ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ತಡೆ, ಪ್ರಧಾನಿಗೆ ಸ್ವತಃ ನಾನೇ ತೋರಿಸಿದ್ದೇನೆ, ಅವರಿಗೆಲ್ಲಾ ಗೊತ್ತಿದೆ: ಡಿಕೆಶಿ

Published : Feb 12, 2026, 03:47 PM IST
DK Shivakumar

ಸಾರಾಂಶ

ಹೆಬ್ಬಾಳ-ಸರ್ಜಾಪುರ ಮೆಟ್ರೋ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರ ಅನುಮತಿ ನಿರಾಕರಿಸಿದೆ ಎಂಬ ವರದಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಯೋಜನೆಯನ್ನು ಕೇಂದ್ರವೇ ಪ್ರಸ್ತಾಪಿಸಿದ್ದು, ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಇದು ಅತ್ಯಗತ್ಯವಾಗಿದೆ.

ಬೆಂಗಳೂರು: ಹೆಬ್ಬಾಳ–ಸರ್ಜಾಪುರ ಮೆಟ್ರೋ ಕೆಂಪು ಲೈನ್ ವಿಸ್ತರಣೆ ಹಾಗೂ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿರುವ ಸುದ್ದಿಯ ಬೆನ್ನಲ್ಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಡಬಲ್ ಡೆಕ್ಕರ್ ಮತ್ತು ಮೆಟ್ರೋ ಕೆಂಪು ಲೈನ್ ವಿಸ್ತರಣೆಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂಬ ಸಂಸದ ಪಿ.ಸಿ. ಮೋಹನ್ ಅವರ ಹೇಳಿಕೆ ಬಗ್ಗೆ ಪ್ರಶ್ನೆ ಕೇಳಿದಾಗ, ಆ ಹೇಳಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

“ಡಬಲ್ ಡೆಕ್ಕರ್ ಯೋಜನೆಯನ್ನು ಪ್ರಧಾನಿ ಮೋದಿಗೆ ನಾನೇ ತೋರಿಸಿದ್ದೇನೆ”

ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ಕುರಿತು ಮಾತನಾಡಿದ ಡಿಕೆಶಿ ಡಬಲ್ ಡೆಕ್ಕರ್ ಯೋಜನೆಯನ್ನು ಸ್ವತಃ ನಾನೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೋರಿಸಿದ್ದೇನೆ. ಅವರು ಎಲ್ಲ ಅಂಶಗಳನ್ನೂ ಗಮನದಿಂದ ನೋಡಿದ್ದಾರೆ. ಈ ಯೋಜನೆ ಮಾಡಬೇಕೆಂದು ಹೇಳಿರುವುದೇ ಕೇಂದ್ರ ಸರ್ಕಾರದವರು. ಅವರೇ ಪ್ಲ್ಯಾನ್ ಕೊಟ್ಟವರು. ಪ್ರಾಥಮಿಕ ಹಂತದಲ್ಲಿ ಅವರು ಮಾಡಿದ್ದಾರೆ ಅಲ್ವಾ? ನಾವು ರಾಗಿಗುಡ್ಡ ಸೇರಿ 6 ಕಿಮೀಟರ್ ಮಾಡಿದ್ದೇವೆ.ಅದನ್ನು ಮುಂದುವರೆಸುತ್ತಿದ್ದೇವೆ. ದುಡ್ಡು ಎರಡೂ ಕಡೆಯವರದ್ದು, ನಾವು ಶೇರ್ ಮಾಡಿ ಮಾಡುತ್ತೇವೆ. ಟೆಕ್ನಿಕಲ್ ವಿಚಾರದಲ್ಲಿ ಅವರು ಭಾಗಿಯಾಗಬಹುದಷ್ಟೇ. ಮರು ಪರಿಶೀಲನೆ ಮಾಡುದಾದ್ರೆ ಮಾಡ್ಲಿ ಅವರು ಎಂದು ಹೇಳಿದರು.

ಕೇಂದ್ರ–ರಾಜ್ಯ 50:50 ಹಣಕಾಸು ವ್ಯವಸ್ಥೆ

ಮೆಟ್ರೋ ಯೋಜನೆಗಳ ಹಣಕಾಸು ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಮೆಟ್ರೋ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಹಣಕಾಸು ಪಾಲುದಾರಿಕೆಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

ಡಬಲ್ ಡೆಕ್ಕರ್ ಮಾಡಿದ್ರೆ ಮೆಟ್ರೋಗೆ ಜನ ಬರಲ್ಲ ಅಂತ ಕೇಂದ್ರ ಸರ್ಕಾರ ಕಾರಣ ಕೊಟ್ಟಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಮೆಟ್ರೋದಲ್ಲಿ ಓಡಾಡೋ ಜನಾನೆ ಬೇರೆ ರಸ್ತೆಯಲ್ಲಿ ಓಡಾಡೋ ಜನನೇ ಬೇರೆ. ಟ್ರಾಫಿಕ್ ಕಡಿಮೆ ಆಗಬೇಕು. ಕಟ್ಟಡಗಳನ್ನು ಒಡೆದು ಹಾಕಲು ಆಗುತ್ತಾ? ಆಗಲ್ಲ ಬಹಳ ದುಬಾರಿ ಆಗುತ್ತೆ. ಬೆಂಗಳೂರು ನಗರದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಡಬಲ್ ಡೆಕ್ಕರ್ ಫ್ಲೈಓವರ್‌ಗಳು ಅತ್ಯಗತ್ಯ. ನಗರದಲ್ಲಿ ಸಂಚಾರದ ಒತ್ತಡ ಕಡಿಮೆ ಮಾಡಲು ಇಂತಹ ಯೋಜನೆಗಳು ಅನಿವಾರ್ಯ. ಏನಾದ್ರೂ ಸಮಸ್ಯೆ ಇದ್ದರೆ ನಾನು ಕೇಂದ್ರ ಸಚಿವರ ಬಳಿ ಹೋಗಿ ಮಾತನಾಡುತ್ತೇನೆ ಎಂದು ಹೇಳಿದರು.

ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಿದ್ಧತೆ

ಕೇಂದ್ರ ಸರ್ಕಾರ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರೆ, ಅದನ್ನು ಚರ್ಚಿಸುವುದಕ್ಕೆ ತಾವು ಸಿದ್ಧರಾಗಿದ್ದೇವೆ. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೆ ಅವುಗಳ ಬಗ್ಗೆ ಚರ್ಚೆ ನಡೆಸಬಹುದು. ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದು ಎಂದರು. ಡಬಲ್ ಡೆಕ್ಕರ್ ಹಾಗೂ ಮೆಟ್ರೋ ಕೆಂಪು ಲೈನ್ ವಿಸ್ತರಣೆ ಯೋಜನೆಗಳ ಅನುಮೋದನೆಗಾಗಿ, “ಅಗತ್ಯವಿದ್ದರೆ ನಾನು ಕೇಂದ್ರ ಸಚಿವರನ್ನು ಸ್ವತಃ ಭೇಟಿಯಾಗಿ ಮಾತುಕತೆ ನಡೆಸುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಯೋಜನೆ ಮುಂದುವರಿಸುವಲ್ಲಿ ರಾಜ್ಯ ಸರ್ಕಾರದ ದೃಢ ನಿಲುವು

ಈ ಮೂಲಕ, ಡಬಲ್ ಡೆಕ್ಕರ್ ಫ್ಲೈಓವರ್ ಮತ್ತು ಮೆಟ್ರೋ ವಿಸ್ತರಣೆ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂಬ ರಾಜ್ಯ ಸರ್ಕಾರದ ದೃಢ ನಿಲುವು ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ–ರಾಜ್ಯ ಮಟ್ಟದಲ್ಲಿ ನಡೆಯುವ ಚರ್ಚೆಗಳ ಮೇಲೆ ಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಿಡಬ್ಲ್ಯೂಡಿ ಇಂಜಿನಿಯರ್ ಪುರುಷೋತ್ತಮ್‌ಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ!
ಒಂದೇ ತಿಂಗಳಲ್ಲಿ ಹಸಿರು ನೆಲ ಬರಡು ಭೂಮಿ ಆಯ್ತು: ಬೆಂಗಳೂರು ಜೆಪಿ ನಗರದ ಫೋಟೋ ವೈರಲ್