ಸಿಬಿಐ ಕುಣಿಕೆಯಿಂದ ಡಿಕೆಶಿ ಸದ್ಯಕ್ಕೆ ಬಚಾವ್‌; ಮುಂದಿದೆ ಸವಾಲು!

By Kannadaprabha News  |  First Published Nov 30, 2023, 6:10 AM IST

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುಮೋದನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪರಿಗಣಿಸಿರುವ ಹೈಕೋರ್ಟ್‌, ಈ ಕುರಿತು ಶಿವಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿ ಹಾಗೂ ಮೇಲ್ಮನವಿಯನ್ನು ಹಿಂಪಡೆಯಲು ಅನುಮತಿ ನೀಡಿ, ಪ್ರಕರಣ ಇತ್ಯರ್ಥಪಡಿಸಿದೆ.


ಬೆಂಗಳೂರು (ನ.30): ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುಮೋದನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪರಿಗಣಿಸಿರುವ ಹೈಕೋರ್ಟ್‌, ಈ ಕುರಿತು ಶಿವಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿ ಹಾಗೂ ಮೇಲ್ಮನವಿಯನ್ನು ಹಿಂಪಡೆಯಲು ಅನುಮತಿ ನೀಡಿ, ಪ್ರಕರಣ ಇತ್ಯರ್ಥಪಡಿಸಿದೆ.

ಇದರಿಂದಾಗಿ ಹೈಕೋರ್ಟ್‌ ಆದೇಶದಿಂದ ಡಿ.ಕೆ.ಶಿವಕುಮಾರ್‌ ಸದ್ಯ ನಿರಾಳರಾಗಿದ್ದಾರೆ. 

Tap to resize

Latest Videos

 News Hour: ಮೇಲ್ಮನವಿ ವಾಪಾಸ್‌ ಪಡೆದ ಡಿಕೆಡಿ, ಜೈಲಿಗೆ ಹೋಗೋಕೆ ರೆಡಿಯಾಗಿ ಎಂದ ಬಿಜೆಪಿ!

ಆದರೆ ಸರ್ಕಾರದ ನಿರ್ಧಾರವನ್ನು ಸಿಬಿಐ ಅಥವಾ ಯಾರಾದರೂ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲು ಹತ್ತಿದರೆ ಪುನಃ ಕಾನೂನು ಹೋರಾಟ ಮುಂದುವರೆಯುವ ಸಾಧ್ಯತೆ ಇದೆ. ಮತ್ತೊಂದೆಡೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೈಗೊಂಡಿರುವ ಕ್ರಿಮಿನಲ್‌ ಪ್ರಕ್ರಿಯೆ ಇನ್ನೂ ದೆಹಲಿ ‘ಇ.ಡಿ.’ ವಿಶೇಷ ನ್ಯಾಯಾಲಯದಲ್ಲಿ ಬಾಕಿಯಿದೆ.

ಹೈಕೋರ್ಟ್‌ನಲ್ಲಿ ಏನಾಯ್ತು?:

ಬುಧವಾರ ವಿಚಾರಣೆ ವೇಳೆ, ‘ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಾಲಿ ರಾಜ್ಯ ಸರ್ಕಾರ ನ.24ರಂದು ಹಿಂಪಡೆದು ನ.28ರಂದು ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ರದ್ದುಪಡಿಸುವಂತೆ ನಾನು ಮಾಡಿರುವ ಮನವಿ ಅಮಾನ್ಯವಾಗಲಿದೆ. ಆದ್ದರಿಂದ ಈ ಮನವಿಗೆ ಸಂಬಂಧಿಸಿದ ತಕರಾರು ಅರ್ಜಿ ಮತ್ತು ಮೇಲ್ಮನವಿಯನ್ನು ಹಿಂಪಡೆಯಲು ಅನುಮತಿ ನೀಡಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಡಿ.ಕೆ. ಶಿವಕುಮಾರ್‌ ಮೆಮೊ ಸಲ್ಲಿಸಿದರು.

ಈ ಕುರಿತು ಕೆಲ ಕಾಲ ವಾದ ಆಲಿಸಿದ ಮುಖ್ಯ ನ್ಯಾ। ಪಿ.ಬಿ. ವರಾಳೆ ಮತ್ತು ನ್ಯಾ। ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರದ ಅಧಿಸೂಚನೆ ಮತ್ತು ಶಿವಕುಮಾರ್‌ ಅವರ ಮೆಮೊವನ್ನು ಪರಿಗಣಿಸಿ ಮೇಲ್ಮನವಿ ಹಿಂಪಡೆಯಲು ಅನುಮತಿ ನೀಡಿ, ಪ್ರಕರಣವನ್ನು ಇತ್ಯರ್ಥಪಡಿಸಿದೆ.

ಆದೇಶದ ವಿವರ:

ಈವರೆಗೆ ಸಿಬಿಐ ತನಿಖೆಗೆ ನೀಡಿದ್ದ ಅನುಮೋದನೆ ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಯಾರೂ ಪ್ರಶ್ನಿಸಿಲ್ಲ. ಸರ್ಕಾರದ ನಿರ್ಧಾರ ಆಧರಿಸಿ ಮೇಲ್ಮನವಿದಾರರು ತಮ್ಮ ತಕರಾರು ಅರ್ಜಿ ಮತ್ತು ಮೇಲ್ಮನವಿ ಹಿಂಪಡೆಯಲು ಅನುಮತಿ ಕೋರಿ ಮೆಮೊ ಸಲ್ಲಿಸಿದ್ದಾರೆ. ಇದರಿಂದ ಮೇಲ್ಮನವಿಯ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ. ಇನ್ನು ಸಚಿವ ಸಂಪುಟದ ನಿರ್ಣಯ ಕುರಿತಂತೆ ಸಿಬಿಐ ಪರ ವಕೀಲರು ಮತ್ತು ಮೇಲ್ಮನವಿಯಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಾದ ಪರಿಗಣಿಸಲಾಗದು ಎಂದು ಆದೇಶದಲ್ಲಿ ನ್ಯಾಯಪೀಠ ಉಲ್ಲೇಖಿಸಿದೆ.

ಇದಕ್ಕೂ ಮುನ್ನ ರಾಜ್ಯ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರ ಜೊತೆ ಕೋರ್ಟ್‌ಗೆ ಹಾಜರಾದ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಕಪಿಲ್ ಸಿಬಲ್, ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಕುರಿತು ಕಾಂಗ್ರೆಸ್‌ ಸರ್ಕಾರ ಹೊರಡಿಸಿರುವ ಆದೇಶವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ಒಂದು ನೀತಿಯನ್ನು ಸರ್ಕಾರ ಒಪ್ಪಿಕೊಂಡಾಗ, ನಂತರ ಅಧಿಕಾರಕ್ಕೆ ಬಂದ ಸರ್ಕಾರ ಮತ್ತೊಂದು ನೀತಿಯನ್ನು ಕೈಗೊಳ್ಳುತ್ತದೆ. ಇದು ಪ್ರತಿ ಬಾರಿಯೂ ಸಂಭವಿಸಿದರೆ ಹೇಗೆ, ಅದರ ಪರಿಣಾಮ ಏನು?’ ಎಂದು ಪ್ರಶ್ನಿಸಿತು.

ಅದಕ್ಕೆ ಉತ್ತರಿಸಿದ ಕಪಿಲ್‌ ಸಿಬಲ್‌, ‘ಅನುಮತಿ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಈ ಕುರಿತು ದೆಹಲಿ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆಯ ಸೆಕ್ಷನ್‌ 6 ಸ್ಪಷ್ಟವಾಗಿ ಹೇಳುತ್ತದೆ. ಅನುಮತಿ ಹಿಂಪಡೆದಿರುವುದರಿಂದ ಸದ್ಯದ ಮಟ್ಟಿಗೆ ತನಿಖೆ ಮುಂದುವರಿಸುವ ಅಧಿಕಾರ ಯಾವುದೇ ಪ್ರಾಧಿಕಾರಕ್ಕೆ ಇಲ್ಲ. ಅನುಮತಿ ಹಿಂಪಡೆದ ನಿರ್ಧಾರವನ್ನು ಸಿಬಿಐ ಪ್ರಶ್ನಿಸಿದರೆ ಅದಕ್ಕೆ ಸ್ವಾಗತವಿದೆ’ ಎಂದು ಸ್ಪಷ್ಟಪಡಿಸಿದರು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ಅವರು, ‘ಮೇಲ್ಮನವಿಯನ್ನು ಹಿಂಪಡೆಯಲು ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ತಕರಾರು ಅರ್ಜಿ ಹಿಂಪಡೆಯಲು ಗಂಭೀರ ಆಕ್ಷೇಪವಿದೆ. ಸರ್ಕಾರ ನೀಡಿದ್ದ ಅನುಮತಿ ಆಧರಿಸಿ ಸಿಬಿಐ ಎಫ್ಐಆರ್ ದಾಖಲಿಸಿದೆ, ಭಾಗಶಃ ತನಿಖೆಯೂ ನಡೆದಿದೆ. ಇದೀಗ ಅನುಮತಿ ಹಿಂಪಡೆದಿರುವುದು ಕಾಜಿ ಲೆಂಡುಪ್ ದೋರ್ಜಿ ಮತ್ತು ಸಿಬಿಐ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ’ ಎಂದು ತಿಳಿಸಿದರು.

ಅಲ್ಲದೆ, ‘ರಾಜ್ಯ ಸರ್ಕಾರ ಅನುಮತಿ ಹಿಂಪಡೆದಿರುವುದನ್ನು ಒಪ್ಪಲಾಗದು. ಸಿಬಿಐ ದಾಖಲಿಸಿದ್ದ ಎಫ್‌ಐಆರ್ ರದ್ದತಿಗೆ ಕೋರಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿದೆ. ಹಾಗಾಗಿ, ಸಿಬಿಐ ಈಗಾಗಲೇ ದಾಖಲಿಸಿರುವ ಎಫ್‌ಐಆರ್‌ಗೆ ಸಮ್ಮತಿ ಹಿಂಪಡೆಯುವುದರಿಂದ ಆಗುವ ಪರಿಣಾಮದ ಬಗ್ಗೆ ನ್ಯಾಯಾಲಯ ಯಾವುದೇ ನಿರ್ಧಾರ ಕೈಗೊಳ್ಳಬಾರದು. ಎಫ್ಐಆರ್ ಅನ್ನು ಸರ್ಕಾರ ಹಿಂಪಡೆಯಲಾಗದು. ಕೇವಲ ನ್ಯಾಯಾಲಯ ಎಫ್ಐಆರ್ ವಜಾ ಮಾಡಬಹುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕಾನೂನಿನಲ್ಲಿ ಅನುಮತಿ ಇದ್ದರೆ ಎಫ್ಐಆರ್ ವಿಚಾರದಲ್ಲಿ ಸಿಬಿಐ ಮುಂದುವರಿಯಬಹುದು. ಸದ್ಯ ಎಫ್ಐಆರ್ ವಿಚಾರವನ್ನು ನ್ಯಾಯಾಲಯ ದೂರದಲ್ಲಿಟ್ಟು, ಆ ಕುರಿತು ಯಾವುದೇ ನಿರ್ಧಾರ ಹೇಳುವುದಿಲ್ಲ’ ಎಂದು ಮೌಖಿಕವಾಗಿ ಹೇಳಿತು.

ಇದೇ ವೇಳೆ ಮೇಲ್ಮನವಿದಾರ ಡಿ.ಕೆ.ಶಿವಕುಮಾರ್‌ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಉದಯ್ ಹೊಳ್ಳ ಅವರು, ‘ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಅನುಮೋದನೆ ಹಿಂಪಡೆದು ಆದೇಶಿಸಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದ ತಕರಾರು ಅರ್ಜಿ ಅಮಾನ್ಯಗೊಂಡಿದೆ. ಈ ನೆಲೆಯಲ್ಲಿ ಅರ್ಜಿ ಮತ್ತು ಮೇಲ್ಮನವಿ ಹಿಂಪಡೆಯಲು ಅನುಮತಿಸಬೇಕು’ ಎಂದು ಕೋರಿದರು. ಈ ಕೋರಿಕೆಯನ್ನು ಹೈಕೋರ್ಟ್‌ ಪುರಸ್ಕರಿಸಿತು.

ಪ್ರಕರಣದ ಹಿನ್ನೆಲೆ:

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಸಿಬಿಐ ತನಿಖೆಗೆ ಅನುಮತಿ ನೀಡಿ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ 2022ರ ಸೆ.25ರಂದು ಆದೇಶ ಹೊರಡಿಸಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಶಿವಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿ 2023ರ ಏ.20ರಂದು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಆದೇಶ ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಶಿವಕುಮಾರ್‌ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ವಿಭಾಗೀಯ ಪೀಠ ಆದೇಶ ಮತ್ತು ಸಿಬಿಐ ತನಿಖೆಗೆ ತಡೆ ನೀಡಿತ್ತು. ಈ ಮಧ್ಯೆ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದು ಹಾಲಿ ರಾಜ್ಯ ಸರ್ಕಾರ ನಿರ್ಧರಿಸಿತ್ತು.

ಸಿನಿಮಾ ಸೆನ್ಸಾರ್‌ ಸರ್ಟಿಫಿಕೆಟ್‌ಗೆ ಲಂಚಕ್ಕೆ ಬೇಡಿಕೆ: ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಬಲೆಗೆ

ಸಿಬಿಐ ದಾಖಲಿಸಿದ ಎಫ್‌ಐಆರ್‌ ಇನ್ನೂ ಜೀವಂತ?

ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಿಬಿಐ, ‘ತನಿಖೆ ಭಾಗಶಃ ನಡೆದಿದೆ. ಈಗ ಸರ್ಕಾರ ಅನುಮತಿ ಹಿಂಪಡೆದಿರುವುದು ಸುಪ್ರೀಂಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ. ಸರ್ಕಾರ ಎಫ್‌ಐಆರ್‌ ಹಿಂಪಡೆಯಲು ಆಗದು. ಕೋರ್ಟ್‌ ಮಾತ್ರ ಎಫ್‌ಐಆರ್‌ ವಜಾ ಮಾಡಬಹುದು’ ಎಂದು ಹೇಳಿತು. ‘ಕಾನೂನಿನಲ್ಲಿ ಅನುಮತಿಯಿದ್ದರೆ ಎಫ್‌ಐಆರ್‌ ವಿಚಾರದಲ್ಲಿ ಸಿಬಿಐ ಮುಂದುವರೆಯಬಹುದು. ಆ ಬಗ್ಗೆ ಈಗ ನಾವು ಯಾವುದೇ ನಿರ್ಧಾರ ಹೇಳುವುದಿಲ್ಲ’ ಎಂದು ಹೈಕೋರ್ಟ್‌ ತಿಳಿಸಿತು.

ಪಕ್ಷದ ಕೆಲಸ ಮಾಡಿದ್ದಕ್ಕೆ ನನಗೆ ಇಷ್ಟೆಲ್ಲ ತೊಂದರೆ

ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ, ಅದಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ನನ್ನ ಜೊತೆ ದೇವರು ಮತ್ತು ರಾಜ್ಯದ ಜನ ಇದ್ದಾರೆ. ಕೋರ್ಟ್‌ನಲ್ಲಿ ಏನಾಗಿದೆ ಎಂದು ನನಗೆ ತಿಳಿದಿಲ್ಲ.

ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿ

click me!