Udyami Vokkaliga Expo 2026: ಸಾಲ ಕೊಡುವ ಮುನ್ನ ಹುಷಾರ್, ನಿಮ್ಮ ನೆರಳನ್ನೂ ನಂಬಬೇಡಿ: ಡಿಕೆಶಿ ಲೈಫ್ ಲೆಸನ್

Published : Jan 11, 2026, 05:27 PM IST
DK Shivakumar Addresses Vokkaliga Expo in Bengaluru Key Highlights

ಸಾರಾಂಶ

ಬೆಂಗಳೂರಿನ 'ಉದ್ಯಮಿ ಒಕ್ಕಲಿಗ ಎಕ್ಸ್‌ಪೋ'ದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಉದ್ಯಮದಲ್ಲಿ ನಂಬಿಕೆಯ ಮಹತ್ವ ಮತ್ತು ಸಾಲ ನೀಡುವಲ್ಲಿನ ಎಚ್ಚರಿಕೆ ಕುರಿತು ಸಲಹೆ ನೀಡಿದರು. ತಮ್ಮನ್ನು 'ಬಂಡೆ' ಎಂದು ಕರೆಯುವುದರ ಹಿಂದಿನ ಶ್ರಮ, ರಾಜಕೀಯ ಏರಿಳಿತಗಳನ್ನು ಹಂಚಿಕೊಂಡರು.

ಬೆಂಗಳೂರು (ಜ.11): ಕಳೆದ ವರ್ಷ ಇದೇ ವೇದಿಕೆಯಲ್ಲಿ ನಾನು ಮತ್ತೆ ಬರುವುದಾಗಿ ಭರವಸೆ ನೀಡಿದ್ದೆ, ಅದರಂತೆ ಇಂದು ಬಂದಿದ್ದೇನೆ. ಯಾರು ಜೀವನದಲ್ಲಿ ಶ್ರಮ ಹಾಕುತ್ತಾರೋ ಅವರಿಗೆ ಫಲ ಖಂಡಿತ ಸಿಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನುಡಿದರು.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 'ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉದ್ಯಮಿಗಳಿಗೆ ಸ್ಫೂರ್ತಿ ತುಂಬುವ ಜೊತೆಗೆ ತಮ್ಮ ರಾಜಕೀಯ ಜೀವನದ ಏರಿಳಿತಗಳನ್ನು ಹಂಚಿಕೊಂಡರು.

ಕರಾವಳಿ ಅಭಿವೃದ್ಧಿಗೆ ಹೊಸ ನೀಲನಕ್ಷೆ

ಕರಾವಳಿ ಮತ್ತು ಮಲೆನಾಡು ಭಾಗದ ಜನರು ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡುತ್ತಿರುವುದನ್ನು ಗಮನಿಸಿದ್ದೇನೆ. ನಾನು ಮಂಗಳೂರಿನಲ್ಲಿ ಈ ಬಗ್ಗೆ ಹೊಸ ಹೆಜ್ಜೆ ಇಟ್ಟಿದ್ದೇನೆ. ಉದ್ಯಮಿಗಳ ಸಭೆ ಕರೆದು ಚರ್ಚಿಸುತ್ತೇನೆ. ನಮ್ಮ ಕಾರವಾರ ಮತ್ತು ಮಂಗಳೂರಿನ ಪೋರ್ಟ್‌ಗಳು ಹಾಗೂ ಸುಂದರ ಪರಿಸರವನ್ನು ಜಗತ್ತಿಗೆ ಪರಿಚಯಿಸಬೇಕಿದೆ. ಮಂಗಳೂರಿನ ಯುವಕರು ಶಿಕ್ಷಣ ಪಡೆದು ಕೆಲಸಕ್ಕೆ ಬೆಂಗಳೂರು ಅಥವಾ ವಿದೇಶಕ್ಕೆ ಹೋಗುವ ಪರಿಸ್ಥಿತಿ ಬದಲಾಗಬೇಕು ಎಂದು ಕರಾವಳಿ ಅಭಿವೃದ್ಧಿಯ ಕನಸನ್ನು ಹಂಚಿಕೊಂಡರು.

'ನಂಬಿಕೆ'ಯೇ ಉದ್ಯಮದ ಬುನಾದಿ: ಸಾಲದ ವಿಚಾರದಲ್ಲಿ ಎಚ್ಚರಿಕೆ

ಉದ್ಯಮಿಗಳಿಗೆ ಕಿವಿಮಾತು ಹೇಳಿದ ಡಿಕೆಶಿ, 'ಉದ್ಯಮದಲ್ಲಿ ಬ್ರಾಂಡಿಂಗ್ ಬಹಳ ಮುಖ್ಯ. ನಮ್ಮ ನಂದಿನಿ ಬ್ರಾಂಡ್ ಇಂದು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಆದರೆ, ಈ ಎಲ್ಲದಕ್ಕೂ ನಂಬಿಕೆ ಮೂಲಾಧಾರ. ಗ್ರಾಹಕರ ನಂಬಿಕೆ ಉಳಿಸಿಕೊಂಡರೆ ಮಾತ್ರ ಉದ್ಯಮ ಬೆಳೆಯಲು ಸಾಧ್ಯ. ಅದಕ್ಕೆ ನೀವು ನಂಬಿಕೆ ಉಳಿಸಿಕೊಳ್ಳಬೇಕು. ನಿಮಗೆ ಒಂದು ಅಡ್ವೈಸ್ ಮಾಡ್ತೀನಿ. ಸಾಲ ಕೊಡೋಕೆ ಹೋಗಬೇಕು ಸ್ವಲ್ಪ ಹುಷಾರಾಗಿರಬೇಕು ನೀವು. ಸಾಲ ಕೊಟ್ರೆ ಮುಗಿತು ಕ್ಲೋಸ್ ಅಷ್ಟೇ. ದಾಖಲೆಗಳನ್ನ ಸರಿಯಾಗಿ ಇಟ್ಟುಕೊಂಡಿರಬೇಕು ನೀವು. ನಂಬಿಕೆ ಮೇಲೆ ನಾನು ಎಷ್ಟು ಕೇಸ್ ನೋಡಿಲ್ಲ? ಎಷ್ಟು ಪೆಟ್ರೋಲ್ ಬ್ಯಾಂಕ್ ಗಳನ್ನ ನೋಡಿಲ್ಲ ನಾವು? ಒಂದು ಎರಡು ತಿಂಗಳು ಕೊಡ್ತಾರೆ ಆಮೇಲೆ ಬಿಲ್ ಕೊಡಲ್ಲ. ನಿಮ್ಮ‌ ನೆರಳನ್ನೇ ನೀವು ನಂಬಬಾರದು. ಇದು ನಿಮ್ಮ ತಲೆಯಲ್ಲಿ ಇರಲಿ ಇದು ನನ್ನ ಅನುಭವ Don't trust your own shadow. ನಂಬಿಕೆ ಇರಬೇಕು ನಿಮಗೆ ಆದ್ರೆ ನಂಬದೆ ಇರೋ ಹಾಗೆ ಇರಬೇಕು. ನಂಬಿದಂಗೂ ಇರಬೇಕು, ನಂಬದೇ ಇರದಂತೆಯೂ ಇರಬೇಕು. ನಂಬಿಕೆ ಇಲ್ಲದೆ ಕೆಲಸ ಮಾಡೋಕೆ ಆಗಲ್ಲ. ನಾವು ಜನರನ್ನ ನಂಬಬೇಕು. ನಾವು ಬೇರೆ ಅವರನ್ನ ಕೆಲಸಕ್ಕೆ ಇಟ್ಟುಕೊಂಡು ಕೆಲಸ ಮಾಡೋದು. ನೀವು ಒಬ್ಬ ಉದ್ಯೋಗಿಯಲ್ಲ. ನೀವು ಹತ್ತಾರು ಜನರಿಗೆ ಉದ್ಯೋಗ ಕೊಡುವಂತ ಪ್ರವೃತ್ತಿ ಬೆಳಸಿಕೊಂಡಿದ್ದೀರಾ.

ಸ್ಕೂಲಲ್ಲಿ ನಮಗೊಂದು ಶ್ಲೋಕ ಹೇಳಿ ಕೊಟ್ಟಿದ್ರು, ಅದೇನೆಂದರೆ, ಪರೋಪಕಾರಾಯ ಫಲನ್ತಿ ವೃಕ್ಷಾಃ ಪರೋಪಕಾರಾಯ ವಹನ್ತಿ ನದ್ಯಃ ಪರೋಪಕಾರಾಯ ದುಹನ್ತಿ ಗಾವಃ ಪರೋಪಕಾರಾರ್ಥಮಿದಂ ಶರೀರಮ್ ಅಂತಾ. ಅದರ ಅರ್ಥ ಗಿಡ ಸ್ವಂತಕ್ಕೆ ಪ್ರಯೋಜನ ಇಲ್ವಂತೆ. ಬೇರೆ ಅವರಿಗೆ ನೆರಳು, ಸೌದೆ, ಹಣ್ಣು ಕೊಡುತ್ತೆ ಅಷ್ಟೇ. ಇದೆಲ್ಲವೂ ಬೇರೆ ಅವರಿಗೆ ಯೂಸ್ ಆಗುತ್ತೆ ಅಷ್ಟೇ. ಅದೇ ರೀತಿ ಈ ಹೃದಯ , ಬದುಕಿನಲ್ಲಿ ನಾವು ನಮ್ಮ ಸ್ವಂತಕ್ಕಲ್ಲ. ಸ್ಟೇಜ್ ಮೇಲೆ ಕೂತಿರುವವರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಾರೆ. ಆದ್ರೆ ಅವರ ಖರ್ಚು 50 ಸಾವಿರ ಲಕ್ಷ ಅಷ್ಟೇ. ಇವರೆಲ್ಲ ಬೇರೆ ಅವರಿಗೋಸ್ಕರ ಖರ್ಚು ಮಾಡುತ್ತಾರೆ ಎಂದರು.

'ಬಂಡೆ'ಯಾದದ್ದು ಸುಮ್ಮನೆಯಲ್ಲ: ಹಿಂಸೆ ನೀಡುವವರ ವಿರುದ್ಧ ಕಿಡಿ

ತಮ್ಮನ್ನು 'ಬಂಡೆ' ಎಂದು ಕರೆಯುವವರ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿಗಳು, ಬಂಡೆ ಎಂದರೆ ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನಾನು ಈ ಮಟ್ಟಕ್ಕೆ ಬಂದಿರುವುದು ಶ್ರಮದಿಂದ. ನಮ್ಮ ತಂದೆ ಸಿಎಂ ಆಗಿರಲಿಲ್ಲ, ಕೇವಲ ಪಂಚಾಯತ್ ಮೆಂಬರ್ ಆಗಿದ್ದರು. ಬೆಂಗಳೂರಿನಲ್ಲಿ ಏಟು ತಿಂದು, ರಾಜಕೀಯ ಸಂಚಿನಿಂದ ಜೈಲಿಗೂ ಹೋಗಿ ಬಂದಿದ್ದೇನೆ. ಹಣ್ಣು ಕೆಂಪಾಗಿದ್ದಾಗ ಮಾತ್ರ ಜನರು ಕಲ್ಲು ಹೊಡೆಯುತ್ತಾರೆ. ನಾನು ಸ್ಟ್ರಾಂಗ್ ಆಗಿದ್ದೇನೆ, ಅದಕ್ಕೇ ವೈರಿಗಳು ಹೆಚ್ಚು. ನೀವು ಬೆಳೆಯುತ್ತಿದ್ದೀರಿ ಎಂದಾಗ ಕಾಲೆಳೆಯುವವರು ಬಂದೇ ಬರುತ್ತಾರೆ' ಎಂದು ಮಾರ್ಮಿಕವಾಗಿ ಹೇಳಿದರು.

ಕುಮಾರಸ್ವಾಮಿ ವಿರುದ್ಧ ತಿರುಗೇಟು: ಬೆನ್ನಿಗೆ ಚೂರಿ ಹಾಕಿದ್ದು ಯಾರು?

ಹೆಚ್ ಡಿ ಕುಮಾರಸ್ವಾಮಿ ಅವರ ಟೀಕೆಗಳಿಗೆ ಉತ್ತರಿಸಿದ ಶಿವಕುಮಾರ್, 'ಕುಮಾರಸ್ವಾಮಿ ಸರ್ಕಾರದಲ್ಲಿ ನಾನು ಎಷ್ಟು ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೆ ಅವರು ನನ್ನ ಬಗ್ಗೆ 'ಬೆನ್ನಿಗೆ ಚೂರಿ ಹಾಕಿದರು' ಎಂಬ ಸುಳ್ಳು ಆರೋಪ ಮಾಡುತ್ತಾರೆ. ನನಗೆ ಯಾರಿಂದಲೂ ಸರ್ಟಿಫಿಕೇಟ್ ಬೇಕಿಲ್ಲ. ನನ್ನ ಸ್ವಂತ ಜನರೇ ದಿನಬೆಳಗಾದರೆ ಟಿವಿ, ಇನ್‌ಸ್ಟಾಗ್ರಾಮ್‌ಗಳಲ್ಲಿ ನನ್ನ ವಿರುದ್ಧ ಚಾಕು ಹಿಡಿದು ಕುಳಿತಿದ್ದಾರೆ. ಆದರೆ ಟೀಕೆಗಳು ಸಾಯುತ್ತವೆ, ನಾವು ಮಾಡುವ ಕೆಲಸ ಉಳಿಯುತ್ತದೆ' ಎಂದು ಗುಡುಗಿದರು.

ಯಶಸ್ಸಿಗೆ ಪಂಚಪಾಂಡವರ ಗುಣ ಬೇಕು

ಜೀವನದಲ್ಲಿ ಯಶಸ್ವಿಯಾಗಲು ಬೇಕಾದ ಸೂತ್ರವನ್ನು ವಿವರಿಸಿದ ಡಿಕೆಶಿ, 'ಯಶಸ್ಸು ಸುಮ್ಮನೆ ಬರುವುದಿಲ್ಲ. ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ ಮತ್ತು ಕೃಷ್ಣನ ತಂತ್ರಗಾರಿಕೆ ಇರಬೇಕು. ಈ ಪಂಚಗುಣಗಳು ಮೇಳೈಸಿದಾಗ ಮಾತ್ರ ಒಬ್ಬ ವ್ಯಕ್ತಿ ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ನಾನು ಜನರ ಪ್ರಾರ್ಥನೆಯಿಂದಾಗಿ ಇವತ್ತು ಇಲ್ಲಿ ನಿಂತಿದ್ದೇನೆ. ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ಎಂದಿಗೂ ವಿಫಲವಾಗಲ್ಲ' ಎಂದು ಭಾಷಣ ಮುಕ್ತಾಯಗೊಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನರೇಗಾ ಸಮರ: ಹೆಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್‌ಗೆ ಬರ್ತೀನಿ' ಎಂದು ಪಂಥಾಹ್ವಾನ!
ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್ ಶವ ಪತ್ತೆ, ಮಕ್ಕಳಿಂದ ದುಡುಕಿನ ನಿರ್ಧಾರ