ಇಂದಿನ ಸಭೆ ನಂತರ ಘೋಷಣೆ ಸಾಧ್ಯತೆ| ಭಗವಾನ್, ವೀಣಾ ಶಾಂತೇಶ್ವರ ಹೆಸರೂ ಚರ್ಚೆಯಲ್ಲಿ| ಹಾವೇರಿಯಲ್ಲಿ ಫೆ.26ರಿಂದ-28 ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ ಸಮ್ಮೇಳನ| ದೊಡ್ಡರಂಗೇಗೌಡ, ಚಿಂತಕ ಕೆ.ಎಸ್.ಭಗವಾನ್ ಹಾಗೂ ಸಾಹಿತಿ ವೀಣಾ ಶಾಂತೇಶ್ವರ ಅವರ ಹೆಸರು ಚರ್ಚೆಗೆ|
ಬೆಂಗಳೂರು(ಜ.22): ಹಾವೇರಿಯಲ್ಲಿ ಫೆ.26ರಿಂದ 28ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಲಗಳು ಮಾಹಿತಿ ನೀಡಿವೆ.
ಶುಕ್ರವಾರ ಮಧ್ಯಾಹ್ನ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಭೆ ನಡೆಸಲಿದೆ. ಸಭೆಯ ನಂತರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಅವರು ಸಮ್ಮೇಳನಾಧ್ಯಕ್ಷರು ಯಾರು ಎಂದು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸಾಹಿತಿ ಡಾ.ದೊಡ್ಡರಂಗೇಗೌಡ, ಚಿಂತಕ ಕೆ.ಎಸ್.ಭಗವಾನ್ ಹಾಗೂ ಸಾಹಿತಿ ವೀಣಾ ಶಾಂತೇಶ್ವರ ಅವರ ಹೆಸರು ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ ದೊಡ್ಡರಂಗೇಗೌಡ ಅವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ.
ಈ ಬಾರಿ ಸಮ್ಮೇಳನಾಧ್ಯಕ್ಷರಾಗಿ ಮಹಿಳಾ ಸಾಹಿತಿಯೊಬ್ಬರನ್ನು ಆಯ್ಕೆ ಮಾಡಬೇಕೆಂಬ ಒತ್ತಾಯ ಕನ್ನಡ ಲೇಖಕಿಯರದ್ದಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾಗಿ ಮತ್ತು ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಲೇಖಕಿ ಡಾ.ವೀಣಾ ಶಾಂತೇಶ್ವರ (76) ಅವರ ಹೆಸರು ಚಾಲ್ತಿಗೆ ಬಂದಿದೆ. ಹಿರಿಯರು, ಸಾಹಿತಿಗಳು ಆಗಿರುವ ವೀಣಾ ಶಾಂತೇಶ್ವರ ಅವರನ್ನು ಈ ಬಾರಿಯಾದರೂ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಒತ್ತಾಯ ಲೇಖಕಿಯರದ್ದು.
ಫೆ.26ರಿಂದ 3 ದಿನ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ
ಇನ್ನು, ಸದಾ ಒಂದಿಲ್ಲೊಂದು ವಿವಾದಗಳಿಂದ ಹೆಸರಾಗಿರುವ ವಿಮರ್ಶಕ, ಚಿಂತಕ ಕೆ.ಎಸ್.ಭಗವಾನ್ (77) ಅವರು ಕೂಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಸಾಕಷ್ಟುಸಾಹಿತ್ಯ ಕೃಷಿ ಮಾಡಿದವರು. ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ತಮ್ಮನ್ನೂ ಕೂಡ ಪರಿಗಣಿಸುವಂತೆ ಇತ್ತೀಚೆಗೆ ಪರಿಷತ್ತಿನ ಕೆಲ ಪದಾಧಿಕಾರಿಗಳಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಹೆಸರು ಪರಿಗಣನೆಯಲ್ಲಿದೆ.
ಜಾತಿ ಆಧಾರದಲ್ಲಿ ಆಯ್ಕೆ?:
ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರ ಅಧ್ಯಕ್ಷಾವಧಿ ಮಾ.3ಕ್ಕೆ ಮುಕ್ತಾಯಗೊಳ್ಳಲಿದ್ದು, ಈಗಾಗಲೇ ನಾಲ್ಕು ಬಾರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಿ ದಾಖಲೆ ಮಾಡಿದ್ದಾರೆ. ಫೆಬ್ರವರಿಯಲ್ಲಿ 86ನೇ ಸಾಹಿತ್ಯ ಸಮ್ಮೇಳನ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿಯೇ ನಡೆದರೆ ಐದು ಬಾರಿ ಸಮ್ಮೆಳನ ಆಯೋಜಿಸಿದ ಕೀರ್ತಿ ಅವರದ್ದಾಗಲಿದೆ. ನಾಲ್ಕು ಬಾರಿ ಲಿಂಗಾಯತ, ಬ್ರಾಹ್ಮಣ ಸೇರಿದಂತೆ ಪ್ರಮುಖ ಸಮುದಾಯಗಳ ಸಾಹಿತಿಗಳಿಗೆ ಸಮ್ಮೇಳನಾಧ್ಯಕ್ಷ ಸ್ಥಾನ ನೀಡಲಾಗಿದೆ. ಹಾಗಾಗಿ ಈ ಬಾರಿ ಪ್ರಮುಖ ಸಮುದಾಯವಾದ ಒಕ್ಕಲಿಗ ಸಮುದಾಯಕ್ಕೆ ಸಮ್ಮೇಳನಾಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಕನ್ನಡದ ಅತ್ಯಂತ ದೊಡ್ಡ ಮೊತ್ತದ ನೃಪತುಂಗ ಪ್ರಶಸ್ತಿಗೆ ದೊಡ್ಡರಂಗೇಗೌಡರನ್ನು ಆಯ್ಕೆ ಮಾಡಬೇಕೆಂಬ ಚರ್ಚೆ ನಡೆದಿತ್ತು. ಆದರೆ ಅಂತಿಮವಾಗಿ ಖ್ಯಾತ ವಿಮರ್ಶಕ ಜಿ.ಎಸ್. ಆಮೂರ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಕ್ಕೆ ಬದಲಾಗಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಸಿಗಬಹುದೆಂಬ ಚರ್ಚೆ ಸಾಹಿತ್ಯ ವಲಯದಲ್ಲಿದೆ.