
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಕಿಚ್ಚು ಹೊತ್ತಿಕೊಂಡಿರುವ ಬೆನ್ನಲ್ಲೇ, ವರುಣ ದೇವ ರಾಜ್ಯದ ರೈತರಿಗೆ ಭಾರಿ ಸಿಹಿ ಸುದ್ದಿ ನೀಡಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಹೆಮ್ಮೆಯ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ತಮಿಳುನಾಡಿನತ್ತ ಕಾವೇರಿ ನೀರು ಈ ಜಲಾಶಯದಿಂದ ಹರಿಯಲಾರಂಭಿಸಿದೆ. ಇದು ಸದ್ಯದ ಕಾವೇರಿ ವಿವಾದದ ತೀವ್ರತೆಯನ್ನು ಕೊಂಚ ತಣ್ಣಗಾಗಿಸುವ ಮುನ್ಸೂಚನೆ ನೀಡಿದೆ.
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಕೇರಳದ ವಯನಾಡು ಭಾಗದಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದಾಗಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಅಣೆಕಟ್ಟೆಗೆ 15,500 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ.
ಒಟ್ಟು 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗಾಗಲೇ 18 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಜಲಾಶಯದ 4 ಕ್ರಸ್ಟ್ ಗೇಟ್‌ಗಳ ಮೂಲಕ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಈ ನೀರು ಕಪಿಲಾ ನದಿಯ ಮೂಲಕ ತಮಿಳುನಾಡಿನತ್ತ ಹರಿದು ಹೋಗಲಿದೆ. ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ಘೋಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.
ಕಾವೇರಿ ಗಲಾಟೆಯ ನಡುವೆಯೇ ಮಂಡ್ಯ ಭಾಗದ ರೈತರಿಗೂ ವರುಣ ಮುನಿಸು ಬಿಟ್ಟು ಹರಸಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (KRS) ಡ್ಯಾಂಗೆ ಬರುವ ಒಳಹರಿವು 13,522 ಕ್ಯೂಸೆಕ್‌ಗೆ ಏರಿಕೆಯಾಗಿದೆ.
ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಸದ್ಯ 94.40 ಅಡಿಗೆ ತಲುಪಿದೆ. ಇನ್ನು 49.452 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟಿನಲ್ಲಿ ಪ್ರಸ್ತುತ 18.733 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯಕ್ಕೆ ಡ್ಯಾಂನಿಂದ ಕೇವಲ 1,565 ಕ್ಯೂಸೆಕ್ ನೀರನ್ನು ಮಾತ್ರ ಹೊರಹರಿಸಲಾಗುತ್ತಿದ್ದು, ಒಳಹರಿವು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಜಿಗಿಯಲಿದೆ.
ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯ ಕೂಡ ಭರ್ತಿಯಾಗಿದೆ. ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹಾರಂಗಿ ಯಡವನಾಡು ಸೋಮವಾರಪೇಟೆ ಸಂಪರ್ಕ ರಸ್ತೆ ಬಂದ್ ಆಗಿದೆ. ಮೂರು ಅಡಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಹಾರಂಗಿ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು (8.5 ಟಿಎಂಸಿ ಸಾಮರ್ಥ್ಯ), ಇಂದಿನ ಇತ್ತೀಚಿನ ವರದಿಯ ಪ್ರಕಾರ ನೀರಿನ ಮಟ್ಟ 2857.83 ಅಡಿಗಳಿಗೆ (8.104 ಟಿಎಂಸಿ) ತಲುಪಿದೆ. ಜಲಾಶಯಕ್ಕೆ ಸದ್ಯ 9,896 ಕ್ಯೂಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಅಷ್ಟೇ ವೇಗವಾಗಿ ಅಂದರೆ 10,058 ಕ್ಯೂಸೆಕ್ ನೀರನ್ನು ಹೊರಹರಿವಿನ ಮೂಲಕ ನದಿಗೆ ಹರಿಸಲಾಗುತ್ತಿದೆ.
ಒಟ್ಟಾರೆಯಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಹೆಚ್ಚುತ್ತಿರುವ ನೀರಿನ ಸಂಗ್ರಹವು ಕರ್ನಾಟಕದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಕೃತಿಯೇ ಕಾವೇರಿ ಸಂಕಷ್ಟಕ್ಕೆ ಸದ್ಯಕ್ಕೆ ಪರಿಹಾರ ನೀಡುತ್ತಿರುವಂತೆ ಭಾಸವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ