
ಬೆಂಗಳೂರು: ಟ್ವೀಟರ್‌ನಲ್ಲಿ ನಡೆದ ವಾದ ವಿವಾದದ ವೇಳೆ ತಮ್ಮ ಪತಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ‘ಮುಸ್ಲಿಂ ಮಹಿಳೆ ಹಿಂದೆ ಓಡಿ ಹೋದ ವ್ಯಕ್ತಿ’ ಎಂದು ವೈಯಕ್ತಿಕವಾಗಿ ಟೀಕಿಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರಿಗೆ ಟಬು ರಾವ್ ತಿರುಗೇಟು ನೀಡಿದ್ದಾರೆ.
ನಿಮ್ಮ ಕೀಳು ರಾಜಕೀಯಕ್ಕೆ ನನ್ನನ್ನು ಪಾನ್ ಆಗಿ ಬಳಸಿಕೊಳ್ಳಬೇಡಿ. ನಿಮಗೆ ನಿಜವಾಗಲೂ ಧೈರ್ಯವಿದ್ದರೆ ಗೃಹಿಣಿಯ ಸೆರಗಿನ ಹಿಂದೆ ನಿಂತು ಕಲ್ಲು ಹೊಡೆಯುವುದು ಬಿಟ್ಟು, ನನ್ನ ಪತಿಯನ್ನು ರಾಜಕೀಯವಾಗಿ ಎದುರಿಸಿ ಎಂದು ಟಬು ರಾವ್ ಟ್ವೀಟರ್ ಮತ್ತು ಫೇಸ್‌ಬುಕ್‌ನಲ್ಲಿ ಸವಾಲು ಹಾಕಿದ್ದಾರೆ.
ನಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದವಳು ನಿಜ. ಆದರೆ, ಅದಕ್ಕೂ ಮೊದಲು ನಾವು ಹೆಮ್ಮೆಯ ಭಾರತೀಯರು. ಕೇಂದ್ರ ಸಚಿವರಾದವರು ಮನೋರೋಗಿಗಳಂತೆ ಮತ್ತು ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ನೀಡುವುದು ಅವರ ಅಸಮರ್ಥತೆಯನ್ನು ತೋರಿಸುತ್ತದೆ. ಕರ್ನಾಟಕದ ರಾಜಕಾರಣಿಗಳು ಸಾಮಾನ್ಯವಾಗಿ ಪರಿಪಕ್ವತೆ ಮತ್ತು ಘನತೆಗೆ ಹೆಸರಾದವರು. ಮಹಿಳೆಯರ ಬಗ್ಗೆ ಹೀನಾಯವಾದ ಹೇಳಿಕೆಗಳನ್ನು ನೀಡಿ ರಾಜ್ಯಕ್ಕಿರುವ ಆ ಘನತೆಯನ್ನು ಹಾಳು ಮಾಡಬೇಡಿ ಎಂದು ಸಚಿವ ಅನಂತ್ ಕುಮಾರ್ ಹೆಗಡೆ ಮತ್ತು ಅವರ ಬೆಂಬಲಿಗರಿಗೆ ತಿರುಗೇಟು ನೀಡಿದ್ದಾರೆ.
ಹಿಂದು ಮಹಿಳೆಯ ಮೈ ಮುಟ್ಟುವವವರ ಕೈ ಕಡಿಯಬೇಕು ಎಂಬರ್ಥದ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತಾವು ಸಚಿವರಾದ ಮೇಲೆ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದರು. ಇದಕ್ಕೆ ಸಚಿವ ಹೆಗಡೆ ಅವರು ನೀವು ‘ಮುಸ್ಲಿಂ ಮಹಿಳೆ ಹಿಂದೆ ಓಡಿಹೋದ ಒಬ್ಬ ವ್ಯಕ್ತಿ ಎಂದು ಮಾತ್ರ ತಿಳಿದಿದ್ದೇನೆ’ (ದಿನೇಶ್ ಗುಂಡೂರಾವ್ ಅವರು ಮುಸ್ಲಿಮರಾದ ಟಬು ಅವರನ್ನು ಮದುವೆಯಾಗಿದ್ದಾರೆ) ಎಂದು ಪ್ರತಿಕ್ರಿಯಿಸಿದ್ದರು. ಈ ರಾಜಕೀಯ ಮೇಲಾಟದಲ್ಲಿ ತಮ್ಮನ್ನು ಎಳೆದು ತಂದಿದ್ದಕ್ಕೆ ಟಬು ಈ ರೀತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ