Asianet Suvarna News Asianet Suvarna News

ಬೆಂಗಳೂರು ಮಾದರಿ ನಗರವೆಂದು ಮೈಮರೆಯದಿರಿ: ತಜ್ಞರ ಎಚ್ಚರಿಕೆ

ಬೆಂಗಳೂರು ಮಾದರಿ ನಗರವೆಂದು ಮೈಮರೆಯದಿರಿ: ತಜ್ಞರ ಎಚ್ಚರಿಕೆ| ಮುಂದಿನ 30ರಿಂದ 45 ದಿನಗಳು ನಮಗೆ ಹೆಚ್ಚಿನ ಸವಾಲು|ರಾರ‍ಯಂಡಮ್‌ ಆಗಿ ಸೋಂಕು ಪತ್ತೆ ಮಾಡಿ

Medical Experts Warns Bengaluru People Not To Be Careless
Author
Bangalore, First Published May 26, 2020, 10:22 AM IST

 ಬೆಂಗಳೂರು(ಮೇ.26): ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಿಗಾಗಿ ಬೆಂಗಳೂರು ನಗರ ಇದೀಗ ದೇಶದಲ್ಲಿ ಮಾದರಿ ನಗರ ಎಂದು ಕೇಂದ್ರ ಸರ್ಕಾರ ಗುರುತಿಸಿರುವುದು ಸಂತೋಷ ವಿಚಾರವಾಗಿದ್ದರೂ ಇನ್ನು ಕೊರೋನಾ ಸೋಂಕಿನ ಹರಡುವಿಕೆ ನಿಂತಿಲ್ಲ. ಹಾಗಾಗಿ, ಯಾವುದೇ ಕಾರಣಕ್ಕೂ ಮೈಮರೆಯದೇ ಇನ್ನಷ್ಟುಜಾಗೃತಿ ವಹಿಸುವಂತೆ ತಜ್ಞರಾದ ಡಾ.ಸಿ.ಎನ್‌.ಮಂಜುನಾಥ್‌, ಡಾ.ದೇವಿಶೆಟ್ಟಿ ಸೇರಿದಂತೆ ಇತರೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಸೋಂಕಿನ ಭೀತಿಯಿಂದ ಎಲ್ಲವನ್ನೂ ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಿಕೊಂಡು ಮುಂದುವರೆಯುವುದಕ್ಕೆ ಸಾಧ್ಯವಿಲ್ಲ. ಕೊರೋನಾ ಸೋಂಕಿನ ಭಾದೆ ಇನ್ನೂ 3ರಿಂದ 6 ತಿಂಗಳು ಇರಲಿದೆ. ಇನ್ನು 30ರಿಂದ 45 ದಿನ ನಾವು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ. ಇದೀಗ ಹೊರ ರಾಜ್ಯ ಮತ್ತು ಹೊರ ರಾಷ್ಟ್ರದಿಂದ ಬೆಂಗಳೂರಿಗೆ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಹಾಗಾಗಿ, ಮತ್ತಷ್ಟುಎಚ್ಚರಿಕೆ ವಹಿಸಬೇಕು. ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಸ್ಥಳದಲ್ಲಿ, ಸರ್ಕಾರಿ ಮತ್ತು ಖಾಸಗಿ ಕಚೇರಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು, ಸಭೆ ಸಮಾರಂಭ ನಡೆಸದಂತೆ ಕ್ರಮ ವಹಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಜೊತೆಗೆ ಕೊರೋನಾ ಸೋಂಕು ದೃಢಪಡದ ವಾರ್ಡ್‌ ಅಥವಾ ಪ್ರದೇಶಗಳಲ್ಲಿಯೂ ರಾರ‍ಯಂಡಮ್‌ ಪದ್ಧತಿಯಲ್ಲಿ ಸೋಂಕು ಪತ್ತೆ ಮಾಡುವ ಕಾರ್ಯವನ್ನು ನಡೆಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶಕ್ಕೆ ಮಾದರಿಯಾದ ಸಿಲಿಕಾನ್ ಸಿಟಿ: ನಮ್ಮ ಬೆಂಗಳೂರು ನಮ್ಮ ಹೆಮ್ಮೆ...!

ಈ ಲೋಪ ಸರಿಪಡಿಸಿಕೊಳ್ಳಬೇಕು:

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಈವರೆಗೆ ಕೇವಲ 26 ಸಾವಿರ ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಪ್ರತಿ 10 ಲಕ್ಷ ಮಂದಿಯಲ್ಲಿ 2,667 ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ. ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸೋಂಕು ಪತ್ತೆ ಪರೀಕ್ಷೆ ನಡೆಸಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಯಬೇಕಿದೆ.

ಇನ್ನು ಬೆಂಗಳೂರು ಬೇರೆ ಜಿಲ್ಲೆಗಳಿಗಿಂತ ಹೆಚ್ಚಿನ ಮರಣ ದರ ಹೊಂದಿದ್ದು, ಸೋಂಕಿತರ ಪೈಕಿ ಶೇ.3.8ರಷ್ಟುಮಂದಿ ಮರಣ ಹೊಂದಿದ್ದಾರೆ. ಇನ್ನು ಸಮುದಾಯಕ್ಕೆ ಸೋಂಕು ಹರಡಿದ ಭೀತಿ ಇರುವ ಪಾದರಾಯನಪುರ ಮತ್ತು ಮಂಗಮ್ಮಪಾಳ್ಯ ಪ್ರದೇಶದಲ್ಲಿ ಸೋಂಕು ಪರೀಕ್ಷಾ ಕಿಟ್‌ನ ಕೊರತೆಯಿದೆ. ತ್ವರಿತವಾಗಿ ಪರೀಕ್ಷೆ ನಡೆಸುವುದರಿಂದ ಸೋಂಕು ಹರಡುವಿಕೆ ನಿಯಂತ್ರಿಸಬಹುದಾಗಿದೆ ಎಂದಿದ್ದಾರೆ.

ಕಂಟೈನ್ಮೆಂಟ್‌ ಪ್ರದೇಶದಲ್ಲಿ ಸರಿಯಾದ ಭದ್ರತೆ ನಿಗಾ ವಹಿಸುವುದರಲ್ಲಿ ಲೋಪ ದೋಷಗಳಿವೆ. ಕಂಟೈನ್ಮೆಂಟ್‌ ಪ್ರದೇಶದಲ್ಲಿ ಜನ ಸಂಚಾರ ಮಾಡುತ್ತಿದ್ದಾರೆ. ಅಕ್ಕ ಪಕ್ಕದ ವಾರ್ಡ್‌ಗಳಿಗೆ ಹೋಗುತ್ತಿರುವ ಬಗ್ಗೆ ವರದಿಯಾಗಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Medical Experts Warns Bengaluru People Not To Be Careless

ಸೋಂಕು ನಿಯಂತ್ರಣಕ್ಕೆ ಮಾದರಿಯಾದ ಅಂಶಗಳು

ದೇಶದಲ್ಲಿ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುತ್ತಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಮಿಸುವ ವಿದೇಶಿ ಪ್ರಯಾಣಿಕರ ಆರೋಗ್ಯ ತಪಾಸಣೆ ಆರಂಭಿಸಲಾಯಿತು. ಅವರನ್ನು ತಕ್ಷಣ ಹೋಮ್‌ ಕ್ವಾರಂಟೈನ್‌ ಮಾಡಲಾಯಿತು. ಇದರಿಂದ ಸೋಂಕು ಇತರರಿಗೆ ಹರಡುವಿಕೆ ತಪ್ಪಿತು.

ಇನ್ನು ಜನರಲ್ಲಿ ಜಾಗೃತಿ ಮೂಡಿಸಿ ಥರ್ಮಲ್‌ ಸ್ಕಾ್ಯನಿಂಗ್‌, ಆರೋಗ್ಯ ತಪಾಸಣೆ ಆರಂಭಿಸಲಾಯಿತು. ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಗುರುತಿಸಲಾಯಿತು. ದೇಶದಲ್ಲಿ ಲಾಕ್‌ಡೌನ್‌ ಘೋಷಣೆಗೂ ಮುನ್ನವೇ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಜಾರಿ ಆಗಿತ್ತು. ಜೊತೆಗೆ ದೇಶದ ಇತರೆ ರಾಜ್ಯ ಮತ್ತು ನಗರಗಳಿಗಿಂತ ಕಠಿಣ ಲಾಕ್‌ಡೌನ್‌ ಅನ್ನು ಬೆಂಗಳೂರಿನಲ್ಲಿ ಮಾಡಲಾಯಿತು.

ಶೀಘ್ರ ಸೋಂಕು ಪತ್ತೆಗೆ ನಗರದಲ್ಲಿ 31 ಜ್ವರ ತಪಾಸಣಾ ಶಿಬಿರ ಆರಂಭ. ಹೋಟೆಲ್‌, ಪಿಜಿ, ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘಗಳಿಗೆ, ಕೈಗಾರಿಕೆಗಳಿಗೆ, ಆಟದ ಮೈದಾನ ಮತ್ತು ಪಾರ್ಕ್ಗಳಿಗೆ ಕಾಲಕಾಲಕ್ಕೆ ಸೂಕ್ತ ಮಾರ್ಗಸೂಚಿ ನೀಡಲಾಯಿತು. ಸೋಂಕಿತ ಪ್ರದೇಶದಲ್ಲಿ ರಾರ‍ಯಂಡಮ್‌ ಪದ್ಧತಿಯಲ್ಲಿ ಕೊರೋನಾ ಸೋಂಕು ಪರೀಕ್ಷೆ, ಆರೋಗ್ಯ ಸಮೀಕ್ಷೆ, ಕಾರ್ಮಿಕರ ಆರೋಗ್ಯ ತಪಾಸಣೆಗೆ ಮೊಬೈಲ್‌ ಫೀವರ್‌ ಕ್ಲಿನಿಕ್‌, ದೇಶದಲ್ಲಿ ಮಾದರಿ ಕೊರೋನಾ ವಾರ್‌ ರೂಂ ಸ್ಥಾಪನೆ, ಸೋಂಕಿತ ಪ್ರದೇಶದ ಸೀಲ್‌ಡೌನ್‌/ಕಂಟೈನ್ಮೆಂಟ್‌, ಸೋಂಕು ನಿವಾರಕ ದ್ರಾವಣ ಸಿಂಪಡಣೆ, ಸೋಂಕಿತ ಸಂಪರ್ಕಿತರ ಪತ್ತೆ ಮಾಡಿ ಕ್ವಾರಂಟೈನನ್ನು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ ಸೋಂಕು ನಿಯಂತ್ರಣ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios