ಸಹಾಯಕ ಪ್ರಾಧ್ಯಾಪಕ ಅಕ್ರಮ ಬಗ್ಗೆ ಸಿಎಂ ಜತೆ ಚರ್ಚೆ: ಸಚಿವ ಸುಧಾಕರ್‌

By Kannadaprabha NewsFirst Published Jun 18, 2023, 12:13 PM IST
Highlights

ನೇಮಕಾತಿ ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಸ್ಥಳ ನಿಯೋಜನೆ, ಕಾರ್ಯಾದೇಶದ ಆದೇಶ ಮಾಡಿಲ್ಲ. ತನಿಖೆ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ 

ಬೆಂಗಳೂರು(ಜೂ.18): ಬಿಜೆಪಿ ಸರ್ಕಾರದ ಅವಧಿಯಲ್ಲಾಗಿರುವ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮದ ತನಿಖಾ ಪಕ್ರಿಯೆ ಏನಾಗಿದೆ? ಮುಗಿದಿದೆಯಾ, ಇಲ್ಲವಾ ಎಂಬುದನ್ನು ಪರಿಶೀಲಿಸಿ ಈ ಪ್ರಕರಣವನ್ನು ಮರು ತನಿಖೆಗೆ ವಹಿಸಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಅಂದು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ಆರೋಪಿಸಿತ್ತು. ಈಗ ಪ್ರಕರಣ ಮರು ತನಿಖೆಗೆ ವಹಿಸುವಿರಾ ಎಂಬ ಪ್ರಶ್ನೆಗೆ, ಈ ಬಗ್ಗೆ ಸದ್ಯ ಸಿಸಿಬಿ ಪೊಲೀಸ್‌ ತನಿಖೆ ನಡೆಯುತ್ತಿದೆ. ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಲಾಗುವುದು. ಬಳಿಕ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮರು ತನಿಖೆಗೆ ವಹಿಸಬೇಕಾ ಬೇಡವಾ ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ಎಂಜಿನಿಯರಿಂಗ್‌ ಸೀಟು 10% ದುಬಾರಿ, ಇದು ಬಿಜೆಪಿ ಸರ್ಕಾರದಲ್ಲೇ ತೀರ್ಮಾನವಾಗಿತ್ತು: ಸಚಿವ ಡಾ.ಎಂ.ಸಿ.ಸುಧಾಕರ್‌

ಪ್ರಕರಣ ತನಿಖೆಯಲ್ಲಿರುವಾಗಲೇ ನೇಮಕಾತಿಗೆ 1:1 ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆಯಲ್ಲಾ ಎಂಬ ಪ್ರಶ್ನೆಗೆ, ನೇಮಕಾತಿ ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಸ್ಥಳ ನಿಯೋಜನೆ, ಕಾರ್ಯಾದೇಶದ ಆದೇಶ ಮಾಡಿಲ್ಲ. ತನಿಖೆ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಎನ್‌ಇಪಿ ಬಗ್ಗೆ ಸಿಎಂ-ಡಿಸಿಎಂ ಜೊತೆ ಚರ್ಚೆ:

ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಬಗ್ಗೆ ಈಗಾಗಲೇ ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು, ಕುಲಪತಿಗಳು, ಪ್ರಾಧ್ಯಾಪಕರು, ಶಿಕ್ಷಕರ ಅಭಿಪ್ರಾಯ ಪಡೆಯಲಾಗಿದೆ. ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಎನ್‌ಇಪಿ ಮುಂದುವರೆಸಬೇಕಾ, ರದ್ದುಪಡಿಸಬೇಕಾ ಇಲ್ಲ ಬದಲಾವಣೆ ತರಬೇಕಾ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಇದೇ ವೇಳೆ ಸಚಿವರು ಪುನರುಚ್ಚರಿಸಿದರು. ಈಗಾಗಲೇ ಎರಡು ವರ್ಷಗಳಿಂದ ಎನ್‌ಇಪಿ ಜಾರಿಯಾಗಿದ್ದು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಆಧರಿಸಿಯೇ ನಾವು ನಮ್ಮ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

click me!