವರೆಗೆ ಮದ್ಯ ಮಾರಾಟಕ್ಕೆ (ಪಾರ್ಸೆಲ್‌) ಅವಕಾಶ ನೀಡಲಾಗಿದೆ. ಉದ್ಯಾನಗಳು ಸಂಜೆ 5 ಗಂಟೆವರೆಗೆ ತೆರೆಯಲಿವೆ.

ಇದರ ಜತೆಗೆ ಚಿನ್ನಾಭರಣ ಮಳಿಗೆ, ಬಟ್ಟೆ, ಚಪ್ಪಲಿ ಅಂಗಡಿ, ಜಿಮ್‌ ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳಿಗೂ ಬೆಳಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ವ್ಯಾಪಾರಿಗಳ ಆರ್ಥಿಕ ಚಟುವಟಿಕೆಗೆ ಮತ್ತೆ ಜೀವ ಬಂದಂತಾಗಿದೆ.

ಈ ಎಲ್ಲಾ ಚಟುವಟಿಕೆ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿಬಿಎಂಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್‌ ಹಾಗೂ ಧಾರವಾಡ (ಭಾನುವಾರದ ಸೇರ್ಪಡೆ) ಸೇರಿದಂತೆ 17 ಜಿಲ್ಲೆಗಳಿವೆ ಅನ್ವಯಿಸಲಿದೆ.

12 ಜಿಲ್ಲೆಗಳಲ್ಲಿ ಮಧ್ಯಾಹ್ನ 2ರವರೆಗೆ ಚಟುವಟಿಕೆ:

ಶೇ.5ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 12 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ಜೂ.11ರಂದು ಹೊರಡಿಸಿರುವ ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ. ಇದರಂತೆ, ದಿನಸಿ, ತರಕಾರಿ, ಮಾಂಸ, ಡೈರಿ ಉತ್ಪನ್ನಗಳು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಮಾರಾಟ ಮಾಡಲು ಅನುಮತಿ ಸಿಗಲಿದೆ. ಉದ್ಯಾನಗಳು ಬೆಳಗ್ಗೆ 10 ಗಂಟೆವರೆಗೆ ತೆರೆಯಲಿವೆ.

ಇನ್ನು, ಶೇ.10ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧ ಮುಂದುವರೆಯಲಿದ್ದು, ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಹೀಗಾಗಿ ಮೈಸೂರಿನಲ್ಲಿ ಸಾರ್ವಜನಿಕ ಸಾರಿಗೆ ಲಭ್ಯವಿರುವುದಿಲ್ಲ. ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತವೂ ಸಾರ್ವಜನಿಕ ಸಾರಿಗೆ ನಿರ್ಬಂಧಿಸಿರುವುದರಿಂದ ಎರಡೂ ಜಿಲ್ಲೆಗಳಲ್ಲೂ ಸಾರ್ವಜನಿಕ ಸಾರಿಗೆ ಅಲಭ್ಯವಾಗಲಿದೆ.

ರಾತ್ರಿ ಕಫä್ರ್ಯ, ವಾರಾಂತ್ಯ ಕಫä್ರ್ಯ ಮುಂದುವರಿಕೆ:

ರಾಜ್ಯವ್ಯಾಪಿ ಅನ್ವಯವಾಗುವಂತೆ ಪ್ರತಿ ದಿನ ರಾತ್ರಿ ಕಫ್ರ್ಯೂ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಇರಲಿದೆ. ವಾರಾಂತ್ಯದ ಕಫ್ರ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ.

17 ಜಿಲ್ಲೆಗಳಲ್ಲಿ ಯಾವುದಕ್ಕೆ ಅವಕಾಶ?

- ದಿನಸಿ ಅಂಗಡಿ ಸೇರಿ ಎಲ್ಲ ಅಂಗಡಿಗಳಿಗೂ ಬೆಳಗ್ಗೆ 6 ಗಂಟೆಯಿಂದ ಸಂಜೆ 5ರವರೆಗೆ ಅವಕಾಶ

- ಕೈಗಾರಿಕೆಗಳು, ಉದ್ಯಮ ಮತ್ತು ಸಂಬಂಧಿಸಿದ ಸಂಸ್ಥೆಗಳಲ್ಲಿ ಶೇ.50 ನೌಕರರ ಮಿತಿಯಲ್ಲಿ ಕೆಲಸ

- ಎಲ್ಲ ಹೋಟೆಲ್‌, ರೆಸ್ಟೋರೆಂಟ್‌, ಬಾರ್‌, ಕ್ಲಬ್‌ಗಳಿಗೆ ಅವಕಾಶ (ಮದ್ಯ ಪಾರ್ಸೆಲ್‌ ಮಾತ್ರ)

- ಇವುಗಳು ಬೆಳಗ್ಗೆ 6 ರಿಂದ ಸಂಜೆ 5 ಗಂಟೆವರೆಗೆ ಶೇ.50ರಷ್ಟುಸೀಟಿಂಗ್‌ನೊಂದಿಗೆ ಓಪನ್‌

- ಪಬ್‌ಗಳಿಗೆ ಅನುಮತಿ ಇಲ್ಲ. ಲಾಜ್ಡ್‌, ರೆಸಾರ್ಟ್‌ಗಳಿಗೆ ಶೇ.50 ಮಿತಿಯೊಂದಿಗೆ ಅವಕಾಶ.

- ಎಲ್ಲ ನಿರ್ಮಾಣ ಚಟುವಟಿಕೆ, ರಿಪೇರಿ ಕೆಲಸ, ಸಂಬಂಧಿತ ಅಂಗಡಿಗೆ ಅನುಮತಿ

- ಪಾರ್ಕ್, ಎ.ಸಿ. ರಹಿತ ಜಿಮ್‌ಗಳಿಗೆ ಬೆಳಗ್ಗೆ 5 ರಿಂದ ಸಂಜೆ 5ರವರೆಗೆ ಅನುಮತಿ

- ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ

- ಬಸ್‌ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ

- ಹೊರಾಂಗಣ ಕ್ರೀಡೆಗಳಿಗೆ ವೀಕ್ಷಕರಿಲ್ಲದೇ ಅನುಮತಿ

- ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50 ರಷ್ಟುಸಾಮರ್ಥ್ಯದೊಂದಿಗೆ ಕೆಲಸ

12 ಜಿಲ್ಲೆಗಳಲ್ಲಿ ಸೀಮಿತ ಅನುಮತಿ

- ಶೇ.5 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 12 ಜಿಲ್ಲೆಗಳಲ್ಲಿ ಅನ್‌ಲಾಕ್‌-1 ನಿರ್ಬಂಧ

- ಮಧ್ಯಾಹ್ನ 2 ಗಂಟೆವರೆಗೆ ದಿನಸಿ, ತರಕಾರಿ, ಮಾಂಸ, ಡೈರಿ ಉತ್ಪನ್ನಗಳಿಗೆ ಮಾತ್ರ ಅವಕಾಶ

- ಶೇ.10 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧ

ಯಾವುದಕ್ಕೆ ನಿರ್ಬಂಧ?

- ಮಾಲ್‌

- ಸಿನಿಮಾ ಮಂದಿರ

- ದೇವಾಲಯಗಳು/ಚಚ್‌ರ್‍/ಮಸೀದಿ

- ರಾಜಕೀಯ ಕಾರ್ಯಕ್ರಮ

- ಸಭೆ-ಸಮಾರಂಭ

- ಪಬ್‌

ನಿರ್ಬಂಧ ಸಡಿಲ

- ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಎಲ್ಲ ಅಂಗಡಿಗಳಿಗೆ ಅನುಮತಿ

- ಶೇ.50 ಸೀಟು ಸಾಮರ್ಥ್ಯದಲ್ಲಿ ಬಸ್ಸು, ಮೆಟ್ರೋ ಸಂಚಾರ ಆರಂಭ

- ಶೇ.50 ಸೀಟು ಸಾಮರ್ಥ್ಯದಲ್ಲಿ ಹೋಟೆಲ್‌ಗಳೂ ಶುರು

- ಕೊರೋನಾ ನಿಯಂತ್ರಣಕ್ಕೆ ಬಾರದ 12 ಜಿಲ್ಲೆಗಳಲ್ಲಿ ಅನ್‌ಲಾಕ್‌-1 ಮುಂದುವರಿಕೆ

- ಮೈಸೂರು ಜಿಲ್ಲೆಯಲ್ಲಿ ಸೆಮಿ ಲಾಕ್‌ಡೌನ್‌ ಯಥಾಸ್ಥಿತಿ

\

click me!