
ಬೆಂಗಳೂರು ಫೆ.21 : ಆ ಭಗವಂತ ಬಂದರೂ ಎರಡ್ಮೂರು ವರ್ಷದಲ್ಲಿ ಬೆಂಗಳೂರನ್ನು ಸರಿಪಡಿಸಲು ಸಾಧ್ಯವಿಲ್ಲ. ಭವಿಷ್ಯದ ಬೆಂಗಳೂರಿಗಾಗಿ ಈಗಿನಿಂದಲೇ ಉತ್ತಮ ಯೋಜನೆ ರೂಪಿಸಿದರೆ ಮಾತ್ರ ಸರಿಪಡಿಸಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಡಾ। ರಾಜಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ ನಮ್ಮ ರಸ್ತೆ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯ ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ನಾವು ಮೋಸ ಮಾಡಿದಂತೆ ಎಂದರು.
ನಗರದಲ್ಲಿ ಏಕ ರೂಪ ವ್ಯವಸ್ಥೆ ಇರಬೇಕು ಎಂಬ ಕಾರಣಕ್ಕೆ ರಸ್ತೆ ಕೈಪಿಡಿ ರಚನೆಗೆ ಸೂಚಿಸಲಾಗಿತ್ತು. ಅದರಂತೆ ಇದೀಗ ರೂಪಿಸಲಾಗಿದ್ದು, ಈ ಕೈಪಿಡಿ ರಸ್ತೆ ಬದಿ ಸಸಿಗಳನ್ನು ಎಲ್ಲಿ ನೆಡಬೇಕು, ಕಂಬಗಳು ಎಲ್ಲಿರಬೇಕು, ಮುಖ್ಯರಸ್ತೆ ಹೇಗಿರಬೇಕು, ವಾರ್ಡ್ ರಸ್ತೆಗಳು ಹೇಗಿರಬೇಕು, ಪಾದಚಾರಿ ಮಾರ್ಗಗಳನ್ನು ಹೇಗೆ ನಿರ್ಮಾಣ ಮಾಡಬೇಕು. ಬಸ್ ನಿಲ್ದಾಣಗಳ ವಿನ್ಯಾಸ, ಮೆಟ್ರೋ ಪಿಲ್ಲರ್‌ಗಳು, ವೃತ್ತಗಳ ಸೌಂದರ್ಯೀಕರಣದ ಬಗ್ಗೆ ಹೊಸ ಆಲೋಚನೆಗಳನ್ನು ಇಲ್ಲಿ ನೋಡಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರಿಗೆ ಲೋಕಾಯುಕ್ತ ಕ್ಲೀನ್‌ಚಿಟ್; ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದೇನು?
ಎಂಜಿನಿಯರ್‌ಗಳು, ರಾಜಕಾರಣಿಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಇಂದು ಅಧಿಕಾರದಲ್ಲಿ ಇರುತ್ತಾರೆ, ನಾಳೆ ಹೋಗುತ್ತಾರೆ. ಅಧಿಕಾರ ಸಿಕ್ಕಾಗ ಅವರದೇ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಯಾರೂ ಇಲ್ಲದೇ ಇದ್ದರೂ ‘ನಮ್ಮ ರಸ್ತೆʼ ಎನ್ನುವ ಕೈಪಿಡಿ ಕೆಲಸ ಮಾಡಲು ಮಾರ್ಗದರ್ಶನ ನೀಡುತ್ತದೆ. ಕೈಪಿಡಿಯಲ್ಲಿ ಇರುವ ನಿಯಮಗಳ ಅನುಸಾರವೇ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸುರಂಗ ರಸ್ತೆಗೆ ಸಾಕಷ್ಟು ಸವಾಲು:
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸುರಂಗ ರಸ್ತೆ ನಿರ್ಮಾನಕ್ಕೆ ಮುಂದಾಗಿದ್ದೇವೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಈ ವರೆಗೆ ಟೆಂಡರ್ ಆಹ್ವಾನಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಭೂಸ್ವಾಧೀನ ಸಮಸ್ಯೆ, ಹಣಕಾಸಿನ ಸಮಸ್ಯೆ ಹಾಗೂ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗುತ್ತಿವೆ ಎಂದು ಹೇಳಿದರು.
ಸಭೆಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ಬಿಎಂಆರ್ ಡಿಎ ಕಾರ್ಯದರ್ಶಿ ರಾಜೇಂದ್ರ ಚೋಳನ್, ಡಬ್ಲ್ಯೂಆರ್‌ಐ ಸಿಇಒ ಮಾಧವ ಪೈ, ಭಾರತೀಯ ವಿಜ್ಞಾನ ಸಂಸ್ಥೆಯ ಫ್ರೊ.ಆಶಿಶ್ ವರ್ಮಾ, ನಗರ ತಜ್ಞರಾದ ಆರ್.ಕೆ ಮಿಶ್ರಾ, ನರೇಶ್ ನರಸಿಂಹನ್ ಉಪಸ್ಥಿತರಿದ್ದರು.
ಓಎಫ್‌ಸಿ ಕೇಬರ್ ತೆರವಿಗೆ ಸೂಚನೆ
ನಗರದಲ್ಲಿ ನೇತಾಡುವ ರೀತಿಯಲ್ಲಿ ಹಾಕಿರುವ ಎಲ್ಲಾ ಕೇಬಲ್‌ಗಳನ್ನು ಕಿತ್ತು ಹಾಕಬೇಕು. ಕಡ್ಡಾಯವಾಗಿ ರಸ್ತೆ ಪಕ್ಕದಲ್ಲಿ ಅಳವಡಿಕೆ ಮಾಡಿರುವ ಡಕ್ ಮೂಲಕ ಕೇಬಲ್ ಸಾಗಿಸಬೇಕು. ಏನಾದರೂ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದು ಇಷ್ಟು ದಿನ ಕಾದು ನೋಡಿದೆ. ಯಾವುದೇ ಬದಲಾವಣೆ ಆಗಿಲ್ಲ, ಕೇಬಲ್‌ಗಳನ್ನು ಕತ್ತರಿಸಿ ಎಂದು ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್ ಸೂಚಿಸಿದರು.
ಇದನ್ನೂ ಓದಿ: 'ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯೋಲ್ಲ, ಯಾರು ಕೇಳ್ತಾರೆ ಇವೆಲ್ಲ? ಡಿಕೆ ಶಿವಕುಮಾರ ಹೇಳಿಕೆಗೆ ರಾಜಣ್ಣ ತಿರುಗೇಟು!
ನಮ್ಮ ರಸ್ತೆ ಕೈಪಿಡಿ ಬಿಡುಗಡೆ
‘ನಮ್ಮ ರಸ್ತೆ ಕೈಪಿಡಿ’ಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದರು. ಕೈಪಿಡಿಯಲ್ಲಿ ರಸ್ತೆಯ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಚಿತ್ರ ಸಮೇತ ವಿವರಿಸಲಾಗಿದೆ. ಈ ಕೈಪಿಯು ಬಿಬಿಎಂಪಿಯ 12,878.78 ಕಿ.ಮೀ. ಉದ್ದ ರಸ್ತೆಗಳಲ್ಲಿ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬುದರ ಪ್ರಮಾಣಿತ ಕಾರ್ಯ ವಿಧಾನ (ಎಸ್‌ಒಪಿ) ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ