ಸರ್ಕಾರದ ಹುಳುಕು ಬಯಲು ಮಾಡಿದ್ದಕ್ಕೆ ನಡುಕ : ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ ವಿಪಕ್ಷಗಳ ಕೆಂಡಾಮಂಡಲ!

Published : Feb 18, 2026, 02:02 PM IST
DPAR restricts media at vidhan soudha Opposition Accuses Govt of Suppressing Truth

ಸಾರಾಂಶ

ರಾಜ್ಯ ಸರ್ಕಾರವು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಈ ನಿರ್ಧಾರವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಜೆಡಿಎಸ್, ಸರ್ಕಾರದ ಈ ನಡೆಯನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಿದ್ದು, ಭ್ರಷ್ಟಾಚಾರ ಮುಚ್ಚಿಹಾಕುವ ಯತ್ನವೆಂದು ಆರೋಪಿಸಿದ್ದಾರೆ..

ಬೆಂಗಳೂರು (ಫೆ.18): ರಾಜ್ಯ ಸರ್ಕಾರವು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ನಿರ್ಧಾರ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಕೂಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕೇವಲ ಮಾಧ್ಯಮ ನಿರ್ಬಂಧ ಮಾತ್ರವಲ್ಲದೆ, ಅನಾಥ ಮಕ್ಕಳ ಮಾಸಾಶನ ತಡೆಹಿಡಿದಿರುವ ವಿಚಾರವೂ ಈಗ ಸರ್ಕಾರದ ಗಂಟಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಲಕ್ಕುಂಡಿಯಲ್ಲಿ ಸಿಗದ ಚಿನ್ನ ಮೀಡಿಯಾದಲ್ಲಿ ಸಿಕ್ತು!: ಆರ್. ಅಶೋಕ್ ವ್ಯಂಗ್ಯ

ಸರ್ಕಾರದ ಈ ಆದೇಶದ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಆರ್ ಅಶೋಕ್, ಲಕ್ಕುಂಡಿಯಲ್ಲಿ ಚಿನ್ನ ಹುಡುಕಿ ಎಂದರೆ ಪತ್ತೆಯಾಗಲಿಲ್ಲ, ಆದರೆ ವಿಧಾನಸೌಧದಲ್ಲಿ ಸಿಕ್ಕ ಚಿನ್ನವನ್ನು (ಕಳ್ಳತನದ ಪ್ರಕರಣ) ಮಾಧ್ಯಮಗಳು ಜಗತ್ತಿಗೆ ತೋರಿಸಿದವು. ತನ್ನ ಹುಳುಕುಗಳನ್ನು ಮಾಧ್ಯಮಗಳು ಬಯಲು ಮಾಡುತ್ತಿವೆ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಬಂಧ ಹೇರಿದೆ ಎಂದು ಟೀಕಿಸಿದರು. ಈ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡಿ ತಕ್ಷಣ ಇದನ್ನು ವಾಪಸ್ ಪಡೆಯಲು ಒತ್ತಾಯಿಸುವುದಾಗಿ ಅವರು ಹೇಳಿದರು.

ಅನಾಥ ಮಕ್ಕಳ ಹೊಟ್ಟೆ ಮೇಲೆ ಹೊಡೆದ ಸರ್ಕಾರ: 75 ಕೋಟಿ ಬಾಕಿ!

ಮಾಧ್ಯಮಗಳ ನಿರ್ಬಂಧದ ಜೊತೆಜೊತೆಗೇ ಬಡ ಮಕ್ಕಳ ಅನ್ನದ ವಿಚಾರವನ್ನೂ ಅಶೋಕ್ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಸುಮಾರು 26,330 ಅನಾಥ ಮಕ್ಕಳಿದ್ದಾರೆ. ಅವರ ಪಾಲನೆಗೆ ಮಾಸಿಕ 4 ಸಾವಿರ ರೂಪಾಯಿ ನೀಡಬೇಕು. ಆದರೆ ಕಳೆದ 7 ತಿಂಗಳಿಂದ ಸುಮಾರು 75 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿಲ್ಲ. ಆದರೆ ಇತ್ತ ಶಾಸಕರಿಗೆ ಅನ್ನ ಸಂತರ್ಪಣೆ ಜಾಸ್ತಿಯಾಗಿ ಫಾರಿನ್ ಟ್ರಿಪ್‌ಗೆ ಹೋಗಿದ್ದಾರೆ. ಫಾರಿನ್ ಟ್ರಿಪ್ ಮಾಡೋಕೆ ಹಣವಿದೆ, ಆದರೆ ಬಡ ಮಕ್ಕಳ ಊಟಕ್ಕೆ ಹಣವಿಲ್ಲವೇ? ಎಂದು ಪ್ರಶ್ನಿಸಿದರು.

ಮುಖವಾಡ ತೊಟ್ಟ ಮಜಾವಾದಿಗೆ ನಡುಕ:ಜೆಡಿಎಸ್ ತೀಕ್ಷ್ಣ ವಾಗ್ದಾಳಿ

ಇತ್ತ ಮಾಧ್ಯಮ ನಿರ್ಬಂಧದ ವಿಚಾರದಲ್ಲಿ ಜೆಡಿಎಸ್ ಕೂಡ ಸರ್ಕಾರದ ವಿರುದ್ಧ ಸಮರ ಸಾರಿದೆ. ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಸರ್ಕಾರಕ್ಕೆ ಏಕಿಷ್ಟು ಭಯ? ಇದು ಸರ್ಕಾರದ ಹೇಡಿತನಕ್ಕೆ ಸಾಕ್ಷಿ ಎಂದು ಜೆಡಿಎಸ್ ತನ್ನ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಆಕ್ರೋಶ ಹೊರಹಾಕಿದೆ. ಸಚಿವರು ಮತ್ತು ಶಾಸಕರ ಭ್ರಷ್ಟಾಚಾರ, ಕಮಿಷನ್ ದಂಧೆಗಳು ಬಯಲಾಗುತ್ತವೆ ಎಂಬ ಆತಂಕದಿಂದಲೇ ಮಾಧ್ಯಮಗಳ ದನಿ ಅಡಗಿಸಲು ಸರ್ಕಾರ ಸಂಚು ರೂಪಿಸಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕೊಡಲಿ ಪೆಟ್ಟು?

ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ಲೋಪಗಳನ್ನು ವರದಿ ಮಾಡುವ ಮಾಧ್ಯಮಗಳಿಗೆ 'ಸೆಕ್ಯೂರಿಟಿ' ನೆಪದಲ್ಲಿ ಬೇಲಿ ಹಾಕಿರುವುದು ಇಡೀ ಪತ್ರಿಕಾ ರಂಗದ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇವಲ ಮಾಧ್ಯಮಗಳ ನಿರ್ಬಂಧವಲ್ಲ, ಜನರ ಪ್ರಶ್ನೆಗಳಿಗೆ ಸಿಗಬೇಕಾದ ಉತ್ತರವನ್ನೇ ಕಸಿದುಕೊಳ್ಳುವ ಪ್ರಯತ್ನವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಣ್ಣಾವ್ರ 'ಬಂಗಾರದ ಮನುಷ್ಯ' ಯಶಸ್ಸಿನ ಸಂಭ್ರಮದಲ್ಲಿ ಕಣ್ಣನ್ನೇ ಕಳೆದುಕೊಂಡಿದ್ದ ಚಿತ್ರಮಂದಿರದ ಮಾಲೀಕರ ನಿಧನ!
ಮಾಧ್ಯಮಗಳನ್ನು ಹತ್ತಿಕ್ಕಲು ಮುಂದಾಯ್ತಾ ಸರ್ಕಾರ? ವಿಧಾನಸೌಧದಲ್ಲಿ 'Freedom of Press'ಗೆ ಬ್ರೇಕ್!