
ಬೆಂಗಳೂರು/ಮಂಡ್ಯ (ಮೇ.10): ಜೆಡಿಎಸ್ (JDS) ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ (Marithibbegowda) ಪಕ್ಷ ತೊರೆಯುವುದು ಖಚಿತ. ಅವರ ಮುಂದಿನ ರಾಜಕೀಯ ನಿಲ್ದಾಣ ಕಾಂಗ್ರೆಸ್ (Congress) ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮಾಜಿ ಸಚಿವ ಎಸ್.ಡಿ. ಜಯರಾಂ ಪುತ್ರ ಅಶೋಕ್ ಜಯರಾಂ, ಮಾಜಿ ಐಆರ್‌ಎಸ್ ಅಧಿಕಾರಿ ಲಕ್ಷ್ಮೇ ಅಶ್ವಿನ್‌ಗೌಡ ಬೆನ್ನಲ್ಲೇ ಇದೀಗ ಮಂಡ್ಯದ (Mandya) ಮತ್ತೊಬ್ಬ ಮುಖಂಡ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಜೆಡಿಎಸ್ ತೊರೆಯುವ ಸುಳಿವು ನೀಡಿದ್ದಾರೆ.
ದಳಪತಿಗಳ ವಿರುದ್ಧ ಬಹಿರಂಗವಾಗಿಯೇ ತಿರುಗಿಬಿದ್ದಿರುವ ಅವರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕದಂತೆ ಸೋಮವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸೋಮವಾರ ಪರಿಷತ್‌ನ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರ ನಿಯೋಜನೆ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ವಿರುದ್ಧ ಕಾಂಗ್ರೆಸ್ಸಿಗರ ಜತೆ ಧರಣಿ ನಡೆಸಿದರು.
ಪ್ರಾದೇಶಿಕ ಪಕ್ಷವನ್ನು ಉಳಿಸಿ ಅಧಿಕಾರಕ್ಕೆ ತರಬೇಕು ಎನ್ನುವುದೇ ನನ್ನ ಕೊನೆಯ ಆಸೆ: ಹೆಚ್.ಡಿ.ದೇವೇಗೌಡ
ಮರಿತಿಬ್ಬೇಗೌಡ ಅವರು ಈಗಾಗಲೇ ಕಾಂಗ್ರೆಸ್‌ನಲ್ಲಿ ಒಂದು ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗಿದೆ. ಅವರ ಪರಿಷತ್ ಸದಸ್ಯತ್ವ ಅವಧಿ 2024ರ ಜೂನ್‌ಗೆ ಮುಗಿಯಲಿದೆ. ಅಲ್ಲಿಯವರೆಗೆ ಕಾಯದೆ ಸದ್ಯದಲ್ಲೇ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕರೊಂದಿಗೆ ಎಲ್ಲಾ ರೀತಿಯ ಚರ್ಚೆಯೂ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ನಾಯಕತ್ವದ ವಿರುದ್ಧ ಕೆಂಡ: ಜೆಡಿಎಸ್‌ನಲ್ಲಿ ದುಡ್ಡಿದ್ದವರಿಗೆ ಮಾತ್ರ ಬಿ-ಫಾರಂ ನೀಡುತ್ತಾರೆ. ನಮ್ಮ ಪಕ್ಷದ ನಾಯಕರ ನಡೆ ಬಗ್ಗೆ ಬೇಸರವಾಗಿದೆ. ನಾಲ್ಕೈದು ವರ್ಷಗಳಿಂದ ಪಕ್ಷದೊಳಗೆ ನೋವು ಅನುಭವಿಸಿಕೊಂಡು ಬಂದಿದ್ದೇನೆ. ಪಕ್ಷದ ಕಾರ್ಯಕರ್ತರ ಬಗ್ಗೆ ನಮ್ಮ ನಾಯಕರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮರಿತಿಬ್ಬೇಗೌಡ ಕಿಡಿಕಾರಿದ್ದಾರೆ. ಮಂಡ್ಯದ ಮಂಜುನಾಥ ಕನ್ವೆನ್ಷನ್ ಹಾಲ್‌ನಲ್ಲಿ ಸೋಮವಾರ ನಡೆದ ಹಿತೈಷಿಗಳು, ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಕೀಲಾರ ಜಯರಾಂ ಅವರ ಬಳಿ ಹಣ ಇಲ್ಲವೆಂಬ ಕಾರಣಕ್ಕೆ ಟಿಕೆಟ್ ಕೊಡಲಿಲ್ಲ.
ಒಂದು ದಿನವೂ ಪಕ್ಷದ ಬಾವುಟ ಹಿಡಿಯದ, ಪಕ್ಷ ಕಟ್ಟದ (ಕೆ.ಟಿ.ಶ್ರೀಕಂಠೇಗೌಡ ಬೆಂಬಲಿಗ ಎಚ್.ಕೆ.ರಾಮು), ಯಾರು ಅಂತಾನೇ ಗೊತ್ತಿಲ್ಲದವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು. ಜೆಡಿಎಸ್ ಪಕ್ಷದಲ್ಲೇ ಇರಬೇಕೇ, ಬೇಡವೇ ಎಂಬ ಬಗ್ಗೆ ಮತದಾರರು, ಹಿತೈಷಿಗಳ ಜೊತೆ ಮಾತನಾಡಿ ಸದ್ಯದಲ್ಲೇ ನಿರ್ಧಾರ ಮಾಡುತ್ತೇನೆ. ನಮ್ಮ ನಾಯಕರು ತೆಗೆದುಕೊಳ್ಳುವ ಇಂಥ ನಿರ್ಧಾರಗಳಿಗೆ ನಮ್ಮ ಬೆಂಬಲ ಇಲ್ಲ. ನಾನೊಬ್ಬ ಸ್ವಾಭಿಮಾನಿ. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಪರ ಮತ ಕೇಳುವುದಿಲ್ಲ. ಚುನಾವಣೆ ಅಧಿಸೂಚನೆ ಪ್ರಕಟವಾದ ಬಳಿಕ ಯಾರಿಗೆ ಮತ ಹಾಕಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸೋಲಿಸಲು ಯತ್ನಿಸಿದ್ದರು: ಕಳೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಮಯದಲ್ಲಿ ಬಿ-ಫಾರಂ ಕೊಟ್ಟು ನನ್ನನ್ನು ಸೋಲಿಸಲು ವ್ಯವಸ್ಥಿತ ಪಿತೂರಿ ನಡೆಸಿದರು. ದೇವೇಗೌಡರ ಕುಟುಂಬದ ಯಾರೊಬ್ಬರೂ ಪ್ರಚಾರಕ್ಕೆ ಬರಲಿಲ್ಲ. ನಾನೇ ಅವರ ಬಳಿ ಹೋಗಿ ಅಂಗಲಾಚಿದೆ, ಒಂದು ಪತ್ರಿಕಾಗೋಷ್ಠಿಯನ್ನಾದರೂ ನಡೆಸಿ ಎಂದು ಮನವಿ ಮಾಡಿದರೂ ಕಿವಿಗೊಡಲಿಲ್ಲ ಎಂದು ನೋವು ತೋಡಿಕೊಂಡರು.
ಸಿದ್ದರಾಮಯ್ಯಗೆ ಎಚ್‌ಡಿಕೆ ಟಕ್ಕರ್, ಬಾದಾಮಿಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ
ಕುಟುಂಬ ರಾಜಕಾರಣದಿಂದ ಸೋಲು: ಇದೇ ವೇಳೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕುಟುಂಬ ರಾಜಕಾರಣವೇ ಕಾರಣವೇ ಹೊರತು ಜೆಡಿಎಸ್ ಶಾಸಕರಾಗಲಿ, ಕಾರ್ಯಕರ್ತರಾಗಲಿ ಅಲ್ಲ ಎಂದು ಮರಿತಿಬ್ಬೇಗೌಡ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ