ರಾಮನಗರಕ್ಕೆ ಕಾವೇರಿ ತರುವ ಆಲೋಚನೆ ಡಿಕೆಶಿಯದ್ದು: ಸಂಸದ ಡಿ.ಕೆ.ಸುರೇಶ್

By Kannadaprabha News  |  First Published Dec 16, 2023, 12:16 PM IST

ಬಯಲು ಸೀಮೆ ಜಿಲ್ಲೆ ರಾಮನಗರಕ್ಕೂ ಕಾವೇರಿ ನದಿ ನೀರನ್ನು ತರಬೇಕು. ಆ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದೆಂಬ ಆಲೋಚನೆ ಡಿ.ಕೆ.ಶಿವಕುಮಾರ್ ಅವರನ್ನು ಹೊರತು ಪಡಿಸಿ ಬೇರೆ ಯಾವ ನಾಯಕರಿಗೂ ಇರಲಿಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
 


ಮಾಗಡಿ/ರಾಮನಗರ (ಡಿ.16): ಬಯಲು ಸೀಮೆ ಜಿಲ್ಲೆ ರಾಮನಗರಕ್ಕೂ ಕಾವೇರಿ ನದಿ ನೀರನ್ನು ತರಬೇಕು. ಆ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದೆಂಬ ಆಲೋಚನೆ ಡಿ.ಕೆ.ಶಿವಕುಮಾರ್ ಅವರನ್ನು ಹೊರತು ಪಡಿಸಿ ಬೇರೆ ಯಾವ ನಾಯಕರಿಗೂ ಇರಲಿಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ ಮತ್ತು ವೈ.ಜಿ.ಗುಡ್ಡ ಜಲಾಶಯಕ್ಕೆ ಕಾವೇರಿ ನದಿ ನೀರು ತುಂಬಿಸುವ ಯೋಜನೆಗೆ ನೂರಾರು ಜನರ ಸಮ್ಮುಖದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ಹರಿಯುತ್ತದೆ. 

ಅದನ್ನು ಬಯಲು ಪ್ರದೇಶಕ್ಕೆ ತರಬಹುದು. ಅದರಿಂದ ಶಾಶ್ವತ ಕಾಯಕಲ್ಪ ಪಡೆದುಕೊಳ್ಳಬಹುದು ಎಂದು ಯಾರೂ ಆಲೋಚನೆ ಮಾಡಿರಲಿಲ್ಲ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ದಲ್ಲಿ ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗದೆ ಹೋಗಿದ್ದರೆ ಸತ್ತೇಗಾಲ ನೀರಾವರಿ ಯೋಜನೆ ಕುರಿತು ಚರ್ಚೆ ಮಾಡಲು ಅವಕಾಶವೇ ಸಿಗುತ್ತಿರಲಿಲ್ಲ ಎಂದರು. ಅಂದೇ ನಾನು ಅರ್ಕಾವತಿ ನದಿ ಶಾಶ್ವತವಾಗಿ ಹರಿಯುವಂತೆ ಮಾಡುತ್ತೇನೆಂದು ಹೇಳಿದ್ದೆ. ಈ ಮಾತನ್ನು ಎ.ಮಂಜುನಾಥ್ ಬಿಡದಿ ಮಂಜು ಆಗಿದ್ದಾಗ ಹೇಳಿದ್ದೆ. ಈಗ ಅವರು ಮಾಗಡಿ ಮಂಜು ಆಗಿದ್ದಾರೆ. ನನ್ನನ್ನು ಹೊರತು ಪಡಿಸಿ ಬೇರೆ ಯಾವ ರಾಜಕಾರಣಿಯೂ ಆ ಮಾತನ್ನು ಹೇಳಿರಲಿಲ್ಲ. 

Tap to resize

Latest Videos

ಪರಿಹಾರ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಿಎಂ ಸಿದ್ದರಾಮಯ್ಯ

ಕೇವಲ ಅರ್ಕಾವತಿ ನದಿಯ ಕೊಳಚೆ ನೀರಿನ ಶುದ್ಧೀಕರಣದ ಚರ್ಚೆ ಮಾಡುತ್ತಿದ್ದರು. ಆದರೆ, ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾದ ಕಾರಣ ಯೋಜನೆ ಕಾರ್ಯಗತಗೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು. ಈಗ ಸತ್ತೇಗಾಲ ನೀರಾವರಿ ಯೋಜನೆಯ ಕ್ರೆಡಿಟ್ ಪಡೆದುಕೊಳ್ಳಲು ಕೆಲ ನಾಯಕರು ಪೈಪೋಟಿಗೆ ಮುಂದಾಗಿದ್ದಾರೆ. ವಾಟ್ಸಪ್ ನಲ್ಲಿ ಪ್ರಚಾರ ಪಡೆಯುತ್ತಿರುವವರಾಗಲಿ ಅಥವಾ ಇಲ್ಲಿ ಯಾವುದೊ ಕ್ಷೇತ್ರದ ಶಾಸಕರು, ನಾನೇ ಮಾಡಿದ್ದೆಂದು ಹೇಳಿಕೊಳ್ಳುತ್ತಾರಲ್ಲ ಅವರೂ ಯೋಚನೆ ಮಾಡಿದ ಕಾರ್ಯಕ್ರಮವಲ್ಲ ಎಂದು ಜೆಡಿಎಸ್ ನಾಯಕರ ಕುರಿತು ವ್ಯಂಗ್ಯವಾಡಿದರು.

2 ಬಾರಿ ಸಿಎಂ ಆದವರ ಕೊಡುಗೆ ಏನು ?: ಸತ್ತೇಗಾಲ ಯೋಜನೆ ತಮ್ಮ ಕೊಡುಗೆ ಎಂಬ ಭಾವನೆ ಅವರಲಿದ್ದರೆ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಏನೇನು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಲಿ. ಎರಡು ಬಾರಿ ಸಿಎಂ ಆಗಿದ್ದವರಿಗೆ ಎಲ್ಲ ಅಧಿಕಾರ ಇತ್ತು. ಅವರು ಜಿಲ್ಲೆಗಾಗಿ ಏನೇನು ಮಾಡಿದ್ದಾರೆ ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿ. ಯಾವ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದರು, ಎಷ್ಟು ಮಂದಿ ಬಡವರಿಗೆ ನಿವೇಶನ, ಸೂರು ಕಲ್ಪಿಸಿದ್ದಾರೆಂದು ಹೇಳಲಿ ಎಂದು ಸುರೇಶ್ ಸವಾಲು ಹಾಕಿದರು.

ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಕಾವೇರಿ ನದಿ ಪ್ರಾಕಾರದ ಪರದಿಗೆ ಬರುತ್ತದೆ ಎಂಬ ಕಾರಣಕ್ಕೆ ಪ್ರಚಾರ ನೀಡದಂತೆ ಮಾಧ್ಯಮಗಳಲ್ಲಿಯೂ ಮನವಿ ಮಾಡಿದ್ದೆ. ಆದರೆ, ರಾಜಕೀಯ ಪಡಸಾಲೆಯಲ್ಲಿ ಬೇರೆಯದೇ ಚರ್ಚೆಗಳು ನಡೆಯುತ್ತಿವೆ. ಏನೇ ಆಗಲಿ ಸತ್ತೇಗಾಲ ಯೋಜನೆಯ ಸಂಪೂರ್ಣ ಕ್ರೆಡಿಟ್ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಪರೋಕ್ಷವಾಗಿ ಹೇಳಿದರು. ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಜಲಾಶಯದಿಂದ ತಲಾ 6 ಕೆರೆ ತುಂಬಿಸುವ ಆಲೋಚನೆ ಇದೆ. ಅಲ್ಲದೆ, ತಿಪ್ಪಗೊಂಡನಹಳ್ಳಿ ಮತ್ತು ಮಂಚನಬೆಲೆ ಜಲಾಶಯಕ್ಕೆ ನೀರು ಹರಿಸುವ ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಡಿ.ಕೆ.ಶಿವಕುಮಾರ್ ರೂಪಿಸಿದ್ದಾರೆ. ಒಟ್ಟಾರೆ ಬರದ ನಾಡಾಗಿದ್ದ ಮಾಗಡಿಯನ್ನು ಹಸಿರನ್ನಾಗಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.

ನರೇಗಾ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಹಸಿ ಸುಳ್ಳು: ಸಚಿವ ಪ್ರಿಯಾಂಕ್ ಖರ್ಗೆ

ಮಂಚನಬೆಲೆಯ ಎಡ - ಬಲದಂಡೆ ನಾಲೆಗಳನ್ನು 280 ಕೋಟಿ ವೆಚ್ಚದಲ್ಲಿ ಆಧುನೀಕರಣ, 22 ಕೋಟಿ ವೆಚ್ಚದಲ್ಲಿ ಮಂಚನಬೆಲೆ ಸಮೀಪ ಮುರಿದು ಬಿದ್ದಿರುವ ಸೇತುವೆ ಮರು ನಿರ್ಮಾಣ, ಸುತ್ತಮುತ್ತಲಿನ ರಸ್ತೆ ಅಭಿವೃದ್ಧಿಗೂ ಒತ್ತು ಕೊಡಲಾಗುವುದು. ನೀರಾವರಿ ಇಲಾಖೆಗೆ ಸೇರಿದ 72 ಎಕರೆ ಪ್ರದೇಶದಲ್ಲಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸುರೇಶ್ ಹೇಳಿದರು. ಶಾಸಕ ಬಾಲಕೃಷ್ಣ, ಗ್ರಾಪಂ ಅಧ್ಯಕ್ಷರಾದ ಶಹಜಿಯಾ ಬಾನು, ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕೆಎಂ ಮಾಜಿ ಅಧ್ಯಕ್ಷ ಪಿ.ನಾಗರಾಜು, ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ಮುಖಂಡರಾದ ಡಿ.ಎಂ.ವಿಶ್ವನಾಥ್, ನರಸಿಂಹಮೂರ್ತಿ, ಚಂದ್ರೇಗೌಡ, ವಿಜಯ ಕುಮಾರ್, ಕಲ್ಪನಾ ಶಿವಣ್ಣ ಮತ್ತಿತರರು ಹಾಜರಿದ್ದರು.

click me!