ಸಮಿತಿಯ ಐವರು ಮಹಿಳಾ ಸಂಸದೆಯರು ಘಟನಾ ಸ್ಥಳಕ್ಕೆ ತೆರಳಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಡ್ಡಾ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ನವದೆಹಲಿ (ಡಿಸೆಂಬರ್ 16, 2023): ಕರ್ನಾಟಕದ ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ ಹಾಗೂ ಥಳಿತ ಪ್ರಕರಣ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ಪ್ರತಿಧ್ವನಿಸಿದೆ. ಸಂಸತ್ತಿನ ಗಾಂಧಿ ಪ್ರತಿಮೆ ಮುಂಭಾಗ ಕರ್ನಾಟಕದ ಬಿಜೆಪಿ ಸಂಸದರು ಘಟನೆ ವಿರುದ್ಧ ಪ್ರತಿಭಟಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಐವರು ಮಹಿಳಾ ಸಂಸದರ ಸತ್ಯ ಶೋಧನಾ ಸಮಿತಿ ರಚಿಸಿದ್ದಾರೆ.
ಬಿಜೆಪಿ ಸಂಸದರ ಪ್ರತಿಭಟನೆ:
ವಂಟಮೂರಿಯಲ್ಲಿ ದಲಿತ ಮಹಿಳೆಯ ಬೆತ್ತಲೆ ಥಳಿತ ಹಾಗೂ ಮೆರವಣಿಗೆ ನಡೆಸಿದ ಪ್ರಕರಣವನ್ನು ಖಂಡಿಸಿ ಕರ್ನಾಟಕ ಬಿಜೆಪಿ ಸಂಸದರು ಶುಕ್ರವಾರ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ರಾಜ್ಯ ಸರ್ಕಾರಕ್ಕೆ NHRC ನೋಟಿಸ್!
‘ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಪತನವಾಗಿದೆ. ಒಬ್ಬ ದಲಿತ ಮಹಿಳೆಯನ್ನು ಯಾವುದೇ ಕಾರಣವಿಲ್ಲದೆ ಬೆತ್ತಲೆ ಮೆರವಣಿಗೆ ನಡೆಸಿ ಆಕೆಯನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಯಾವುದೇ ರೀತಿಯ ಭದ್ರತೆಯನ್ನೂ ನೀಡುವುದಿಲ್ಲ’ ಎಂದು ಈ ವೇಳೆ ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡ ಕುಟುಕಿದರು.
ಬಿಜೆಪಿ ಸತ್ಯಶೋಧನಾ ಸಮಿತಿ:
ಕೃತ್ಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಖಂಡಿಸಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಐವರು ಮಹಿಳಾ ಸಂಸದರ ಸತ್ಯ ಶೋಧನಾ ಸಮಿತಿಯನ್ನು ರಚಿಸಿದ್ದಾರೆ. ಸಮಿತಿ ಶನಿವಾರ ವಂಟಮೂರಿಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಬೆಳಗಾವಿ ಶಾಕ್: ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಬೆತ್ತಲೆಗೊಳಿಸಿ ಹಲ್ಲೆ!
ಸಮಿತಿಯ ಐವರು ಮಹಿಳಾ ಸಂಸದೆಯರು ಘಟನಾ ಸ್ಥಳಕ್ಕೆ ತೆರಳಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಡ್ಡಾ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಬಿಜೆಪಿ ಸಂಸದರಾದ ಅಪರಾಜಿತಾ ಸಾರಂಗಿ, ಸುನೀತಾ ದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಾ ಕೋಲಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಕ್ರಾ ಸತ್ಯ ಶೋಧನಾ ಸಮಿತಿಯಲ್ಲಿದ್ದಾರೆ.
‘ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಹೇಯ ಕೃತ್ಯಗಳು ಆಗಾಗ್ಗೆ ಜರುಗುತ್ತಿವೆ ಎಂದು ಕಾಂಗ್ರೆಸ್ ವಿರುದ್ಧ ನಡ್ಡಾ ಕಿಡಿಕಾರಿದ್ದಾರೆ’ ಎಂದು ಅರುಣ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿ.11ರಂದು ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆಯ ಘಟನೆ ನಡೆದಿತ್ತು.