ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮೈಲಾರ ದೇವರ ಗೊರವಯ್ಯ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಅವರ ನಂತರ ಪರಮೇಶ್ವರ್ ಸಿಎಂ ಆಗುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ತುಮಕೂರು (ಮಾ.26): ರಾಜ್ಯದಲ್ಲಿ ಇದೀಗ ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜಿ. ಪರಮೇಶ್ವರ ಅವರು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮೈಲಾರ ದೇವರ ಗೊರವಯ್ಯ ಅವರು ಭವಿಷ್ಯ ನುಡಿಸಿದ್ದಾರೆ.
ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಅವಣದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಭೇಟಿ ನೀಡಿದ ಮೈಲಾರ ದೇವರ ಗೊರವಯ್ಯ ಅವರು ಆಕಸ್ಮಿಕವಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಕಚೇರಿಯ ಆಡಳಿತ ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ಪರಮೇಶ್ವರ ಅವರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಹೇಳಿದ್ದಾರೆ. ಈ ವೇಳೆ ಗೃಹ ಸಚಿವ ಪರಮೇಶ್ವರ ಅವರು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿ ಆಶೀರ್ವಾದ ಮಾಡಿದ್ದಾರೆ. ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ನಾಗಣ್ಣ ಅವರಿಗೆ ಕಾರ್ಣಿಕ ಭವಿಷ್ಯ ನುಡಿದು ಭಂಡಾರವನ್ನು ನೀಡಿ ಆಶೀರ್ವಾದ ಮಾಡಿದ್ದಾರೆ.
ರಾಜ್ಯದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ಮಾಡುತ್ತಿದ್ದು, 2.5 ವರ್ಷ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಮಾತನ್ನು ಅಲ್ಲಗಳೆದು ತಾನೇ 5 ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸೀಟಿನ ಮೇಲೆ ಕಣ್ಣಿಟ್ಟಿದ್ದು, ಇದನ್ನು ಪಡೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಲೇ ಇದ್ದಾರೆ. ಇದಕ್ಕಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ, ಪೂಜೆ-ಪುನಸ್ಕಾರ, ಹೋಮ-ಹವನ ಹಾಗೂ ಯಜ್ಞಗಳನ್ನೂ ಮಾಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಡಿಕೆಶಿಗೆ ಸಿದ್ದರಾಮಯ್ಯ ಬೆಂಬಲಿಗರಾದ ಡಾ.ಜಿ. ಪರಮೇಶ್ವರ, ಸತೀಶ್ ಜಾರಕಿಹೊಳಿ, ರಾಜಣ್ಣ ಎಲ್ಲರೂ ಸಿಎಂ ಸೀಟು ಖಾಲಿ ಇಲ್ಲ ಎಂದು ತಿರುಗೇಟು ನೀಡಿ, ಗುಪ್ತವಾಗಿ ದಲಿತ ನಾಯಕರ ಸಭೆಯನ್ನೂ ನಡೆಸಿದ್ದರು.
ಇದನ್ನೂ ಓದಿ: ಶತ್ರುವಿನ ಶತ್ರು ಕುಮಾರಸ್ವಾಮಿ, ದೇವೇಗೌಡರನ್ನು ಮಿತ್ರರಂತೆ ಭೇಟಿ ಮಾಡಿ ಸಚಿವ ಸತೀಶ್ ಜಾರಕಿಹೊಳಿ!
ಇದೀಗ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣು ಹಾಕಿದ್ದ ಡಿ.ಕೆ. ಶಿವಕುಮಾರ್ ಬಳಿ ಇರುವ ಕೆಪಿಸಿಸಿ ಅಧ್ಯಕ್ಷ ಕುರ್ಚಿ ಕಿತ್ತುಕೊಳ್ಳಲು ಸತೀಶ್ ಜಾರಕಿಹೊಳಿ ತಂತ್ರ ರೂಪಿಸಿದ್ದರು. ಆದರೆ, ದೀಗ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಲ್ಲರೂ ಸೈಲೆಂಟ್ ಆಗಿದ್ದಾರೆ. ಸ್ನೇಹಿತ ರಾಜಣ್ಣನನ್ನು ಉಳಿಸಲು ಸತೀಶ್ ಜಾರಕಿಹೊಳಿ ದೆಹಲಿಗೆ ಹೋಗಿ, ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ.
ಆದರೆ, ರಾಜ್ಯದಲ್ಲಿ ಹನಿಟ್ರ್ಯಾಪ್ ಬಗ್ಗೆ ಗೃಹ ಸಚಿವ ಪರಮೇಶ್ವರ್ ತನಿಖೆ ಮಾಡಿಸಲು ಮುಂದಾಗಿದ್ದಾರೆ. ಇದರ ನಡುವೆ ಒಂದು ವೇಳೆ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದರೆ ಕೆಪಿಸಿಸಿ ಅಧ್ಯಕ್ಷನಾಗಿ ತಾನು ಹಿರಿಯನಿದ್ದು, ತನಗೆ ಸಿಎಂ ಕುರ್ಚಿ ಕೊಡಬೇಕು ಎಂದು ಪಟ್ಟು ಹಿಡಿದು ಗಿಟ್ಟಿಕೊಳ್ಳಬಹುದು ಎಂಬುದನ್ನು ಕೂಡ ಅಲ್ಲಗಳೆಯುವಂತಿಲ್ಲ. ಆಗ ಮೈಲಾರ ದೇವರ ಗೊರವಯ್ಯ ನುಡಿದ ಕಾರ್ಣಿಕ ಭವಿಷ್ಯ ನಿಜವಾಗಬಹುದು. ಇಬ್ಬರ ಜಗಳ ಮೂರನೆಯವರಿಗೆ ಲಾಭವಾದಂತೆ ಆಗಬಹುದು.
ಇದನ್ನೂ ಓದಿ: ಹೈಕಮಾಂಡ್ ಒತ್ತಡಕ್ಕೆ ಮಣಿದರಾ ರಾಜಣ್ಣ?: ಕುತೂಹಲ ಹುಟ್ಟಿಸಿದ ಸಚಿವರ ನಡೆ