
ನವದೆಹಲಿ[ಜ.09]: ನಿಗಮ- ಮಂಡಳಿ ನೇಮಕ ವಿಚಾರದಲ್ಲಿ ಸಣ್ಣಪುಟ್ಟವ್ಯತ್ಯಾಸಗಳು ಆಗಿರಬಹುದು. ಆದರೆ ಇವೆಲ್ಲವೂ ಪರಿಹಾರವಾಗಲಿದೆ. ಇಂತಹ ವಿಚಾರಗಳನ್ನು ನಿಭಾಯಿಸುವ ಪ್ರಬುದ್ಧತೆ ಮತ್ತು ಮೈತ್ರಿ ಸರ್ಕಾರ ಮುನ್ನಡೆಸುವ ಚಾಕಚಕ್ಯತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಇದೆ ಎಂದು ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಕಾರ್ಯಕರ್ತರೂ ಹತಾಶರಾಗಬೇಕಿಲ್ಲ. ನನಗೂ ಸೇರಿದಂತೆ ಎಲ್ಲರಿಗೂ ಸಾವಿರಾರು ಆಸೆಗಳಿರಬಹುದು. ಆದರೆ ಅದೆಲ್ಲವೂ ಈಡೇರುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಐಟಿ ಅವರು ಸಂಜೆ ದಾಳಿ ನಡೆಸಿ, ರಾತ್ರಿ ಬಂಧಿಸುತ್ತಾರೆ ಎಂದು ಸುದ್ದಿ ಮಾಡಲಾಗಿತ್ತು. ಹುಟ್ಟಿದವನು ಯಾವತ್ತಾದರೂ ಒಂದು ದಿನ ಸಾಯಲೇಬೇಕು. ನನಗೆ ತೊಂದರೆ ಕೊಟ್ಟು ಖುಷಿ ಪಡುತ್ತಿದ್ದಾರೆ. ಅವರು ಆನಂದ ಪಡಲಿ, ಆನಂದಪಡುವವರಿಗೆ ಬೇಡ ಅನ್ನಲಿಕ್ಕೆ ಆಗುವುದಿಲ್ಲ ಎಂದರು.
ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ಕೊಡಿಸುವುದಕ್ಕೆ ನಮ್ಮ ಬೆಂಬಲವಿದೆ. ಪ್ರಬಲ ಕೋಮುಗಳಲ್ಲಿಯೂ ಬಡವರಿದ್ದಾರೆ. ಆದರೆ ಹಿಂದುಳಿದವರ, ಅಲ್ಪಸಂಖ್ಯಾತರ ಕೋಟಾದಲ್ಲಿ ಯಾವುದೇ ಬದಲಾವಣೆ ಆಗಬಾರದು ಎಂದರು.
ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರನ್ನು ಸೌಜನ್ಯದ ಭೇಟಿಯಾದ ಡಿ.ಕೆ.ಶಿವಕುಮಾರ್ ತಮ್ಮ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಅವರನ್ನು ಕೋರಿರುವುದಾಗಿ ತಿಳಿಸಿದರು.
ಬಿಎಸ್‌ವೈ ಜತೆ ಪ್ರಯಾಣ:
ದೆಹಲಿಗೆ ಡಿ.ಕೆ.ಶಿವಕುಮಾರ್ ಮತ್ತು ಯಡಿಯೂರಪ್ಪ ಒಂದೇ ವಿಮಾನದಲ್ಲಿ ಆಗಮಿಸಿದ್ದರು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಪಾಪ ಯಡಿಯೂರಪ್ಪರನ್ನು ಯಾಕೆ ಗೋಳು ಹೊಯಿಸಿಕೊಳ್ಳುತ್ತೀರಿ. ರಾಜಕಾರಣವೇ ಬೇರೆ, ಗೆಳೆತನವೇ ಬೇರೆ. ನಾವು ವಿಧಾನಸೌದಕ್ಕೆ ಒಟ್ಟಿಗೆ ಹೋಗ್ತೇವೆ, ಮಾತಾಡ್ತೇವೆ, ವಿಮಾನದಲ್ಲಿ ಒಟ್ಟಿಗೆ ಹೋಗ್ತೇವೆ ಎಂದು ಡಿಕೆಶಿ ಹೇಳಿದರು.
ಹಂಪಿ ಉತ್ಸವ; ರಾಜಕೀಯ ಚಟಕ್ಕೆ: ಬಿಜೆಪಿ ನಾಯಕರಿಂದ ಹೇಳಿಕೆ
ಹಂಪಿ ಉತ್ಸವ ಮಾಡುತ್ತೇವೆ, ಈಗ ಬರ ಪ್ರವಾಸ ಕೈಗೊಳ್ಳಬೇಕಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನಾನು ಕನ್ನಡ ಮತ್ತು ಸಂಸ್ಕೃತಿ ಖಾತೆಯೊಂದಿದೆ ಬಳ್ಳಾರಿಯ ಉಸ್ತುವಾರಿ ಸಚಿವನೂ ಆಗಿದ್ದೇನೆ. ಹಂಪಿ ಉತ್ಸವದ ಬಗ್ಗೆ ರಾಜಕೀಯದ ಚಟಕ್ಕೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಭಿಕ್ಷೆ ಎತ್ತಿ ಹಂಪಿ ಉತ್ಸವ ಮಾಡುತ್ತೇವೆ ಅಂತಿದ್ದಾರೆ. ಈ ಮೂಲಕ ಜನರ ಬಳಿ ವಸೂಲಿ ಮಾಡಲು ನೋಡುತ್ತಿದ್ದಾರೆ. ಇಂತಹ ದುಡ್ಡನ್ನು ನಾನು ಮತ್ತು ಸರ್ಕಾರ ನೋಡಿದೆ. ಜನರ ಬಳಿ ಸುಲಿಗೆಗೆ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ