ಸಂವಿಧಾನದ ನಿಗದಿತ ನಮೂನೆಯಲ್ಲಿ ಪ್ರಮಾಣ ವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮತ್ತು ಕೆ.ಎನ್. ರಾಜಣ್ಣ ಸೇರಿದಂತೆ 9 ಸಚಿವರು ಹಾಗೂ 37 ಶಾಸಕರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಬೆಂಗಳೂರು (ಡಿ.16) ಸಂವಿಧಾನದ ನಿಗದಿತ ನಮೂನೆಯಲ್ಲಿ ಪ್ರಮಾಣ ವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮತ್ತು ಕೆ.ಎನ್. ರಾಜಣ್ಣ ಸೇರಿದಂತೆ 9 ಸಚಿವರು ಹಾಗೂ 37 ಶಾಸಕರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ಕುರಿತಂತೆ ಬೆಳಗಾವಿ ಜಿಲ್ಲೆಯ ನಿವಾಸಿ ಭೀಮಪ್ಪ ಗುಂಡಪ್ಪ ಗಡಾದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಸಂಸತ್ತಿನಲ್ಲಿ ಸ್ಮೋಕ್ ಬಾಂಬ್:ಪ್ರತಾಪ ಸಿಂಹ, ಅಮಿತ್ ಶಾ ವಿರುದ್ಧ ಆಪ್ ಪ್ರತಿಭಟನೆ
ಸಂವಿಧಾನದ ಪ್ರಕಾರ ಕೇವಲ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕಿದೆ. ಆದರೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ 9 ಸಚಿವರು ಮತ್ತು 37 ಶಾಸಕರು ಮತದಾರರು ಅಥವಾ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದ ಅವರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು ಎಂದು ಕೋರಿದ್ದರು.
ತಮ್ಮ ಕಚೇರಿ ಮತ್ತು ವಿಧಾನಸಭೆಗೆ ಹಾಜರಾದ ಪ್ರತಿ ದಿನಕ್ಕೆ ಸಂವಿಧಾನದ ಪರಿಚ್ಛೇದ 193ರ ಅಡಿಯಲ್ಲಿ (ದಿನಕ್ಕೆ 500 ರು.) ನಿಗದಿಪಡಿಸಿರುವ ದಂಡ ಪಾವತಿಸಲು ಅವರಿಗೆ ನಿರ್ದೇಶಿಸಬೇಕು. ಸಂವಿಧಾನದ ಪರಿಚ್ಛೇದ 188 ಮತ್ತು ಶೆಡ್ಯೂಲ್-3ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ (ದೇವರ ಹೆಸರಿನಲ್ಲಿ) ಪುನಾ ಪ್ರಮಾಣ ವಚನ ಸ್ವೀಕರಿಸಲು ನಿರ್ದೇಶಿಸಬೇಕು. ಈ ಸಚಿವರು ಹಾಗೂ ಶಾಸಕರು ಅಸಮರ್ಪಕವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಂಬಂಧ ವಿಚಾರಣೆ ನಡೆಸುವಂತೆ ವಿಧಾನಸಭೆ ಸ್ಪೀಕರ್‌ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಬೆಂಗಳೂರು ಜನರಿಗೆ ವಿದ್ಯುತ್ ಶಾಕ್; ಇಂದು ನಾಳೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ
ಈ ಮನವಿ ಪುರಸ್ಕರಿಸಲು ನಿರಾಕರಿಸಿದ ನ್ಯಾಯಪೀಠ, ಇದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಸಚಿವರು ಹಾಗೂ ಶಾಸಕರು ಮತದಾರರಿಂದ ಚುನಾಯಿತರಾಗಿದ್ದಾರೆ. ನಿಗದಿತ ನಮೂನೆ ಹೊರತಾಗಿ ಇತರೆ ಮಾದರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ತಾಂತ್ರಿಕ ಅಂಶವಷ್ಟೇ. ಕೆಲವೊಮ್ಮೆ ಉತ್ಸಾಹದಲ್ಲಿ ಯಾರನ್ನಾದರೂ ಹೆಸರಿಸಬಹುದು. ಅವರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲಿ. ನಿಮಗೆ ಅಷ್ಟೊಂದು ಅತೃಪ್ತಿಯಿದ್ದರೆ ಮುಂಬರುವ ಚುನಾವಣೆಯಲ್ಲಿ ಅವರು ನಿಮ್ಮ ಪ್ರತಿನಿಧಿಗಳಲ್ಲ ಎಂಬುದನ್ನು ತೋರಿಸಿ ಎಂದು ಸಲಹೆ ನೀಡಿತು.