Sugarcane Farmer Issues: ಕಬ್ಬು ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ???

Kannadaprabha News   | Kannada Prabha
Published : Nov 10, 2025, 06:36 AM IST
sugarcane farmer issues in Karnataka FRP rate protest

ಸಾರಾಂಶ

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಕೇಂದ್ರ ನಿಗದಿತ ಎಫ್‌ಆರ್‌ಪಿ ದರಕ್ಕಿಂತ ಕಡಿಮೆ ಹಣ ಪಡೆಯುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳಿಂದ ಲಾಭ ಗಳಿಸುತ್ತಿದ್ದರೂ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗದೆ ಅವರ ಬದುಕು ಸಂಕಷ್ಟದಲ್ಲಿದೆ. 

  • ಡಾ.ನವೀನ್‌ಕುಮಾರ್ ಬಿ.ಸಿ., ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ರೈತ ಮೋರ್ಚಾ

ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಬ್ಬು ಅರೆಯುವಿಕೆ ಆರಂಭಗೊಂಡಿದೆ. ಕೇಂದ್ರ ಸರ್ಕಾರ ಎಫ್‌ಆರ್‌ಪಿ ಅನ್ನು ನಿಗದಿಪಡಿಸಿದೆ. ರಾಜ್ಯದಲ್ಲಿ ಕಬ್ಬು ಬೆಳೆಯುವ ಪ್ರದೇಶದ ವಿಸ್ತೀರ್ಣ 9.87 ಲಕ್ಷ ಹೆಕ್ಟೇರ್‌ಗಳು. ರಾಜ್ಯದಲ್ಲಿ 2024ರಲ್ಲಿ ಉತ್ಪಾದನೆ ಆದ ಕಬ್ಬು 5.40 ಕೋಟಿ ಟನ್. ಉತ್ಪಾದನೆ ಆದ ಸಕ್ಕರೆಯ ಅಂದಾಜು ಪ್ರಮಾಣ 41 ಲಕ್ಷ ಟನ್.

ಅನ್ನದಾತ ತನ್ನ ಬದುಕನ್ನು ಕಹಿ ಆಗಿಸಿಕೊಂಡು ರಾಜ್ಯದ ಜನರಿಗೆ ಸಿಹಿಯನ್ನು ನೀಡುವ ಮುಖಾಂತರ ರೈತ ಸಮುದಾಯದ ತ್ಯಾಗ ಮನೋಭಾವನೆಯನ್ನು ಪ್ರಸ್ತುತಪಡಿಸಿದ್ದಾನೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ನಿರ್ಲಕ್ಷ್ಯ ಮತ್ತು ನಿರ್ಲಿಪ್ತ ಧೋರಣೆಯಿಂದ ಕಬ್ಬು ಬೆಳೆಗಾರರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದೆ.

ಪ್ರತಿ ವರ್ಷವೂ ನವೆಂಬರ್ ಮಾಸದಲ್ಲಿ ಕಬ್ಬು ಬೆಳೆಯುವ ರೈತರದ್ದು ‘ನ್ಯಾಯ’ಯುತ ದರಕ್ಕಾಗಿ ಸಮರ. ಅತ್ತ ಸಕ್ಕರೆ ಕಾರ್ಖಾನೆಗಳದ್ದು ರಕ್ಷಣಾತ್ಮಕ ನಡೆ. ಇಂಥ ವಿವಾದದ ಸ್ಥಿತಿಗೆ ದಶಕದ ಇತಿಹಾಸ ಸೃಷ್ಟಿಯಾಗಿದ್ದರೂ ಕಬ್ಬಿನ ದರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ನಮ್ಮೆಲ್ಲರ ಮನೆಯ ಡಬ್ಬಿ ತುಂಬಾ ಸಕ್ಕರೆ ತುಂಬಿಸಿ ಸಿಹಿ ಉಣಿಸುವ ರೈತರ ಆಕ್ರೋಶವೂ ತಣಿಯುತ್ತಿಲ್ಲ.

ಕಬ್ಬು ಬೆಳೆಗಾರರಿಗೆ ಸಿಗೋದೆಷ್ಟು?

ಶೇ.10.25 ಸಕ್ಕರೆ ಇಳುವರಿ ಲೆಕ್ಕ ಆಧರಿಸಿ ಪ್ರಸಕ್ತ ಹಂಗಾಮಿನಲ್ಲಿ ಟನ್ ಕಬ್ಬಿಗೆ 3,550 ರು. ‘ನ್ಯಾಯಸಮ್ಮತ ಮತ್ತು ಲಾಭದಾಯಕ ದರ’ (ಎಫ್ಆ‌ರ್‌ಪಿ) ನೀಡಬೇಕು. ಇನ್ನೂ ಅಧಿಕ ಇಳುವರಿ ಇದ್ದಾಗ, ಶೇಕಡಾವಾರು ಇಳುವರಿ ಆಧರಿಸಿ ಹೆಚ್ಚಿನ ಎಫ್‌ಆರ್‌ಪಿ ನೀಡಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ. ಆದರೆ, ಇಷ್ಟು ಹಣ ನೀಡಲು ಸಕ್ಕರೆ ಕಾರ್ಖಾನೆಗಳು ಒಪ್ಪದೆ ಇರುವುದು ರೈತರನ್ನು ಕೆರಳಿಸಿದೆ. ವರ್ಷಪೂರ್ತಿ ಆರೈಕೆ ಮಾಡಿ ಬೆಳೆದ ಕಬ್ಬು ಮಾರಿದಾಗ ಸಿಗುವ ಹಣ ಎಷ್ಟು? ಕಬ್ಬಿನ ಬಿಲ್ ಕೈಸೇರುವುದು ಯಾವಾಗ? ದರ ಘೋಷಿಸದೆ ಹಂಗಾಮು ಆರಂಭಿಸಿ, ಕೆಲ ತಿಂಗಳ ಬಳಿಕ ಕಾರ್ಖಾನೆಗಳ ಆಡಳಿತ ಮಂಡಳಿ ದರ ಪ್ರಕಟಿಸುವುದು ರೂಢಿ. ಕೊನೆಗೆ ಕೊಟ್ಟಷ್ಟು ಹಣ ಪಡೆದು ನಿರುಮ್ಮಳವಾಗುವುದು ಕಬ್ಬು ಬೆಳೆಯುವ ರೈತರ ಪಾಡು. ಇದೇ ಕಾರಣಕ್ಕೆ ನಾಲ್ಕಾರು ಜಿಲ್ಲೆಗಳ ರೈತರು ಈ ವರ್ಷವೂ ಬೀದಿಗಿಳಿದಿದ್ದಾರೆ. ಕಬ್ಬು ಕಟಾವು, ಸಾಗಣೆ ವೆಚ್ಚವನ್ನು ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳೇ ಭರಿಸುತ್ತವೆ. ಈ ವೆಚ್ಚ ಕಡಿತಗೊಳಿಸಿದರೆ ರೈತರಿಗೆ ಟನ್ ಕಬ್ಬಿಗೆ ಸಿಗುವುದು 2,200ರಿಂದ 3,100 ರು. ಮಾತ್ರ. ಇಲ್ಲಿ ಮೋಸವಾಗುತ್ತಿದೆ. ಇದರಿಂದ ‘ನ್ಯಾಯದ ದರ’ ಸಿಗುತ್ತಿಲ್ಲ ಎಂಬುದು ರೈತರ ವಾದ.

ರಾಜ್ಯ ಸಲಹಾ ಬೆಲೆ ಸಮಿತಿ

ಎಫ್‌ಆರ್‌ಪಿ(ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ) ಜತೆಗೆ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಘೋಷಿಸಲು ಆಯಾ ರಾಜ್ಯಗಳಿಗೆ ಅವಕಾಶವಿದೆ. ಆ ಪ್ರಕಾರ ಕರ್ನಾಟಕ ಸರಕಾರವೂ ಹೆಚ್ಚುವರಿ ದರ ನೀಡಬೇಕು. ಉಪ ಉತ್ಪನ್ನ ಆದಾಯವನ್ನು ರೈತರಿಗೂ ಹಂಚಿಕೆ ಮಾಡಬೇಕು. ವಿಪರ್ಯಾಸ ಎಂದರೆ, ಟನ್ ಕಬ್ಬು ಬೆಳೆಯಲು 3,700 ರು. ವೆಚ್ಚವಾಗುತ್ತದೆ ಎಂದು ರಾಜ್ಯ ಸರಕಾರವೇ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಟನ್ ಕಬ್ಬಿಗೆ 4,400 ರು. ಎಫ್‌ಆರ್‌ಪಿ ನಿಗದಿ ಮಾಡಬೇಕು ಎಂದೂ ಶಿಫಾರಸು ಮಾಡಿದೆ. ಹೀಗಿದ್ದರೂ ಟನ್‌ಗೆ 3,500 ರು. ದರ ನೀಡುವ ರೈತರ ಬೇಡಿಕೆಗೆ ಸರಕಾರ ಸ್ಪಂದಿಸುತ್ತಿಲ್ಲ.

ಲಿಕ್ಕರ್ ವಹಿವಾಟಿನಿಂದ ಹೇರಳ ಆದಾಯ

ಸಕ್ಕರೆ ಮತ್ತು ಉಪ ಉತ್ಪನ್ನಗಳ ವಹಿವಾಟಿನಿಂದ ರಾಜ್ಯ ಸರಕಾರಕ್ಕೆ ಸಾವಿರಾರು ಕೋಟಿ ರು. ಆದಾಯವಿದೆ. ನಿಖರವಾಗಿ ಇಷ್ಟು ಆದಾಯವಿದೆ ಎಂದು ಸರಕಾರ ಎಲ್ಲೂ ಬಹಿರಂಗಪಡಿಸಿಲ್ಲ. ಸಕ್ಕರೆ ವಹಿವಾಟಿಗಿಂತಲೂ ಉಪ ಉತ್ಪನ್ನ ಸ್ಪಿರಿಟ್ / ಲಿಕ್ಕರ್ ವಹಿವಾಟಿನಿಂದ ಹೇರಳ ಆದಾಯ ಸರಕಾರಕ್ಕೆ ಹರಿದು ಬರುತ್ತದೆ. ಅಂದಾಜಿನ ಪ್ರಕಾರ, ಸಕ್ಕರೆ ಮತ್ತು ಉಪ ಉತ್ಪನ್ನಗಳಿಂದ ವಾರ್ಷಿಕ 5ರಿಂದ 6 ಸಾವಿರ ಕೋಟಿ ರು. ಆದಾಯ ಬೊಕ್ಕಸಕ್ಕೆ ಸಂದಾಯವಾಗುತ್ತದೆ.

ಕಬ್ಬನ್ನು ಅರೆದ 14 ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಬೇಕು ಎಂದು ಶುಗರ್ ಕೇನ್ ಕಂಟ್ರೋಲ್ ಆರ್ಡರ್ 1966 (ತಿದ್ದುಪಡಿ 2006)ನಲ್ಲಿ ಉಲ್ಲೇಖವಿದೆ. ಈ ನಿಯಮ ಪಾಲನೆಯಾದದ್ದು ವಿರಳ. ಸಾಮಾನ್ಯವಾಗಿ ಹಣ ಪಾವತಿಸುವ ಅವಧಿ 10ರಿಂದ 15 ತಿಂಗಳು. ಅದೂ ಎರಡು ಕಂತಿನಲ್ಲಿ ಪಾವತಿ ಮಾಡಲಾಗುತ್ತದೆ.

ಕಾರ್ಖಾನೆಯೊಂದರ 20 ಕಿ.ಮೀ. ವ್ಯಾಪ್ತಿಯಲ್ಲಿ ಬೆಳೆಯುವ ಕಬ್ಬನ್ನು ಖರೀದಿಸಲು ಅವಕಾಶವಿದೆ. ದೂರದಲ್ಲಿ ಬೆಳೆದ ಕಬ್ಬನ್ನೂ ಕಾರ್ಖಾನೆಗಳು ಖರೀದಿಸುತ್ತವೆ. ಇದರಿಂದ ಸಾಗಣೆ ವೆಚ್ಚ ವಿಪರೀತವಾಗುತ್ತದೆ. ಈ ಅಧಿಕ ವೆಚ್ಚ ಸರಿದೂಗಿಸುವ ಉದ್ದೇಶಕ್ಕೂ ಕಾರ್ಖಾನೆಗಳು ಕಬ್ಬು ಖರೀದಿ ದರ ಹೆಚ್ಚಿಸುತ್ತಿಲ್ಲ ಎಂಬ ಆರೋಪವಿದೆ.

ಎಪಿಎಂಸಿ ಮೂಲಕ ವೇಬ್ರಿಡ್ಜ್ ಸ್ಥಾಪಿಸದ ಸರ್ಕಾರ

ಸಕ್ಕರೆ ಕಾರ್ಖಾನೆಗಳೇ ನಿರ್ವಹಿಸುವ ವೇಬ್ರಿಜ್‌ಗಳಲ್ಲಿ ಕಬ್ಬು ತೂಕ ಮಾಡುವಾಗ ಕಡಿಮೆ ಲೆಕ್ಕ ತೋರಿಸಿ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವತ್ರಿಕವಾಗಿದೆ. ಅಲ್ಲದೇ, ಬಹುತೇಕ ಕಾರ್ಖಾನೆಗಳಲ್ಲಿ ರೈತರಿಂದ ಖರೀದಿಸುವ ಕಬ್ಬು ತೂಗಲು ಒಂದು ಯಂತ್ರವಾದರೆ, ಕಾರ್ಖಾನೆಗಳು ಮಾರಾಟ ಮಾಡುವ ಸಕ್ಕರೆ ತೂಗಲು ಇನ್ನೊಂದು ಯಂತ್ರ ಇರುತ್ತದೆ. ಕಳ್ಳಾಟ ನಡೆಯುವುದು ಇದರಿಂದ ಸ್ಪಷ್ಟವಾಗುತ್ತದೆ ಎಂಬುದು ರೈತರ ವಿವರಣೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಖಾನೆಗಳಿಗೆ ರೈತರು ಪೂರೈಸುವ ಕಬ್ಬಿನ ತೂಕ ಮಾಡಲು ಎಪಿಎಂಸಿ ಮೂಲಕ ವೇಬ್ರಿಡ್ಜ್ ಸ್ಥಾಪಿಸುವುದಾಗಿ ಸರಕಾರ ಎರಡು ವರ್ಷಗಳ ಹಿಂದೆಯೇ ಬಜೆಟ್‌ನಲ್ಲಿ ಘೋಷಿಸಿದೆ. ಆದರೆ, ಈವರೆಗೂ ಒಂದು ವೇಬ್ರಿಡ್ಜ್ ಕೂಡ ಸ್ಥಾಪನೆಯಾಗದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ.

ಉಪಉತ್ಪನ್ನಗಳ ಆದಾಯ ಹಂಚಿಕೆ ಇಲ್ಲ

ಸಕ್ಕರೆ ಉಪ ಉತ್ಪನ್ನಗಳಾದ ಪ್ರೆಸ್ ಮಡ್, ವಿದ್ಯುತ್, ಸ್ಪಿರಿಟ್ (ಲಿಕ್ಕರ್) ಅಥವಾ ಎಥೆನಾಲ್ ಹಾಗೂ ಬಯೋಗ್ಯಾಸ್ ಮಾರಾಟದಿಂದಲೂ ಕಾರ್ಖಾನೆಗಳಿಗೆ ಆದಾಯ ಬರುತ್ತದೆ. ಇವುಗಳ ಆದಾಯವನ್ನೂ ಹಂಚಿಕೆ ಮಾಡಬೇಕು.

ಕೇಂದ್ರ ಸರ್ಕಾರವು ಪ್ರತಿ ಟನ್‌ ಕಬ್ಬಿಗೆ ನಿಗದಿಪಡಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ಆಧಾರದಲ್ಲಿ ರಾಜ್ಯದಲ್ಲಿ ಬೆಲೆ ನಿಗದಿ ಮಾಡಲಾಗಿದ್ದರೂ, ರಾಜ್ಯ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಪರ ನಿಲುವು ಹೊಂದಿರುವುದು ಮೇಲ್ನೋಟಕೆ ಕಾಣುತ್ತದೆ. ಸಕ್ಕರೆ ಕಾರ್ಖಾನೆಗಳು ಕಬ್ಬಿನ ಉಪ ಉತ್ಪನ್ನ ಮುಖಾಂತರ ಸಾಕಷ್ಟು ಲಾಭವನ್ನು ಮಾಡುತ್ತಿರುವ ವಿಷಯ ಗೊತ್ತಿದ್ದು ಕೂಡ ರಾಜ್ಯ ಸರ್ಕಾರ ಯಾವ ರೈತ ಪರ ನಿಲುವನ್ನೂ ತೆಗೆದುಕೊಂಡಿಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆಗಳು ಕಡಿಮೆ ದರ ನೀಡಲು ಮುಂದಾಗಿವೆ. ಈ ಕಾರಣಕ್ಕೆ ರಾಜ್ಯದ ಗಡಿ ಭಾಗದ ಜಿಲ್ಲೆಗಳ ಕಬ್ಬು ಬೆಳೆಗಾರರು ಹೆಚ್ಚಿನ ದರ ನೀಡುತ್ತಿರುವ ಮತ್ತು ಸಕಾಲದಲ್ಲಿ ಹಣ ಪಾವತಿಸುತ್ತಿರುವ ಹೊರರಾಜ್ಯಗಳ ಸಕ್ಕರೆ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದಾರೆ.

ಕಾಂಗ್ರೆಸ್ಸಿಂದ ಕಾರ್ಖಾನೆಗಳಿಗೆ ಲಾಭ

‘ಕಬ್ಬು ಅರೆಯುವ ಕಾರ್ಖಾನೆಗಳು ಸಕ್ಕರೆಯನ್ನಷ್ಟೇ ಉತ್ಪಾದಿಸುವುದಿಲ್ಲ. ಮೊಲಾಸಿಸ್, ಎಥೆನಾಲ್, ವಿದ್ಯುತ್ ಅನ್ನು ಉತ್ಪಾದಿಸುತ್ತವೆ. ಇವುಗಳಿಂದಲೂ ಕಾರ್ಖಾನೆಗಳ ಮಾಲೀಕರು ಲಾಭ ಗಳಿಸುತ್ತಾರೆ. ಹೆಚ್ಚು ಲಾಭ ಬರುವಾಗ ನಮಗೆ ಉತ್ತಮ ದರ ನೀಡಲು ಅವರಿಗೆ ಯಾಕೆ ಸಾಧ್ಯವಿಲ್ಲ’ ಎಂಬುದು ಬೆಳೆಗಾರರ ಪ್ರಶ್ನೆ.

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಗುತ್ತಿಗೆ ಕೃಷಿಯು ಸ್ಥಿರ ಅಧ್ಯಾಯ, ಮತ್ತು ತಾಂತ್ರಿಕ ಬೆಂಬಲ ಮತ್ತು ನಿಶ್ಚಿತ ಮಾರುಕಟ್ಟೆಯನ್ನು ಒದಗಿಸುವ ಮೂಲಕ ರೈತರಿಗೆ ಆರ್ಥಿಕವಾಗಿ ಸಹಕಾರಿಯಾಗಿದೆ. ಆದರೆ ಪಾರದರ್ಶಕತೆ ಮತ್ತು ನ್ಯಾಯವುತ ಒಪ್ಪಂದದ ನಿಯಮಗಳು ಈ ವ್ಯವಸ್ಥೆ ಯಶಸ್ಸಿಗೆ ಸಹಕಾರಿಯಾಗುತ್ತದೆ ಸರ್ಕಾರವು ನಿಯಂತ್ರಕನ್ನ ಪಾತ್ರ ವಹಿಸಿ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಮುಖ್ಯವಾಗಿದೆ.

ಕೇಂದ್ರ ಸರ್ಕಾರವು 2025ರ ಸಾಲಿಗೆ ಶೇಕಡಾ 10.25 ರಷ್ಟು ಇಳುವರಿ ಇರುವ ಟನ್ ಕಬ್ಬಿಗೆ ರೂ 3,550 ನಿಗದಿ ಮಾಡಿದೆ. ಇದರ ಆಧಾರದಲ್ಲಿ ರಾಜ್ಯ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ರಾಜ್ಯದಲ್ಲಿರುವ 81 ಕಾರ್ಖಾನೆಗಳು 25-26 ಸಾಲಿಗೆ ಬೆಳೆಗಾರರಿಗೆ ಮೊದಲ ಕಂತಿನಲ್ಲಿ ಪಾವತಿಸಬೇಕಾದ ದರವನ್ನು ನಿಗದಿಪಡಿಸಿ ಸೆಪ್ಟೆಂಬರ್ 15 ರಂದು ಆದೇಶ ಹೊರಡಿಸಿದ್ದಾರೆ . 2024-25 ಸಾಲಿನಲ್ಲಿ ಕಾರ್ಖಾನೆಗಳಲ್ಲಿ ಅರೆದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯ ಆಧಾರದಲ್ಲಿ ಎಫ್ ಆರ್ ಪಿ ನಿಗದಿಪಡಿಸಲಾಗಿದೆ.

ರೈತರ ಪರ ನಿಲ್ಲದ ಕಾಂಗ್ರೆಸ್ ಸರ್ಕಾರ

ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ನ್ಯಾಯಸಮ್ಮತ ಹಾಗೂ ಲಾಭದಾಯಕ (ಎಫ್‌ಆರ್‌ಪಿ) ಬೆಲೆ ಹೆಚ್ಚಿಸುತ್ತದೆ. ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳು ಇಳುವರಿ ಪ್ರಮಾಣದ ಮಿತಿಯನ್ನೂ ಏರಿಸುವ ಮೂಲಕ ರೈತರಿಗೆ ಲಾಭವೇ ಸಿಗದಂತೆ ಮಾಡುತ್ತಿವೆ. ಹೀಗಾಗಿ, ಈ ಬಾರಿ ರೈತರು ನಿರ್ಣಾಯಕ ಹೋರಾಟಕ್ಕೆ ನಿಂತಿದ್ದಾರೆ. ಪ್ರತಿ ಟನ್‌ಗೆ ₹3,500 ದರ ನೀಡಬೇಕು, ಇಳುವರಿ ಪ್ರಮಾಣದ (ರಿಕವರಿ ರೇಟ್) ಮಿತಿಯನ್ನೂ ಶೇ 9.5ಕ್ಕೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ