Ghar wapsi: ಕಾಂಗ್ರೆಸ್‌ಗೆ ಸೋಮಶೇಖರ್‌ ಕರೆ ತರಲು ಶಾಸಕ ಶ್ರೀನಿವಾಸ್‌ಗೆ ಡಿಕೆ ಶಿವಕುಮಾರ್‌ ಟಾಸ್ಕ್

By Kannadaprabha NewsFirst Published Aug 18, 2023, 7:23 AM IST
Highlights

ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅಥವಾ ಅವರ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕರೆತರಬೇಕು ಎಂಬ ಟಾಸ್‌್ಕ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನನಗೆ ನೀಡಿದ್ದಾರೆ’ ಎಂದು ನೆಲಮಂಗಲ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶ್ರೀನಿವಾಸ್‌ ತಿಳಿಸಿದ್ದಾರೆ.

ಬೆಂಗಳೂರು (ಆ.18) :  ‘ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅಥವಾ ಅವರ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕರೆತರಬೇಕು ಎಂಬ ಟಾಸ್‌್ಕ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನನಗೆ ನೀಡಿದ್ದಾರೆ’ ಎಂದು ನೆಲಮಂಗಲ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶ್ರೀನಿವಾಸ್‌ ತಿಳಿಸಿದ್ದಾರೆ.

ಗುರುವಾರ ಯಶವಂತಪುರ ಕ್ಷೇತ್ರದಲ್ಲಿ ನಡೆದ ಸೋಮಶೇಖರ್‌ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಬಲಿಗರ ಸಭೆಯಲ್ಲಿ ನಾನೂ ಇದ್ದೆ. ಸಭೆಯಲ್ಲಿ ಮುಂದಿನ ತೀರ್ಮಾನ ಮಾಡಿ ಎಂಬ ಒತ್ತಾಯವನ್ನು ಸೋಮಶೇಖರ್‌ ಅವರಿಗೆ ಬೆಂಬಲಿಗರು ಮಾಡಿದ್ದಾರೆ. ಇಲ್ಲಿ ನಮಗೆ ಉಳಿಗಾಲ ಇಲ್ಲ. ಇಲ್ಲಿ ನಮ್ಮ ವಿರುದ್ಧ ಪಿತೂರಿ ನಡೀತಿದೆ ಎಂಬ ಮಾತನ್ನು ಅವರ ಬೆಂಬಲಿಗರು ಹೇಳಿದ್ದಾರೆ. ಸೋಮಶೇಖರ್‌ ಅವರು ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ ಎಂದು ಮಾಹಿತಿ ನೀಡಿದರು.

 

Ghar vapasi: 'ಬೆಂಗಳೂರಿಗೆ ಹೋಗಿ ನಿರ್ಧರಿಸುತ್ತೇನೆ' ಬಿಜೆಪಿ ಶಾಸಕ ಹೆಬ್ಬಾರ್ ನಡೆ ಸಸ್ಪೆನ್ಸ್

ಯಶವಂತಪುರ ಕ್ಷೇತ್ರದಲ್ಲಿ ಸೋಮಶೇಖರ್‌(ST Somashekhar) ಅಥವಾ ಅವರ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕರೆತರಬೇಕು ಎಂಬ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ. ಸೋಮಶೇಖರ್‌ ಬೆಂಬಲಿಗರು ಕಾಂಗ್ರೆಸ್‌ ಸೇರುವುದಾಗಿ ತಿಳಿಸಿದ್ದಾರೆ. ಬೆಂಬಲಿಗರು ಕಾಂಗ್ರೆಸ್‌ಗೆ ಬಂದ ಮೇಲೆ ಸೋಮಶೇಖರ್‌ ಅವರು ಬಿಜೆಪಿಯಲ್ಲೇ ಇರುವುದಕ್ಕೆ ಸಾಧ್ಯವೇ? ಅವರೂ ಕಾಂಗ್ರೆಸ್‌ಗೆ ಬರುವ ನಿರೀಕ್ಷೆಯಿದೆ ಎಂದರು.

ಸ್ಥಳೀಯವಾಗಿ ಇಲ್ಲಿ ಸೋಮಶೇಖರ್‌ ಮತ್ತು ಅವರ ಬೆಂಬಲಿಗರ ಕತ್ತು ಕುಯ್ಯುವ ಕೆಲಸ ಆಗುತ್ತಿದೆ. ಅವರನ್ನು ಸೋಲಿಸಲು ಸ್ಥಳೀಯ ಬಿಜೆಪಿಯ ಅನೇಕರು ಜೆಡಿಎಸ್‌ ಜತೆ ಕೈ ಜೋಡಿಸಿದರು. ಆದರೂ ಸೋಮಶೇಖರ್‌ ಅವರು ತಮ್ಮ ಸ್ವಂತ ಬಲದಿಂದ ಗೆÜದ್ದು ಬಂದರು ಎಂದು ಶ್ರೀನಿವಾಸ್‌ ಹಾಡಿ ಹೊಗಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸೋಮಶೇಖರ್‌ ಒಬ್ಬ ಶಾಸಕರು. ಶಾಸಕರು ನಮ್ಮ ಕಾಂಗ್ರೆಸ್‌ಗೆ ಬರುತ್ತಾರೆ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒಪ್ಪಿಕೊಳ್ಳುತ್ತಾರೆ. ಚುನಾವಣೆಗೆ ಮೊದಲು ಸಿದ್ದರಾಮಯ್ಯ ಅವರು ಒಪ್ಪಿರಲಿಲ್ಲ. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಒಪ್ಪಿಕೊಳ್ಳುತ್ತಾರೆ ಎಂದು ತಿಳಿಸಿದರು.

Ghar Vapasi: ನನ್ನ ವಿರುದ್ಧ ಪಕ್ಷದಲ್ಲೇ ಪಿತೂರಿ; ಬಿಜೆಪಿಯ ಶಾಸಕ ಸೋಮಶೇಖರ್‌ ಬಹಿರಂಗ ಅತೃಪ್ತಿ

ಸೋಮಶೇಖರ್‌ ಬರದಿದ್ದರೆ ನಮ್ಮ ದಾರಿಗೆ ನಮಗೆ: ಚಿಕ್ಕರಾಜು

ಮುಂದಿನ ನಿರ್ಧಾರ ಕೈಗೊಳ್ಳಲು ಮೂರ್ನಾಲ್ಕು ದಿನ ಕಾಲಾವಕಾಶ ಕೇಳಿದ್ದಾರೆ ಎಂದು ಸೋಮಶೇಖರ್‌ ಅವರ ಬೆಂಬಲಿಗರೂ ಆಗಿರುವ ಬಿಬಿಎಂಪಿ ಮಾಜಿ ಸದಸ್ಯ ಚಿಕ್ಕರಾಜು ಹೇಳಿದ್ದಾರೆ. ಸ್ಥಳೀಯ ಬಿಜೆಪಿಯವರು ಬೆಳೆಯಲು ಬಿಡುತ್ತಿಲ್ಲ. ನೀವು ಗೆಲ್ಲುವುದಕ್ಕೂ ಅವರು ಕೆಲಸ ಮಾಡುವುದಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಹೋಗೋಣ ಎಂಬ ಮಾತನ್ನು ಹೇಳಿದ್ದೇವೆ. ಬಿಜೆಪಿ ಪಕ್ಷದ ವರಿಷ್ಠರ ಜತೆ ಮಾತನಾಡಿ ಸರಿಪಡಿಸುವೆ ಎಂದಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸೋಮಶೇಖರ್‌ ಅವರು ತೀರ್ಮಾನ ತಿಳಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

click me!