ಸಂವಿಧಾನಾತ್ಮಕವಾಗಿ ಒಕ್ಕೂಟ ವ್ಯವಸ್ಥೆಯಲ್ಲಿರುವ ನಾವು ಬರದಿಂದ ನಷ್ಟವಾದಾಗ ಕೇಂದ್ರದಿಂದ ಪರಿಹಾರ ಪಡೆಯುವುದು ನಮ್ಮ ಹಕ್ಕಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಬಳ್ಳಾರಿ (ನ.29): ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಹಣ ಪಾವತಿಯಾಗುತ್ತಿದೆ ರಾಜ್ಯದ ಪಾಲು ಕೇವಲ 30,000 ಕೋಟಿ ಬರುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಬರ ಪರಿಹಾರ ನಮ್ಮ ಹಕ್ಕು ನ್ಯಾಯ ಸಮ್ಮತವಾಗಿ ನೀಡಬೇಕಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಬರ ಪೀಡಿತ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ,ವಿಜಯನಗರ ಜಿಲ್ಲಾ ಕೃಷಿ,ಜಲಾನಯನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ದ್ರ ಸರ್ಕಾರ ಬರ ಪರಿಹಾರ ಅನುದಾನ ಶೀಘ್ರದಲ್ಲೇ ಒದಗಿಸುವ ನಿರೀಕ್ಷೆ ಇದೆ. ಕೇಂದ್ರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರ ಕುಡಿಯುವ ನೀರು ,ಮೇವಿನ ನಿರ್ವಹಣೆಗೆ ಈಗಾಗಲೆ ಹಣ ಬಿಡುಗಡೆ ಮಾಡಿದೆ ಹಾಗೇ ರೈತರ ಹಿತವನ್ನು ಕಾಯಲಾಗುತ್ತದೆ ಎಂದರು.
ಪ್ರಿವೆಂಟಿವ್ ಸೋಯಿಂಗ್ ಇನ್ವೋಕ್ ಹಾಗೂ ಮಧ್ಯಂತರ ಬೆಳೆ ಹಾನಿ ಪರಿಹಾರಕ್ಕೆ ಈಗಾಗಲೇ 343 ಕೊಟಿ ಬಿಡುಗಡೆಯಾಗಿದೆ.ಅದೇ ರೀತಿ ಶೀಘ್ರ ಬರಪರಿಹಾರ ಹಣ ಕೂಡ ರೈತರ ಖಾತೆಗೆ ನೇರವಾಗಿ ಸೇರಲಿದೆ ಅದಕ್ಕೆ ಪೂರಕ ವಾಗಿ ಶೇ 100 ರಷ್ಟು ರೈತರ ವಿವರ ಫ್ರೂಟ್ಸ್ ಐಡಿಗೆ ದಾಖಲಿಸುವ,ಕೆ.ವೈ.ಸಿ ನೊಂದಾಯಿಸುವ ಕಾರ್ಯ ಅಭಿಯಾನದ ಸ್ವರೂಪದಲ್ಲಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ಮೂಲಕ 1.43 ಕೊಟಿ ರೈತರಿಗೆ ಒಟ್ಟಾರೆ 5388 ಕೊಟಿ ರೂ ಸೌಲಭ್ಯ ತಲುಪಿದಂತಾಗುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಮೂಲ 75 ಸಾವಿರ ಕೋಟಿ ಆರ್ಥಿಕ ನೆರವು ರಾಜ್ಯದ ಜನ ಸಾಮಾನ್ಯರಿಗೆ ನೇರವಾಗಿ ತಲುಪುತ್ತಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಕ್ಕೆ ಸೂಚನೆ: ಕೃಷಿ ಮತ್ತು ಜಲಾನಯನ ಇಲಾಖೆ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನ ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಶ್ರಮಿಸಬೇಕು. ಬಳ್ಳಾರಿ, ವಿಜಯನಗರ ಜಿಲ್ಲೆಗಳ ಇಲಾಖಾ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು ಫ್ರೋಟ್ಸ್ ಐಡಿ ನೋಂದಣಿ ಇನ್ನೊಂದು ವಾರದೊಳಗೆ ಪೂರ್ಣಗೊಳಿಸಬೇಕು. ಜಲಸಂರಕ್ಷಣೆ ಯೋಜನೆಗೆ ಆಧ್ಯತೆ ನೀಡಿ ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸಬೇಕು. ಸೂಕ್ಷ್ಮ ನೀರಾವರಿ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೇ.90% ಸಹಾಯಧನದಲ್ಲಿ ಹನಿ ನೀರಾವರಿ ಅಥವಾ ಸ್ಪಿಂಕ್ಲೇರ್ ಸಾಧನ ವಿತರಿಸಲಾಗುತ್ತಿದ್ದ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಮಂಜೂರು ಮಾಡಲಾಗುವುದು.ಈಗಾಗಲೇ ಎಲ್ಲಾ ಅರ್ಹರಿಗೆ SMS ಸಂದೇಶ ರವಾನಿಸಲಾಗಿದೆ ಎಂದರು.
ವಿಮೆ ನೋಂದಣಿ ಹೆಚ್ಚಿಸಲು ಸೂಚನೆ: ಬಳ್ಳಾರಿ ಜಿಲ್ಲೆಯಲ್ಲಿ ಬೆಳೆ ವಿಮೆ ನೊಂದಣಿ ತುಂಬಾ ಕಡಿಮೆ ಇದ್ದು ಇನ್ನು ಮುಂದೆ ಬೆಳೆ ವಿಮೆ ಅನುಕೂಲಗಳ ಬಗ್ಗೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ನೊಂದಣಿ ಹೆಚ್ಚಿಸಬೇಕು. ರಾಜ್ಯದಲ್ಲಿ ಈ ಬಾರಿ 200 ಕೋಟಿ ವೆಚ್ಚದಲ್ಲಿ 32000 ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು. ಡ್ರೈ ಲ್ಯಾಂಡ್ ಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಿ. ಅಲ್ಲದೆ ಇಂತಹ ಪ್ರದೇಶಗಳ ರೈತರಿಗೂ ಬೆಳೆ ಪರಿಹಾರ ಒದಗಿಸಲು ಇರುವ ತೊಡಕು ಬಗೆಹರಿಸಿ. ಎಲ್ಲೆಡೆ ತಪಾಸಣೆ ಹೆಚ್ಚಿಸಿ, ನಕಲಿ ಬೀಜ , ರಸಗೊಬ್ಬರ ಮಾರಾಟದ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ಎಂದರು.
ಕ್ರೀಡಾ ಮತ್ತು ಯುವ ಸಬಲಿಕರಣ ಸಚಿವ ಹಾಗು ಬಳ್ಳಾರಿ ಜಿಲ್ಲಾ ಉಸ್ತುವರಿ ಸಚಿವರಾದ ನಾಗೇಂದ್ರ,ಕಂಪ್ಲಿ ಶಾಸಕರಾದ ಗಣೇಶ್, ಶಿರಗುಪ್ಪ ಶಾಸಕರಾದ ನಾಗರಾಜು, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದರು.