* ಅಂಬೇಡ್ಕರ್‌ಗೆ ಅವಮಾನ, ಜಡ್ಜ್ ವಿರುದ್ಧ ಪ್ರತಿಭಟನೆ
* ರಾಯಚೂರಲ್ಲಿ ಪ್ರತಿಭಟನಾಕಾರರ ಮೇಲೆ ಹೆಜ್ಜೇನು ದಾಳಿ
* ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ 2 ಗುಂಪಿನ ಜಟಾಪಟಿ
*ಪ್ರತಿಭಟನೆ ನಡೆಸುವ ವಿಚಾರಕ್ಕೆ ಪಿ.ಜಿ.- ಎಬಿವಿಪಿ ವಿದ್ಯಾರ್ಥಿಗಳ ಘರ್ಷಣೆ
ಬೆಂಗಳೂರು, ಬೆಳಗಾವಿ(ಫೆ. 01) ಗಣರಾಜ್ಯೋತ್ಸವ (Republic Day) ದಿನಾಚರಣೆ ಸಂದರ್ಭದಲ್ಲಿ ರಾಯಚೂರು(Raichur) ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಡಾ.ಬಿ.ಆರ್.ಅಂಬೇಡ್ಕರ್ (Dr. Ambedkar) ಅವರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಸೋಮವಾರ ಬೆಳಗಾವಿ ಸೇರಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.
ಬೆಳಗಾವಿ (Belagavi) ನಗರ, ಹುಕ್ಕೇರಿ, ಬಾಗಲಕೋಟೆ ನಗರ, ಜಮಖಂಡಿ, ಬೀಳಗಿ, ವಿಜಯಪುರ ಜಿಲ್ಲೆಯ ಇಂಡಿ, ತಾಳಿಕೋಟೆ, ಮುದ್ದೇಬಿಹಾಳ, ಕೊಪ್ಪಳ, ಗದಗದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಗಳು ನ್ಯಾಯಾಧೀಶರನ್ನು ವಜಾ ಮಾಡುವಂತೆ ಆಗ್ರಹಿಸಿದವು. ಇಲ್ಲವಾದರೆ ತೀವ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದವು. ಈ ಮಧ್ಯೆ, ಘಟನೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಫೆ.4ರಂದು ಗದಗ ನಗರ ಬಂದ್‌ಗೆ ಕರೆ ನೀಡಲಾಗಿದೆ.
undefined
ಹೆಜ್ಜೇನು ದಾಳಿ, ಗಾಯ: ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ತಹಸೀಲ್ದಾರ್ ಕಚೇರಿ ಬಳಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದೆ. ಈ ವೇಳೆ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಹೆಜ್ಜೇನುಗಳಿಂದ ರಕ್ಷಿಸಿಕೊಳ್ಳಲು ಪ್ರತಿಭಟನಾನಿರತರು, ಪೊಲೀಸರು ದಿಕ್ಕಾಪಾಲಾಗಿ ಓಡುವಂತಾಯಿತು.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರು ಬಿಡುಗಡೆ ಮಾಡಿದ್ದ ಹೇಳಿಕೆ
ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ 2 ಗುಂಪಿನ ಜಟಾಪಟಿ: ಯಾರು ಮೊದಲು ಪ್ರತಿಭಟನೆ ನಡೆಸಬೇಕು ಎಂಬ ವಿಚಾರದ ಬಗ್ಗೆ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾತಿನ ಚಕಮಕಿ, ಘರ್ಷಣೆ ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ನಡೆದಿದೆ. ಈ ವೇಳೆ ಓರ್ವ ವಿದ್ಯಾರ್ಥಿನಿ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ, ಉಳಿದಂತೆ 10 ಮಂದಿಗೆ ಸಣ್ಣ ಪುಟ್ಟಗಾಯಗಳಾಗಿದೆ.
ಲಾಠಿ ಪ್ರಹಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಲೇ ಸ್ಪಷ್ಟನೆ ನೀಡಿರುವ ಪೊಲೀಸರು, ಪರಿಸ್ಥಿತಿ ನಿಭಾಯಿಸಲು ಲಘು ಲಾಠಿ ಪ್ರಹಾರ ನಡೆಸಲಾಗಿದೆ. ಆದರೆ, ರಕ್ತ ಗಾಯವಾಗುವಷ್ಟುಯಾರಿಗೂ ಹೊಡೆದಿಲ್ಲ. ಗಾಯಗೊಂಡ ಯುವತಿ ಪ್ರತಿಭಟನೆ ವೇಳೆ ತಳ್ಳಾಟದಿಂದ ರಸ್ತೆಯಲ್ಲಿ ಬಿದ್ದು, ಅದರಿಂದ ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ಗಲಾಟೆ?: ಬೆಂಗಳೂರು ವಿವಿಯ ಸಂಶೋಧನಾ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಒಕ್ಕೂಟವು ರಾಯಚೂರಿನಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ ತೆಗೆದು ಅವಮಾನ ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿವಿಯ ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿತ್ತು. ಇದೇ ವೇಳೆ ಅದೇ ಸ್ಥಳಕ್ಕೆ ಬಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಮತ್ತೊಂದು ಗುಂಪು, ವಿವಿಯ ಶೈಕ್ಷಣಿಕ ಮತ್ತು ಪರೀಕ್ಷಾ ವಿಭಾಗದಲ್ಲಿನ ಅವ್ಯವಸ್ಥೆ, ವಿಳಂಬ, ಅಕ್ರಮಗಳ ವಿರುದ್ಧ ಎಬಿವಿಪಿ ಧ್ವಜ ಹಿಡಿದು ಪ್ರತಿಭಟನೆಗೆ ಮುಂದಾಯ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮತ್ತೊಂದು ಗುಂಪು ಬೆಂಗಳೂರು ವಿವಿಯ ಮೂಲ ವಿದ್ಯಾರ್ಥಿಗಳು ನಾವು. ವಿವಿಯ ಒಳಗೆ ಯಾವುದೇ ಬಾವುಟಗಳು ಬರುವುದು ಬೇಡ ಎಂದು ಹೇಳಿತು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ಮುಟ್ಟಿದೆ.
ಪೊಲೀಸರ ಮಧ್ಯಪ್ರವೇಶ: ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಉಭಯ ಗುಂಪುಗಳ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಅಲ್ಲದೆ, ಎಬಿವಿಪಿ ವಿದ್ಯಾರ್ಥಿಗಳನ್ನು ಆಡಳಿತ ಕಚೇರಿ ಮುಂಭಾಗದ ಗೇಟ್‌ನಿಂದ ಹೊರಗೆ ಪ್ರತಿಭಟನೆ ನಡೆಸಲು ಸೂಚಿಸಿದ್ದಾರೆ. ಇದಕ್ಕೆ ಅವರು ವಿರೋಧಿಸಿ ಪೊಲೀಸರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿ ಕುಲಪತಿ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಮತ್ತೊಂದು ಗುಂಪಿನ ಕೆಲವರು ಎಬಿವಿಪಿಯವರು ವಿವಿಗೆ ಸಂಬಂಧ ಇಲ್ಲದವರು, ಅವರನ್ನು ಒಳಗೆ ಬಿಡಬಾರದು ಎಂದು ಆಗ್ರಹಿಸಿದೆ. ವಿದ್ಯಾರ್ಥಿ ಗುಂಪುಗಳ ನಡುವೆಯೂ ನೂಕಾಟ ತಳ್ಳಾಟ ನಡೆದಿದೆ. ಜಗಳ ಬಿಡಿಸಲು ಹೋದ ಎಸಿಪಿ ಕೋದಂಡರಾಮ ಅವರಿಗೂ ಪೆಟ್ಟಾಗಿದೆ. ಪರಿಸ್ಥಿತಿ ಮೀರುತ್ತಿರುವುದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ವಿದ್ಯಾರ್ಥಿಗಳನ್ನು ಸ್ಥಳದಿಂದ ಚದುರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಬಿದ್ದು ಎದ್ದು ಓಡುವಾಗ ನೂಕುನುಗ್ಗಲಲ್ಲಿ ಕೆಲವರಿಗೆ ಗಾಯಗಳಾಗಿವೆ.
ವಿದ್ಯಾರ್ಥಿನಿಗೆ ಗಾಯ: ಈ ವೇಳೆ ಎಬಿವಿಪಿ ಮಹಿಳಾ ಕಾರ್ಯಕರ್ತೆ ಪ್ರೇಮಶ್ರೀ ಎಂಬುವರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ಕಾನೂನು ಕಾಲೇಜಿನ ವಿದ್ಯಾರ್ಥಿನಿಯಾದ ಆ ಯುವತಿ ಹಾಗೂ ಗಾಯಗೊಂಡಿರುವ ಇತರೆ ವಿದ್ಯಾರ್ಥಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.