ಮಹಿಳೆಯರಿಗೆ ಉಚಿತ ಬಸ್ ಪಾಸ್ ಜಾರಿಯಾಗಲಿದೆ. ಕೆಎಸ್ಆರ್‌ಟಿಸಿ ನಡಿಬೇಕಲ್ಲ, ಅದಕ್ಕೆ ಗಂಡಸ್ರು ಟಿಕೇಟ್ ತಕೊಳ್ರಪ್ಪ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ರಾಮನಗರ (ಜೂ.03): ರಾಜ್ಯದಲ್ಲಿ ನಾವು ಕೊಟ್ಟ ಐದು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಇದೇ ತಿಂಗಳ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಜಾರಿಯಾಗಲಿದೆ. ಎಲ್ಲಿಗೆ ಬೇಕಾದರೂ ಹೋಗಿ, ಓಡಾಡಬಹುದು. ಆದರೆ, ಗಂಡಸರು ಟಿಕೆಟ್ ತೆಗೆದುಕೊಂಡು ಓಡಾಡಿ. ಯಾಕಂದ್ರೆ ಕೆಎಸ್ಆರ್‌ಟಿಸಿ ನಡಿಬೇಕಲ್ಲ, ಅದಕ್ಕೆ ಗಂಡಸ್ರು ಟಿಕೇಟ್ ತಕೊಳ್ರಪ್ಪ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ರಾಮನಗರ ಜಿಲ್ಲೆಯ ಕನಪುರದಲ್ಲಿ ಶನಿವಾರ ನಡೆದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗಲಿದೆ. ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ 2ಸಾವಿರ ರೂ. ಕೊಡ್ತೀವಿ. ಯಾರು ಯಜಮಾನಿ ಅಂತ ನೀವು ತೀರ್ಮಾನ ಮಾಡ್ಕೊಳಿ. ಜೂ.15ರಿಂದ ಜು.15ರ ವರೆಗೆ ಅರ್ಜಿ ಹಾಕೊಳ್ಳಿ. ಇನ್ನು ಇದೇ ತಿಂಗಳು 11ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್. ಎಲ್ಲಿಗೆ ಬೇಕಾದರೂ ಹೋಗಿ, ಓಡಾಡಿ. ಗಂಡಸ್ರು ಟಿಕೇಟ್ ತಕೊಂಡು ಓಡಾಡಿ. ಕೆಎಸ್ಆರ್ ಟಿಸಿ ನಡಿಬೇಕಲ್ಲ, ಅದಕ್ಕೆ ಗಂಡಸ್ರು ಟಿಕೇಟ್ ತಕೊಳ್ರಪ್ಪ. ಯಾರೂ ಜಗಳ ಮಾಡ್ಕೊಬೇಡಿ. ಅತ್ತೆ-ಸೊಸೆ ಜಗಳ ಮಾಡ್ಕೊಂಡಿರಾ ಮತ್ತೆ. ಗೃಹಲಕ್ಷ್ಮಿಗೆ ಹೆಣ್ಣುಮಕ್ಕಳ ಅಕೌಂಟ್ ನಂಬರನ್ನೇ ಕೊಡಬೇಕು ಎಂದು ಹೇಳಿದರು.
Odisha Train accident: ಬೆಂಗಳೂರಿನ ಮೂರು ಪ್ರಮುಖ ರೈಲುಗಳು ಕ್ಯಾನ್ಸಲ್
ಯಾರಾದ್ರೂ ಲಂಚ ಕೇಳಿದ್ರೆ ಒದ್ದು ಒಳಗೆ ಹಾಕ್ತೀವಿ: ಪದವಿ ವಿದ್ಯಾರ್ಥಿಗಳಿಗೆ ಯುವನಿಧಿ 3ಸಾವಿರ ಕೊಡ್ತೀವಿ. ಇದಕ್ಕೂ ಯಾರೂ ಲಂಚ ಕೊಡಂಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತಂದಿರೋದಕ್ಕೆ ನಿಮಗೆ ಕೊಡ್ತಿರೋ ಯೋಜನೆ. ಎಲ್ಲರಿಗೂ ಒಳ್ಳೆಯದಾಗಲಿ. ಯಾರಿಗೂ ಲಂಚ ಕೊಡಬೇಡಿ. ಕಾಂಗ್ರೆಸ್‌ಗೆ ಈ ಯೋಜನೆ ಜಾರಿಗೆ ತರಲು ಯಾರಾದ್ರೂ ಲಂಚ ಕೇಳಿದ್ರೆ ನೇರವಾಗಿ ನನಗೆ ದೂರು ನೀಡಿ. ಯಾರಾದ್ರೂ ಲಂಚ ಕೇಳಿದ್ರೆ ಒದ್ದು ಒಳಗೆ ಹಾಕ್ತೀವಿ ಎಂದು ಹೇಳಿದರು.
ನಿಮ್ಮ ತೀರ್ಪಿಗೆ ರಾಜ್ಯದ ಜನತೆ ಖುಷಿ ಪಟ್ಟಿದ್ದಾರೆ: ಕಬ್ಬಾಳು ಗ್ರಾಮದ ಅಭಿನಂದನಾ ಕಾರ್ಯಕ್ರಮ ಇದೊಂದು ಐತಿಹಾಸಿಕವಾದ ದಿನವಾಗಿದೆ. ನಾನು ನಿಮ್ಮ ಉಪಕಾರ ಸ್ಮರಣೆ ನೆನೆಯಲು ಬಂದಿದ್ದೇನೆ. ನೀವು ಕೊಟ್ಟ ಶಕ್ತಿ ಸಾರ್ಥಕ ಆಗುತ್ತದೆ. ರಾಜ್ಯದ ಇತಿಹಾಸದಲ್ಲೇ ಹೆಚ್ಚು ಅಂತರದಲ್ಲಿ ಗೆಲ್ಲಿಸಿದ್ದೀರಿ. ತಾಯಿ ಕಬ್ಬಾಳಮ್ಮ, ಕೆಂಕೆರಮ್ಮನ ಕೃಪೆಯಿಂದ ಆಶೀರ್ವಾದ ಮಾಡಿದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ. ನಿಮ್ಮ ತೀರ್ಪಿಗೆ ರಾಜ್ಯದ ಜನತೆ ಸಂತೋಷ ಪಟ್ಟಿದ್ದಾರೆ. ಈ ಕಬ್ಬಾಳಮ್ಮ ದೇವಸ್ಥಾನ ಹಿಂದೆ ಹೇಗಿತ್ತು, ಈಗ ಹೇಗಿದೆ. ಈ ದೇವಸ್ಥಾನದಿಂದ ಎಷ್ಟೋ ಜನ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ನಾಳೆ ಬೆಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ: ನಿಮ್ಮ ಏರಿಯಾ ಇದೆಯಾ ನೋಡಿ
101 ಈಡುಗಾಯಿ ಹೊಡೆದು ಹರಕೆ ತೀರಿಸಿದ ಡಿಸಿಎಂ: ನಾನು ಮೊದಲ ಬಾರಿಗೆ ಎಲೆಕ್ಷನ್ ಸೋತೆ. ಬಳಿಕ ಮತ್ತೊಂದು ಬಾರಿ ಸ್ಪರ್ಧೆ ಮಾಡಿ ಗೆದ್ದೆ. ಕಬ್ಬಾಳಮ್ಮ ದೇವಾಲಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಈಗ ದೇವಾಲಯಕ್ಕೆ 50 ಲಕ್ಷ ರೂ. ಆದಾಯ ಬರ್ತಿದೆ. ಈ ದೇವಾಲಯ ನಿರ್ಮಾಣ ಮಾಡುವಾಗ ಸಾಕಷ್ಟು ಜನ ವಿರೋಧ ಮಾಡಿದ್ದರು. ಆದರೆ ಬಹಳ ಶ್ರಮವಹಿಸಿ ಇದನ್ನ ಅಭಿವೃದ್ಧಿ ಮಾಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲ ಆಗಿದೆ. ದೇವರು ಅವಕಾಶ ಕೊಟ್ಟಾಗ ಎಲ್ಲರ ಖುಣ ತೀರಿಸಿದ್ದೇವೆ ಎಂದರು. ನಂತರ, ಕಬ್ಬಾಳಮ್ಮ ದೇವಾಲಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಆವರಣದಲ್ಲಿ 101 ಈಡುಗಾಯಿ ಹೊಡೆಯುವ ಮೂಲಕ ಹರಕೆ ತೀರಿಸಿದರು.