
ಬೆಂಗಳೂರು : ‘ವಿಬಿ ಜಿ ರಾಮ್ ಜಿ’ ಯೋಜನೆ ಕುರಿತು ಕಾಂಗ್ರೆಸ್ ಸೃಷ್ಟಿಸುತ್ತಿರುವ ಸುಳ್ಳುಗಳನ್ನು ಎದುರಿಸಲು ದಾಖಲೆ ಸಮೇತ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಶನಿವಾರ ರಾಜ್ಯ ಬಿಜೆಪಿ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಪರಿಕಲ್ಪನೆಯ ‘ವಿಬಿ ಜಿ ರಾಮ್ ಜಿ’ ಯೋಜನೆ ಬಗ್ಗೆ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ನಾವು ಹೆದರಿ ತಪ್ಪಿಸಿಕೊಂಡು ಎಲ್ಲಿಗೂ ಓಡಿ ಹೋಗುವುದಿಲ್ಲ. ಈ ಯೋಜನೆ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ’ ಎಂದರು.
‘ಕಾಂಗ್ರೆಸ್ ಪಕ್ಷ ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದೆ. ಅವರು ಯಾವುದಾದರೂ ಪ್ರಮುಖ ಯೋಜನೆಗಳಿಗೆ ಮಹಾತ್ಮ ಗಾಂಧಿ ಅವರ ಹೆಸರನ್ನಿಟ್ಟಿದ್ದಾರೆಯೇ? ಎಲ್ಲಾ ಯೋಜನೆಗಳಿಗೆ ನೆಹರು ಕುಟುಂಬದ ಸದಸ್ಯರ ಹೆಸರುಗಳನ್ನು ಇಟ್ಟು ಗಾಂಧೀಜಿಗೆ ದ್ರೋಹ ಬಗೆದಿದ್ದಾರೆ. ಇವರಿಗೆ ಗಾಂಧೀಜಿ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ’ ಎಂದು ಕಿಡಿಕಾರಿದರು.
ಜಿ ರಾಮ್ ಜಿ ಯೋಜನೆ ಬಗ್ಗೆ ಅಪಪ್ರಚಾರದ ಜೊತೆ ವಿಧಾನಸಭೆ ವಿಶೇಷ ಅಧಿವೇಶನ ಕರೆಯುತ್ತಿದ್ದಾರಂತೆ, ಪಾದಯಾತ್ರೆಯನ್ನೂ ನಡೆಸುತ್ತಾರಂತೆ. ಯಾವ ಪುರುಷಾರ್ಥಕ್ಕೆ ಮಾಡುತ್ತಾರೆ? ನರೇಗಾ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ? ಕಾಂಗ್ರೆಸ್‌ನವರಿಂದ ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ಸಿಗಲಿದೆಯೇ? ನಕಲಿ ಬಿಲ್ಲುಗಳನ್ನು ತಡೆಯಲು, ನಕಲಿ ಜಾಬ್ ಕಾರ್ಡುಗಳನ್ನು ಪತ್ತೆಹಚ್ಚಲು ಇವರು ವಿಫಲವಾಗಿದ್ದು ಯಾಕೆ ಎಂದು ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ನರೇಗಾ ಯೋಜನೆ ಸ್ಥಗಿತವಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಯೋಜನೆಯಲ್ಲಿ ನಡೆದಿದ್ದ ಅಕ್ರಮಗಳನ್ನು ನರೇಂದ್ರ ಮೋದಿ ಅವರ ಸರ್ಕಾರ ಸರಿಪಡಿಸಿ ಅದರಲ್ಲಿ ಅನೇಕ ಮಹತ್ವದ ಸುಧಾರಣೆಗಳನ್ನು ತಂದಿದೆ. ಲೋಪಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡುವುದು ತಪ್ಪು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಸರಿಯಲ್ಲ. ಜಿ ರಾಮ್ ಜಿ ಯೋಜನೆಯಿಂದ ಗ್ರಾಪಂಗಳ ಅಧಿಕಾರಕ್ಕಾಗಲಿ ಅಥವಾ ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಎಚ್‌ಡಿಕೆ ಲೇವಡಿ
ಸಿದ್ದರಾಮಯ್ಯ ಒಬ್ಬ ಲೀಸ್ ಬೇಸ್ಡ್ ಮುಖ್ಯಮಂತ್ರಿ. ಅವರು ದೇವರಾಜ ಅರಸು ದಾಖಲೆ ಮುರಿದೆ ಎಂದು ಹೇಳುತ್ತಾರೆ. ಆದರೆ, ಅರಸು ಅವರು ಅಂದಿನ ಕಾಂಗ್ರೆಸ್ ಹೈಕಮಾಂಡ್ ಇಂದಿರಾ ಗಾಂಧಿಗೆ ಸಡ್ಡು ಹೊಡೆದು ನಿಂತಿದ್ದರು. ಏಳೂವರೆ ವರ್ಷ ನಿರಂತರ ಅಧಿಕಾರ ನಡೆಸಿದ್ದರು. ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ ಎನ್ನುತ್ತಿದ್ದಾರೆ. ರಾಹುಲ್ ಗಾಂಧಿ ಯಾವಾಗ ಹೋಗು ಎನ್ನುತ್ತಾರೆ ಎಂದು ಕಾಯುತ್ತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸುಳ್ಳು ಪ್ರಚಾರ. ಈ ಬಗ್ಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗ್ರಾಮ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಲಿದೆ. ಕಾಂಗ್ರೆಸ್‌ನ ಷಡ್ಯಂತ್ರ ಬಯಲಿಗೆ ಎಳೆಯುವ ಕೆಲಸ ಮಾಡಲಿದೆ.- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಅದಕ್ಕೆ ಅವಕಾಶ ನೀಡುವುದೂ ಇಲ್ಲ. ರಾಜ್ಯಕ್ಕೆ ಒಳಿತಾಗಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಮುಂದಿನ ದಿನಗಳಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತೇವೆ.
- ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ
ಅನ್ಯಾಯದ ಬಗ್ಗೆ ಚರ್ಚೆಗೆ ನಾವೂ ಸಿದ್ಧ: ಸಿದ್ದು ಕಿಡಿ
ಬೆಂಗಳೂರು : ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ ಅಥವಾ ನರೇಗಾ) ರದ್ದು ಮಾಡಿ ಕೇಂದ್ರ ಸರ್ಕಾರ ‘ವಿಬಿ ಜಿ ರಾಮ್ ಜಿ’ ಯೋಜನೆ ಜಾರಿ ಮಾಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನಃ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಜಿ ರಾಮ್ ಜಿ’ ಹಾಗೂ ಮತ್ತು ಮನರೇಗಾ ಕುರಿತು ಚರ್ಚೆಗೆ ನಾವೂ ಕೂಡ ಸಿದ್ಧ ಎಂದು ಅವರು ಹೇಳಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಕಿರುವ ಸವಾಲು ಸ್ವೀಕರಿಸಿದ್ದಾರೆ.
‘ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್ ಜಿ’ ಯೋಜನೆ ಬಗ್ಗೆ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ಈ ಯೋಜನೆ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ’ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ’ನಾವು ಚರ್ಚೆಗೆ ನಾವು ಸಿದ್ಧರಿದ್ದೇವೆ. ಈ ಕಾಯ್ದೆ ವಿಚಾರವಾಗಿ ನಾವು ದೊಡ್ಡ ಆಂದೋಲನವನ್ನೇ ಮಾಡುತ್ತೇವೆ’ ಎಂದೂ ಹೇಳಿದರು.ಇದೇ ವೇಳೆ ಬಿಜೆಪಿ ವಿರುದ್ಧವೂ ಕಿಡಿಕಾರಿದ ಸಿದ್ದರಾಮಯ್ಯ, ‘ಕರ್ನಾಟಕಕ್ಕೆ ಆದ ಅನ್ಯಾಯವನ್ನೆಲ್ಲ ಬಿಜೆಪಿ ನಾಯಕರು ನ್ಯಾಯ ಎನ್ನುವುದು ಮಹಾ ಅಪರಾಧ’ ಎಂದು ಅಸಮಾಧಾನ ಹೊರಹಾಕಿದರು.
ಬಿಜೆಪಿಯವರು ರಾಜ್ಯಕ್ಕೆ ಎಷ್ಟೇ ಅನ್ಯಾಯವಾದರೂ ಕೇಂದ್ರ ಸರ್ಕಾರ ಮಾಡಿದ್ದನ್ನೆಲ್ಲ ಸಮರ್ಥಿಸಿಕೊಳ್ಳುವುದು ಮಹಾತಪ್ಪು ಎಂದರು.
ಕೇರಳ ರಾಜ್ಯದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಕುರಿತು ಪ್ರತಿಕ್ರಿಯಿಸಿ, ಕೇರಳದ ಗಡಿ ಶಾಲೆಗಳಲ್ಲಿ ಮಲಯಾಳಂ ಅನ್ನು ಮೊದಲ ಭಾಷೆಯಾಗಿ ಕಲಿಕೆ ಕಡ್ಡಾಯಗೊಳಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದು, ಈ ವಿಚಾರದಲ್ಲಿ ನಾವು ಹೋರಾಟವನ್ನೇ ಮಾಡುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ