ರುಬ್ಬುಗುಂಡಲ್ಲಿ ಹೊಡೆದು ಏಳು ಜನರ ಕತೆ ಮುಗಿಸಿದ ಪಾತಕಿ! ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ!

Kannadaprabha News   | Kannada Prabha
Published : Nov 06, 2026, 07:01 AM IST
Cab Driver Allegedly Kills 7 With Grinding Stone

ಸಾರಾಂಶ

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ 7 ಜನರನ್ನು ರುಬ್ಬುಗುಂಡಿನಿಂದ ಹೊಡೆದು ಬರ್ಬರವಾಗಿ ಹ ತ್ಯೆ ಮಾಡಿದ್ದಾನೆ. ಆರೋಪಿ ಇಂದುಶೇಖರ್‌ನನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ತನಿಖೆ ವೇಳೆ ಬೆಚ್ಚಿಬಿಳಿಸೋ ಮಾಹಿತಿ ಹೊರಬಿದ್ದಿವೆ!

ಬೆಂಗಳೂರು (ನ.6): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕ್ಯಾಬ್‌ ಚಾಲಕ(Cab driver)ನೊಬ್ಬ ತನ್ನ ಪತ್ನಿ ಹಾಗೂ ಆಕೆಯ ಪರಿವಾರದ 7 ಮಂದಿಯನ್ನು ರುಬ್ಬುಗುಂಡಿನಿಂದ ಮನಬಂದಂತೆ ಹಲ್ಲೆ ನಡೆಸಿ ಬೀಭತ್ಸವಾಗಿ ಹ ತ್ಯೆ ಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್‌, ಶಂಕರ್‌, ಸೊಸೆಯಂದಿರಾದ ದಿವ್ಯಾ, ನಳಿನಿ ಹಾಗೂ ಮೊಮ್ಮಗ ಪುನೀತ್‌ (7) ಮೃತ ದುರ್ದೈವಿಗಳು. ಈ ಹ ತ್ಯಾಕಾಂಡ ಸಂಬಂಧ ಮೃತರ ಅಳಿಯ ರಾಜಾಜಿನಗರ ಸಮೀಪದ ನಿವಾಸಿ ಇಂದುಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮನೆಯಲ್ಲಿ ಒಬ್ಬೊಬ್ಬರನ್ನೇ ಕೊಂದ ಬಳಿಕ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟ ಸೇರಿದಂತೆ ಇತರೆಡೆ ಆತ ಎಸೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತನ್ನ ಮಗಳು ನಳಿನಿ ನಿಗೂಢವಾಗಿ ಕಣ್ಮರೆಯಾದ ಬಗ್ಗೆ ಶಂಕಿಸಿ ಶ್ರೀರಾಮಪುರ ಠಾಣೆ ಪೊಲೀಸರಿಗೆ ಮೃತ ನಳಿನಿ ತಾಯಿ ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, 2 ದಿನಗಳ ಹಿಂದೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಭೀಕರ ಹ ತ್ಯಾ ಕಾಂಡ ಬಯಲಾಗಿದೆ. ನಂದಿನಿ ಬೆಟ್ಟದ ತಪ್ಪಲಿಗೆ ಗುರುವಾರ ಆರೋಪಿಯನ್ನು ಕರೆದೊಯ್ದು ಮೃತದೇಹಗಳನ್ನು ಶೋಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಪತ್ನಿ ಮೇಲೆ ಸಿಟ್ಟಿಗೆ ಕೃತ್ಯ :

ಶೇಖರ್‌ಗೆ 2 ದಶಕಗಳ ಹಿಂದೆ ಸುನಿತಾ ಜತೆ ವಿವಾಹವಾಗಿತ್ತು. ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ದಂಪತಿ ವಾಸವಾಗಿದ್ದರು. ಆದರೆ ಇತ್ತೀಚೆಗೆ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಕೌಟುಂಬಿಕ ವಿಷಯಗಳಿಗೆ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಹಲವು ಬಾರಿ ರಾಜಿ ಪಂಚಾಯ್ತಿ ನಡೆದರೂ ಕೂಡ ಸಂಸಾರಿಕ ಕಲಹ ಮುಂದುವರಿದಿತ್ತು. ತನ್ನ ಪತ್ನಿ ನೆರವಿಗೆ ಆಕೆಯ ತಾಯಿ ಹಾಗೂ ಸೋದರರು ನಿಲ್ಲುತ್ತಾರೆ ಎಂದು ಆರೋಪಿಗೆ ಅಸಮಾಧಾನ ಹುಟ್ಟಿತು. ಈ ವಿಚಾರಕ್ಕೆ ತನ್ನ ಬಾಮೈದರಾದ ಶಿವಕುಮಾರ್ ಹಾಗೂ ಶಂಕರ್ ವಿರುದ್ಧ ಆತ ಬಹಿರಂಗವಾಗಿ ಕೋಪ ಸಹ ತೋರಿಸಿದ್ದ.

ಶ್ರೀರಾಮಪುರದಲ್ಲಿದ್ದ ತವರು ಮನೆಗೆ ಇಂದುಶೇಖರ್‌ ಪತ್ನಿ ಭೇಟಿ ನೀಡುತ್ತಿದ್ದಳು. ಆದರೆ ತವರು ಮನೆಗೆ ಹೋಗದಂತೆ ಇಂದುಶೇಖರ್‌ ನಿರ್ಬಂಧಿಸಿದ್ದರೂ, ಆಕೆ ತವರಿನ ಬಾಂಧವ್ಯ ಕಡಿದುಕೊಂಡಿರಲಿಲ್ಲ. ತನ್ನ ಬದುಕಿಗೆ ಕಂಟಕವಾಗಿದ್ದಾರೆ ಎಂದು ಭಾವಿಸಿ ಸುನೀತಾ ಪರಿವಾರ ಹ ತ್ಯೆಗೆ ಆತ ನಿರ್ಧರಿಸಿದ್ದಾನೆ. ಪೂರ್ವಯೋಜಿತ ಸಂಚಿನಂತೆ ಮೊದಲು ಪತ್ನಿ ತಲೆಗೆ ಮನೆಯಲ್ಲಿ ಮಸಾಲೆ ಅರೆಯಲು ಇಟ್ಟಿದ್ದ ರುಬ್ಬುಗುಂಡಿನಿಂದ ಹೊಡೆದು ಹ ತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ತೆಗೆದು ಕೊಂಡು ಹೋಗಿ ನಂದಿ ಬೆಟ್ಟಕ್ಕೆ ಎಸೆದು ಬಂದಿದ್ದಾನೆ. ಮರುದಿನ ತನ್ನ ಸ್ನೇಹಿತೆಯರ ಜತೆ ಸುನೀತಾ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿ ನೆರೆಹೊರೆಯಲ್ಲಿ ಆರೋಪಿ ನಂಬಿಸಿದ್ದಾನೆ. ಆಕೆಯ ಕುಟುಂಬದವರಿಗೆ ಅನುಮಾನಬಾರದಂತೆ ಮೊಬೈಲ್ ಅನ್ನು ಸಹ ಸ್ವಿಚ್ಡ್ ಆಫ್ ಮಾಡಿದ್ದಾನೆ.

ಬಳಿಕ ಮನೆಯಲ್ಲಿ ಮದ್ಯದ ಪಾರ್ಟಿ ಮಾಡುವ ಸಲುವಾಗಿ ಭಾಮೈದರಾದ ಶಿವಕುಮಾರ್ ಹಾಗೂ ಶಂಕರ್ ಅವರನ್ನು ಮನೆಗೆ ಕರೆಸಿ ಹ ತ್ಯೆ ಮಾಡಿದ್ದಾನೆ. ನಂತರ ಶಂಕರ್ ಪತ್ನಿ ನಳಿನಿ ಹಾಗೂ ಶಿವಕುಮಾರ್ ಪತ್ನಿ ದಿವ್ಯಾಳನ್ನು ಕೊಂದಿದ್ದಾನೆ. ಬಳಿಕ ಅತ್ತೆ ರೂಪಾವತಿ ಹಾಗೂ ಶಂಕರ್ ಪುತ್ರ ಪುನೀತ್‌ನನ್ನು ಹ ತ್ಯೆ ಮಾಡಿದ್ದಾನೆ. ಒಬ್ಬೊಬ್ಬರಾಗಿ ಮನೆಯಲ್ಲಿಯೇ ಕೊಂದು ಮೃತದೇಹಗಳನ್ನು ಬೇರೆ ತೆಗೆದುಕೊಂಡು ಬಿಸಾಡಿದ್ದಾನೆ ಎಂದು ಮೂಲಗಳು ವಿವರಿಸಿವೆ.

ನಂದಿ ಬೆಟ್ಟದಲ್ಲಿ ಮೃತದೇಹ

ನಂದಿಬೆಟ್ಟದಲ್ಲಿ ಶಿವಕುಮಾರ್‌ ಪುತ್ರ ಪುನೀತ್‌ನ ಮೃತದೇಹ ಪತ್ತೆಯಾಗಿದೆ. ಬೆಟ್ಟಕ್ಕೆ ಆರೋಪಿಯನ್ನು ಕರೆದೊಯ್ದು ಪೊಲೀಸರು ಹುಡುಕಾಟ ನಡೆಸಿದರು. ಕೊನೆಗೆ ಸತತ 4 ತಾಸುಗಳ ಶೋಧನೆ ಬಳಿಕ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಶವಗಳು ಪತ್ತೆಯಾಗಿಲ್ಲ.

ಗೊಂದಲಕಾರಿ ಹೇಳಿಕೆ ಸುಳಿವು

ಮೃತ ಸುನೀತಾ ಕುಟುಂಬದ ನಿಗೂಢ ನಾಪತ್ತೆ ಬಗ್ಗೆ ಶ್ರೀರಾಮಪುರ ಠಾಣೆಯಲ್ಲಿ ಕಣ್ಮರೆ ಪ್ರಕರಣ ದಾಖಲಾಯಿತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಇಂದು ಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಿಸಿದರು. ಆದರೆ ಆತ ಗೊಂದಲಕಾರಿ ಹೇಳಿಕೆ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಆರೋಪಿ ಮನೆಗೆ ಶೋಧಿಸಿದಾಗ ಕೊಲೆ ಬಗ್ಗೆ ಸುಳಿವು ಸಿಕ್ಕಿತು. ಈ ಮಾಹಿತಿ ಆಧರಿಸಿ ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಠಾಣೆಯಲ್ಲೇ ಜಂಟಿ ಆಯುಕ್ತ, ಡಿಸಿಪಿ ಮೊಕ್ಕಾಂ

ಈ ಸಾಮೂಹಿಕ ಹ ತ್ಯಾ ಕಾಂಡದ ಬಗ್ಗೆ ತಿಳಿದ ಕೂಡಲೇ ರಾಜಾಜಿನಗರ ಠಾಣೆಗೆ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಧಾವಿಸಿದ್ದಾರೆ. ಠಾಣೆಯಲ್ಲೇ ಗುರುವಾರ ಬೀಡು ಬಿಟ್ಟ ಜಂಟಿ ಆಯುಕ್ತರು, ತನಿಖೆಗೆ ಡಿಸಿಪಿ ಸಾರಥ್ಯದಲ್ಲಿ ಮೂವರು ಎಸಿಪಿಗಳ ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿಸಿದರು.

ರುಬ್ಬುಗುಂಡು ತೊಳೆದಿಟ್ಟ ಆರೋಪಿ

ಈ ಹ ತ್ಯಾ ಕಾಂಡ ಬಳಿಕ ಮನೆಯಲ್ಲಿ ತೊಳೆದು ಒಪ್ಪವಾಗಿಸಿದ್ದ ಆತ, ರಕ್ತದ ಕಲೆಗಳ ಅಂಟಿದ್ದ ರುಬ್ಬುಗುಂಡನ್ನು ಕೂಡ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಿದ್ದ. ಮೃತ ದೇಹಗಳನ್ನು ಸಾಗಿಸಿದ ಕಾರು ಮತ್ತು ರುಬ್ಬುಗುಂಡನ್ನು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಟಿಬಿಟಿಯಲ್ಲಿ ಕನ್ನಡಿಗರ ಕಡೆಗಣನೆ ಬೆನ್ನಲ್ಲೇ ರೈಲ್ವೆ ಮಂಡಳಿ ಪರೀಕ್ಷೇಲೂ ಅನ್ಯಾಯ! ಹೈದರಾಬಾದ್‌ಗೆ ತೆಲುಗು, ಕರ್ನಾಟಕಕ್ಕೇಕಿಲ್ಲ ಕನ್ನಡ?
Karnataka News Today Live: ಇಂದು ದೆಹಲಿಗೆ ಡಿಕೆಶಿ: ರಾಹುಲ್ ಗಾಂಧಿ ಚಹಾಕೂಟ, ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿ ಕುರಿತು ಚರ್ಚೆ?