ಮಾದರಿ ನಗರಕ್ಕೆ ಸುಧಾಕರ್ ಕಾರಣ!| ಪೂರ್ವಭಾವಿ, ಸಂದರ್ಭೋಚಿತ ವಿಧಾನದಿಂದ ಕೊರೋನಾ ನಿಯಂತ್ರಣ| ಆಕ್ಟೋಬಜ್ ಸಮೀಕ್ಷೆ
ಬೆಂಗಳೂರು(ಮೇ.27): ಕೊರೋನಾ ಸಮಸ್ಯೆಗಳ ನಿಯಂತ್ರಿಸುವಲ್ಲಿ ಇಡೀ ದೇಶಕ್ಕೆ ಮಾದರಿಯಾದ ನಾಲ್ಕು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆಯಲು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಅವರು ಕೈಗೊಂಡ ಪೂರ್ವಭಾವಿ ಹಾಗೂ ಸಂದರ್ಭೋಚಿತ ಕಾರ್ಯ ವಿಧಾನಗಳೇ ಕಾರಣ ಎಂದು ಆಕ್ಟೋಬಜ್ ಅನಾಲಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ಸಮೀಕ್ಷೆ ಹೇಳಿದೆ.
ಬೆಂಗಳೂರು ಮಾದರಿ ನಗರವೆಂದು ಮೈಮರೆಯದಿರಿ: ತಜ್ಞರ ಎಚ್ಚರಿಕೆ
ಬೆಂಗಳೂರಿನಲ್ಲಿ ಬಿಬಿಎಂಪಿ ಮೂಲಕ ದೇಶದಲ್ಲೇ ಪ್ರಥಮ ಎನ್ನಬಹುದಾದ ಸುಸಜ್ಜಿತ ವಾರ್ ರೂಂ ಸ್ಥಾಪಿಸಲಾಗಿದ್ದು, ಇದು ಕೊರೋನಾ ನಿಯಂತ್ರಿಸಲು 24 ಗಂಟೆಯೂ ಪ್ರಮುಖ ಅಸ್ತ್ರವಾಗಿ ಕಾರ‍್ಯನಿರ್ವಹಿಸುತ್ತಿದೆ. ಈ ಕೋವಿಡ್ ವಾರ್ ರೂಂನ ಉಸ್ತುವಾರಿ ಹೊತ್ತಿರುವ ಸಚಿವ ಡಾ.ಕೆ.ಸುಧಾಕರ್ ಅವರು, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಾಜ್ಯಾದ್ಯಂತ ಅತಿ ಕಡಿಮೆ ಸಮಯದಲ್ಲಿ 1.6 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಆನ್‌ಲೈನ್‌ನಲ್ಲೇ ಕೋವಿಡ್ ಚಿಕಿತ್ಸಾ ತರಬೇತಿ ನೀಡುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ, ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ಪರಸ್ಪರ ಸಹಕಾರದಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತಿದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಅಲ್ಲದೆ, ದೇಶದಲ್ಲೇ ಪ್ರಥಮ ಟೆಲಿ ಐಸಿಯು ಸ್ಥಾಪಿಸಿ ರಾಜ್ಯದ ಯಾವುದೇ ಆಸ್ಪತ್ರೆಯ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಸೋಂಕಿನ ಅಪಾಯವಿಲ್ಲದೆ ತಜ್ಞ ವೈದ್ಯರುಗಳ ಸಲಹೆ ಪಡೆಯಲು ಅವಕಾಶ ನೀಡಿದ್ದು ಮರಣ ಪ್ರಮಾಣ ಕಡಿಮೆ ಮಾಡಲು ಹಾಗೂ ಹೆಚ್ಚು ಜನರು ಗುಣಮುಖರಾಗಲು ಮಹತ್ವದ ಪಾತ್ರವಹಿಸಿದೆ. ಸ್ವತಃ ವೈದ್ಯರಾಗಿರುವ ಡಾ.ಸುಧಾಕರ್ ಅವರು, ಟ್ರೀಟ್, ಟ್ರ್ಯಾಕ್, ಟೆಸ್ಟ್ ಆ್ಯಂಡ್ ಟ್ರೀಟ್ ಎಂಬ 4ಟಿ ಸೂತ್ರಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ಫೆಬ್ರವರಿಯಲ್ಲಿದ್ದ ಕೇವಲ 2 ಪ್ರಯೋಗಾಲಯಗಳ ಸಂಖ್ಯೆ ಮೇ ಅಂತ್ಯದ ವೇಳೆಗೆ 60ರ ಗುರಿ ಮುಟ್ಟುವ ಹಾದಿಯಲ್ಲಿದೆ. ಇದರಿಂದ ರಾಜ್ಯದ ಸರಾಸರಿ ಪರೀಕ್ಷಾ ಸಮರ್ಥ್ಯ ಪ್ರತಿ 10 ಲಕ್ಷ ಜನರಿಗೆ 3 ಸಾವಿರದಷ್ಟಿದ್ದು, ದೇಶದಲ್ಲೇ 3ನೇ ಸ್ಥಾನದಲ್ಲಿದೆ.
ದೇಶಕ್ಕೆ ಮಾದರಿಯಾದ ಸಿಲಿಕಾನ್ ಸಿಟಿ: ನಮ್ಮ ಬೆಂಗಳೂರು ನಮ್ಮ ಹೆಮ್ಮೆ...!
ಜತೆಗೆ ಇಲ್ಲಿನ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಸಚ್ಚಿದಾನಂದ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿದ ಏಕರೂಪ ಚಿಕಿತ್ಸಾ ಪದ್ಧತಿಯಿಂದ ಮರಣ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೈಗೊಳ್ಳುತ್ತಿರುವ ಚಿಕಿತ್ಸಾ ಪದ್ಧತಿ, ವೆಂಟಿಲೇಟರ್ ಉಪಯೋಗ ಇತರೆ ಆಸ್ಪತ್ರೆಗಳಿಗೆ ಮಾದರಿ ಎಂದು ಹೇಳಿತ್ತು.