DNA Test Reports Duration: ಡಿಎನ್‌ಎ ಪರೀಕ್ಷೆ ವರದಿ ಈಗ ಒಂದು ತಿಂಗಳಲ್ಲೇ ಲಭ್ಯ!

Kannadaprabha News, Ravi Janekal |   | Kannada Prabha
Published : Nov 10, 2025, 07:15 AM IST
DNA test reports are now available within a month

ಸಾರಾಂಶ

ಅಪರಾಧ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುವ ಡಿಎನ್‌ಎ ಪರೀಕ್ಷಾ ವರದಿಯು ಈಗ ಕೇವಲ ಒಂದು ತಿಂಗಳಿನಲ್ಲಿ ಲಭ್ಯವಾಗುತ್ತಿದೆ. ಹುಬ್ಬಳ್ಳಿಯಲ್ಲಿ ಹೊಸ ಡಿಎನ್‌ಎ ಘಟಕಗಳ ಸ್ಥಾಪನೆಯಿಂದಾಗಿ, ವರದಿ ವಿಳಂಬ ತಪ್ಪಿದ್ದು, ಅಪರಾಧಿಗಳಿಗೆ ಶೀಘ್ರ ಶಿಕ್ಷೆ ಮತ್ತು ಮೃತರ ಗುರುತು ಪತ್ತೆಗೆ ಸಹಕಾರಿಯಾಗಿದೆ.

ಮಂಜುನಾಥ್ ಕೆ.

ಬೆಂಗಳೂರು (ನ.10): ಅಪರಾಧ ಪ್ರಕರಣಗಳಲ್ಲಿ ಆರೋಪ ಸಾಬೀತುಪಡಿಸಲು ಮತ್ತು ವಿಮಾನ, ಬಸ್‌ ದುರಂತದಂತಹ ಪ್ರಕರಣಗಳಲ್ಲಿ ಮೃತರ ಗುರುತು ಪತ್ತೆ ಹಚ್ಚಲು ಹಾಗೂ ಪಿತೃತ್ವ ಸಾಬೀತುಪಡಿಸಲು ಮಹತ್ವದ ಪಾತ್ರ ವಹಿಸುವ ಡಿಎನ್‌ಎ ಪರೀಕ್ಷೆ ವರದಿ ಇದೀಗ ಹೆಚ್ಚೂ ಕಡಿಮೆ ಒಂದು ತಿಂಗಳಿನಲ್ಲಿಯೇ ಲಭ್ಯವಾಗುತ್ತಿದೆ.

ಈ ಹಿಂದೆ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌) ಘಟಕವು ವರದಿ ನೀಡಲು ಸುಮಾರು ಒಂದೂವರೆ ವರ್ಷ ತೆಗೆದುಕೊಳ್ಳುತ್ತಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯ (ಆರ್‌ಎಫ್‌ಎಸ್ಎಲ್‌)ದಲ್ಲಿ ಎರಡು ಡಿಎನ್‌ಎ ಘಟಕಗಳನ್ನು ಸ್ಥಾಪಿಸಿ ಅದಕ್ಕೆ ಮಾನವ ಸಂಪನ್ಮೂಲವನ್ನು ಒದಗಿಸಿರುವ ಪರಿಣಾಮ ಒಂದರಿಂದ ಒಂದೂವರೆ ತಿಂಗಳಿನಲ್ಲಿಯೇ ವರದಿ ಲಭ್ಯವಾಗಲಿದೆ. ಇದರಿಂದ ಶೀಘ್ರವಾಗಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿ ಅಪರಾಧಿಗೆ ಶಿಕ್ಷೆ ಕೊಡಿಸಲು ಸಹಕಾರಿಯಾಗಲಿದೆ.

ಡಿಎನ್‌ಎ ಎಂದರೇನು?

ಡೀಆಕ್ಸಿರೈಬೋ ನ್ಯೂಕ್ಲೀಯಿಕ್ ಆಮ್ಲದ ಸಂಕ್ಷಿಪ್ತ ರೂಪವೇ ಡಿಎನ್‌ಎ ಆಗಿದೆ. ಡಿಎನ್‌ಎ ಪರೀಕ್ಷೆಯು ಯಾವುದೇ ಅನುವಂಶಿಕ ಅಸ್ವಸ್ಥತೆಗಳನ್ನು ಮೌಲ್ಯಮಾಪನ ಮಾಡಲು ಅಥವಾ ಕಾನೂನು ಉದ್ದೇಶಗಳಿಗಾಗಿ ಪಿತೃತ್ವ ಅಥವಾ ಮಾತೃತ್ವವನ್ನು ಸಾಬೀತುಪಡಿಸಲು ಒಂದು ರೀತಿಯ ಅನುವಂಶಿಕ ಪರೀಕ್ಷೆಯಾಗಿದೆ. ಅಷ್ಟೇ ಅಲ್ಲದೆ ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ದೊರಕುವ ರಕ್ತ, ವೀರ್ಯ, ಕೂದಲು, ಚರ್ಮದ ಕೋಶಗಳು ಮತ್ತು ಅಂಗಾಂಶಗಳ ಮಾದರಿಯನ್ನು ಸಂಗ್ರಹಿಸಿ ಎಫ್ಎಸ್‌ಎಲ್‌ಗೆ ರವಾನಿಸಲಾಗುತ್ತದೆ. ಕೊಲೆಯಾದವರ ಬಳಿ ಅಥವಾ ಕೃತ್ಯ ನಡೆದ ಸ್ಥಳದಲ್ಲಿ ಸಿಗುವ ಸಾಕ್ಷ್ಯಗಳು ಆರೋಪಿಗೆ ಸಂಬಂಧಿಸಿದ್ದೋ ಅಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆ ನೆರವಾಗುತ್ತದೆ.

ಮೃತರ ಗುರುತು ಪತ್ತೆಯಾಗದಿದ್ದಾಗ ಮತ್ತು ಘಟನೆ ನಡೆದ ಜಾಗದಲ್ಲಿ ಆರೋಪಿಗಳಿಗೆ ಸೇರಿದ್ದ ಸಾಕ್ಷ್ಯಗಳು ಪತ್ತೆಯಾದಾಗ ಅವುಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆ ನಡೆಸಿ ಅವರ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚುವ ಪೊಲೀಸರು ಈ ಪ್ರಕರಣದ ಆರೋಪಿಗಳು ಯಾರು? ಕೊಲೆಗೆ ನಿಖರವಾದ ಕಾರಣವೇನು? ಎಂಬುದರ ಬಗ್ಗೆ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುತ್ತಾರೆ.

ಮೃತರ ಗುರುತು ಪತ್ತೆಹಚ್ಚಲು ಡಿಎನ್‌ಎ ಸಹಕಾರಿ:

ಕಳೆದ ಜೂ.12 ರಂದು ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿ 229 ಮಂದಿಯ ಶವವನ್ನು ಡಿಎನ್‌ಎ ಆಧರಿಸಿ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿತ್ತು. ಜತೆಗೆ ಆಂಧ್ರಪ್ರದೇಶದ ಕರ್ನೂಲ್‌ ಬಳಿ ನಡೆದ ಬಸ್ ದುರಂತದ ವೇಳೆ ಮೃತಪಟ್ಟಿದ್ದವರ ಶವವನ್ನು ಡಿಎನ್‌ಎ ವರದಿ ಆಧರಿಸಿ ಹಸ್ತಾಂತರ ಮಾಡಲಾಗಿತ್ತು. ಆ ವೇಳೆ ಡಿಎನ್‌ಎ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಯಿತು.

ಡಿಎನ್‌ಎಯಿಂದ ಅಪರಾಧಿಗೆ ಜೀವಾವಧಿ ಶಿಕ್ಷೆ:

ಮಂಡ್ಯದ ಮಳವಳ್ಳಿಯಲ್ಲಿ ಮನೆ ಪಾಠಕ್ಕೆ ಹೋಗಿದ್ದ 11 ವರ್ಷದ ಬಾಲಕಿಯನ್ನು ಪಾಠ ಹೇಳಿಕೊಡುತ್ತಿದ್ದ ಶಿಕ್ಷಕನೇ 2024ರಲ್ಲಿ ಅಪಹರಿಸಿ ಅತ್ಯಾ೧ಚಾರ ಎಸಗಿ ಕೊಲೆ ಮಾಡಿ ಮೃತದೇಹವನ್ನು ಸಂಪ್‌ನಲ್ಲಿ ಎಸೆದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಕಾಂತರಾಜು(51)ನನ್ನು ಬಂಧಿಸಿದ್ದರು. ತನಿಖಾಧಿಕಾರಿಗಳು ಆರೋಪಿಯ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ವಿಶ್ಲೇಷಣೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ಅದರ ವರದಿ ಒಂದು ವರ್ಷದ ನಂತರ ಬಂದಿತ್ತು. ಡಿಎನ್‌ಎ ಹೊಂದಾಣಿಕೆಯಾಗಿದ್ದ ವರದಿ ಆಧರಿಸಿ ಮಂಡ್ಯದ ವಿಶೇಷ ಪೋಕ್ಸೋ ನ್ಯಾಯಾಲಯವು ಕಾಂತರಾಜುಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ವರದಿ ಮಹತ್ತರವಾದ ಪಾತ್ರ ವಹಿಸಿತ್ತು.

3618 ಪ್ರಕರಣಗಳು ಇತ್ಯರ್ಥ:

2020ರಲ್ಲಿ ಬೆಂಗಳೂರಿನ ಎಫ್‌ಎಸ್‌ಎಲ್‌ನಲ್ಲಿರುವ ಡಿಎನ್ಎ ಘಟಕವು 826 ಪ್ರಕರಣಗಳನ್ನು ಸ್ವೀಕರಿಸಿತ್ತು. ಅವುಗಳಲ್ಲಿ ಡಿಸೆಂಬರ್ 31ರ ವೇಳೆಗೆ 710 ವರದಿಗಳನ್ನು ನೀಡಲಾಗಿತ್ತು. 1213 ಪ್ರಕರಣಗಳು (ಹಿಂದಿನ ಬಾಕಿ ಸೇರಿದಂತೆ) ಬಾಕಿ ಉಳಿದಿದ್ದವು. ಪ್ರಯೋಗಾಲಯಗಳು ಅಪರಾಧಗಳ ಪ್ರಕರಣಗಳ ವರದಿಯನ್ನು ನೀಡಲು ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಳ್ಳುತ್ತಿದ್ದವು. 2024ರಲ್ಲಿ ಡಿಎನ್ಎ ಘಟಕಗಳು ರಾಜ್ಯಾದ್ಯಂತ 4035 ಪ್ರಕರಣಗಳನ್ನು ಸ್ವೀಕರಿಸಿದ್ದವು. 2020ರಲ್ಲಿ ಸ್ವೀಕರಿಸಿದ ಪ್ರಕರಣಗಳ ಸಂಖ್ಯೆಗಿಂತ ಇದು ಸರಿಸುಮಾರು ಐದು ಪಟ್ಟು ಹೆಚ್ಚಾಗಿತ್ತು. ಇವುಗಳಲ್ಲಿ 3618 ಪ್ರಕರಣಗಳ ವರದಿಗಳನ್ನು ನೀಡಲಾಗಿದೆ. ಇದರಲ್ಲಿ ಕ್ರಿಮಿನಲ್ ಪ್ರಕರಣಗಳು, ವಿಚಾರಣಾ ನ್ಯಾಯಾಲಯಗಳು ಮತ್ತು ಕುಟುಂಬ ನ್ಯಾಯಾಲಯಗಳು ಉಲ್ಲೇಖಿಸುವ ಪಿತೃತ್ವ ವಿವಾದಗಳು ಮತ್ತು ಅಸ್ವಾಭಾವಿಕ ಸಾವಿನ ಪ್ರಕರಣಗಳಲ್ಲಿ ಮೃತರನ್ನು ಗುರುತಿಸುವ ಪ್ರಕರಣಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!