
ಬೆಂಗಳೂರು(ಮೇ.07): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆ ಅಥವಾ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುತ್ತಿರುವ ಎಂಬಿಬಿಎಸ್, ಸ್ನಾತಕೋತ್ತರ ಪದವಿ/ ಡಿಪ್ಲೊಮಾ ವೈದ್ಯರ ವೇತನವನ್ನು ಏ.1ರಿಂದ ಪೂರ್ವಾನ್ವಯವಾಗುವಂತೆ 70 ಸಾವಿರ ರು.ಗಳಿಗೆ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಕೊರೋನಾ ಸಂಕಷ್ಟ ಕಾಲದಲ್ಲಿ ದುಡಿಯುತ್ತಿರುವ ವೈದ್ಯ ಸಮುದಾಯದ ನೆರವಿಗೆ ಸರ್ಕಾರ ಧಾವಿಸಿದೆ.
ಮಾ.31ರವರೆಗೂ ಎಂಬಿಬಿಎಸ್ ಪದವೀಧರರಿಗೆ ಮಾಸಿಕ 62,666 ರು. ಹಾಗೂ ವೈದ್ಯಕೀಯ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಪದವೀಧರರಿಗೆ 67,615 ರು. ಮಾಸಿಕ ವೇತನ ನೀಡಲಾಗುತಿತ್ತು. ಈಗ ಎಂಬಿಬಿಎಸ್ ಪದವೀಧರರಿಗೆ 7334 ರು. ಹಾಗೂ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಪದವೀಧರರ ವೇತನದಲ್ಲಿ 2385 ರು. ಹೆಚ್ಚಳ ಮಾಡಲಾಗಿದೆ.
ಕೊರೋನಾ ಹಾವಳಿ, 126 ವೈದ್ಯರು ಸಾವು: ಕಳೆದ ಬಾರಿ 736 ವಾರಿಯರ್ಸ್ ಬಲಿ!
ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ 60 ಸಾವಿರ ರು.ಗಳನ್ನು ಈ ಹಿಂದೆ ವೇತನ ನಿಗದಿ ಮಾಡಲಾಗಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ನಿಗದಿ ಪಡಿಸಿರುವ ಈ ವೇತನದಲ್ಲಿ ತಾರತಮ್ಯವಿತ್ತು. ಹೀಗಾಗಿ ಮಾಸಿಕ ವೇತನ ಪರಿಷ್ಕರಿಸುವಂತೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಸೂಪರ್ ಸ್ಪೆಷಾಲಿಟಿ ವೈದ್ಯರ ವೇತನದಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ. ಸೂಪರ್ ಸ್ಪೆಷಾಲಿಟಿ ವೈದ್ಯರಿಗೆ ಮಾಸಿಕ ವೇತನ 72,802 ರು. ನೀಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಲ್ಲ.
10 ದಿನಗಳ ಸಾಂದರ್ಭಿಕ ರಜೆ:
ವೇತನ ಪರಿಷ್ಕರಣೆ ಜೊತೆಗೆ ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳಿಗೆ ವಾರ್ಷಿಕ 10 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ