ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರಥಮ ಆದ್ಯತೆ: ಸಚಿವ ದಿನೇಶ್ ಗುಂಡೂರಾವ್

Govindaraj S   | Kannada Prabha
Published : Jul 23, 2025, 09:48 AM ISTUpdated : Jul 24, 2025, 04:57 AM IST
Dinesh Gundu Rao

ಸಾರಾಂಶ

ಮಹಿಳೆಯರಲ್ಲಿ ಕಾಣಿಸುವ ಸ್ತನ ಕ್ಯಾನ್ಸರ್ ಸೇರಿದಂತೆ ವಿವಿಧ ಬಗೆಯ ಕಾಯಿಲೆ ತಪಾಸಣೆ ಮಾಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಮಹತ್ವದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್‌ ಹೇಳಿದರು.

ಶಿರಹಟ್ಟಿ (ಜು.23): ಸರ್ಕಾರ ಹೊಸದಾಗಿ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ರಕ್ತದ ಒತ್ತಡ, ಶುಗರ್, ಕಿಡ್ನಿ, ಹೃದಯಾಘಾತ, ಮಹಿಳೆಯರಲ್ಲಿ ಕಾಣಿಸುವ ಸ್ತನ ಕ್ಯಾನ್ಸರ್ ಸೇರಿದಂತೆ ವಿವಿಧ ಬಗೆಯ ಕಾಯಿಲೆ ತಪಾಸಣೆ ಮಾಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಮಹತ್ವದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಎಂಜಿನಿಯರಿಂಗ್ ಘಟಕ, ತಾಲೂಕು ಆರೋಗ್ಯ ಅಧಿಕಾರಿಗಳು ಶಿರಹಟ್ಟಿ ವತಿಯಿಂದ ನಬಾರ್ಡ್‌ ಯೋಜನೆಯಡಿಯಲ್ಲಿ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮಾಡಿ ಮಾತನಾಡಿದರು.

ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಇದರಲ್ಲಿ ಯಾವುದೇ ಪಕ್ಷಪಾತ, ಭೇದಭಾವವಿಲ್ಲ. ಸರ್ಕಾರದ ಮಾನ್ಯತೆಯಂತೆ ರಾಜ್ಯದ ಹಳೆ ತಾಲೂಕುಗಳಲ್ಲಿ ಎಲ್ಲಿ ೧೦೦ ಹಾಸಿಗೆಯ ಆಸ್ಪತ್ರೆಗಳಿಲ್ಲವೋ ಅಲ್ಲಿ ಮೊದಲ ಆದ್ಯತೆ ನೀಡಿ ಒಟ್ಟು 7100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ 30 ರಿಂದ 40 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಇದರಲ್ಲಿ ಸುಸಜ್ಜಿತ ಕಟ್ಟಡ, ಸಲಕರಣೆಗಳು, ಸಿಬ್ಬಂದಿ ವಸತಿಗೃಹಗಳು ಸೇರಿ ಇನ್ನೂ ಅನೇಕ ಸೌಕರ್ಯಗಳು ಲಭಿಸಲಿವೆ ಎಂದರು.

ರಾಜ್ಯದಲ್ಲಿ 9 ಹೊಸ ತಾಲೂಕು ಆಸ್ಪತ್ರೆಗಳನ್ನು ನಿರ್ಮಿಸಲು ಈಗಾಗಲೇ ಅನುಮೋದನೆಯನ್ನು ಪಡೆಯಲಾಗಿದೆ. ₹880 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ನಿಜವಾಗಲು ಬಡ ಜನರ ಬಗ್ಗೆ ಕಾಳಜಿ ಇದ್ದಾಗ ಮಾತ್ರ ಇಂತಹ ಜನಪರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯ. ಅಂತಹ ಮಹತ್ತರ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು. ಜಿಲ್ಲಾ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲ ಚಿಕಿತ್ಸಾ ಸೌಲಭ್ಯಗಳು ಇನ್ನು ಮುಂದೆ ತಾಲೂಕು ಆಸ್ಪತ್ರೆಯಲ್ಲಿಯೂ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. 24 ತಾಸು ಸೇವೆ ದೊರೆಯಲು ೨, ೩ ತಿಂಗಳಲ್ಲಿ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ವಿವಿಧ ಕಾಯಿಲೆಯ ತಜ್ಞ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾನೂನು ಹಾಗೂ ಪ್ರವಾಸೋದ್ಯಮ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಜನಪರ ಆಡಳಿತ ನೀಡುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುತ್ತಿದೆ. ವಿಶೇಷವಾಗಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಮಹಿಳಾ ಸಬಲೀಕರಣವಾಗಿದೆ ಎಂದರು. ಗೊಂದಲ ಸೃಷ್ಟಿ ಮಾಡುವ ಕೆಲಸ ನಮ್ಮ ಸರ್ಕಾರದಲ್ಲಿ ಇಲ್ಲ. ರಾಷ್ಟ್ರದಲ್ಲಿಯೇ ಮೊದಲಬಾರಿಗೆ ಬಡತನ ಕಿತ್ತೊಗೆದ ಸರ್ಕಾರ ನಮ್ಮದು. ಶೇ. 99ರಷ್ಟು ಅರ್ಹ ಬಡವರಿಗೆ ಕಾಂಗ್ರೆಸ್ ಸರ್ಕಾರದ ಯೋಜನೆಗಳು ತಲುಪಿವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಮ್ಮ ಸರ್ಕಾರದ ಯೋಜನೆ ತಲುಪಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಕೈಗಾರಿಕೆ ಸ್ಥಾಪನೆಗೆ ಗಮನಹರಿಸಿ: ಗದಗ ಜಿಲ್ಲೆ ನೈಸರ್ಗಿಕವಾಗಿ ಅತ್ಯಂತ ಸಂಪದ್ಭರಿತ ಜಿಲ್ಲಾಯಾಗಿದ್ದು, ಜಿಲ್ಲೆಯ ಶಿರಹಟ್ಟಿ ತಾಲೂಕು ಸೇರಿದಂತೆ ದುಡಿಯುವ ವರ್ಗಕ್ಕೆ ಕೆಲಸವಿಲ್ಲದಾಗಿದೆ. ಬರೀ ಬೆಂಗಳೂರು ಮಹಾ ನಗರದಲ್ಲಿಯೇ ಕೈಗಾರಿಗೆ ಸ್ಥಾಪನೆಗೆ ಒತ್ತು ನೀಡದೇ ನಮ್ಮ ಜಿಲ್ಲೆಯಲ್ಲಿಯೂ ಕೈಗಾರಿಕೆ ಸ್ಥಾಪನೆಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅವರ ಗಮನ ಸೆಳೆದರು. ಕಪ್ಪತ್ತಗುಡ್ಡ ಪ್ರದೇಶದಲ್ಲಿ ಇಂದು ಗಾಳಿ ವಿದ್ಯುತ್ ಯಂತ್ರ ಅಳವಡಿಕೆಗೆ ಸರ್ಕಾರದ ಗಮನ ಸೆಳೆದಿದ್ದೇ ಶಿರಹಟ್ಟಿಯ ಹಿಂದಿನ ಕಾಂಗ್ರೆಸ್ ಮುಖಂಡರಾಗಿದ್ದ ಮಲ್ಲೇಶಪ್ಪ ಸ್ವಾಮಿ ಅವರು ಎಂದು ಸ್ಮರಿಸಿದ ಅವರು, ಅಂದು ನಾನು ಎಂಎಲ್‌ಸಿ ಆಗಿದ್ದ ವೇಳೆ ಅಂದು ಜೆ.ಎಚ್. ಪಟೇಲ್ ಅವರು ವಿದ್ಯುತ್ ಮಂತ್ರಿಯಾಗಿದ್ದು, ಅವರ ಗಮನಕ್ಕೆ ತಂದಾಗ ಈ ಕೆಲಸಕ್ಕೆ ಆದ್ಯತೆ ನೀಡಿದರು ಎಂದು ಹೇಳಿದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಶಿರಹಟ್ಟಿ ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಾಗಿದ್ದು, ಅಭಿವೃದ್ಧಿಗೆ ಸಚಿವರು ಆದ್ಯತೆ ನೀಡಬೇಕು. ಈ ಕುರಿತಂತೆ ಸಚಿವರುಗಳ ಗಮನಕ್ಕೆ ತರಲಾಗಿದೆ ಎಂದರು. ಮಾಜಿ ಸಂಸದ ಐ.ಜಿ. ಸನದಿ, ಸುಜಾತ ದೊಡ್ಡಮನಿ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಆನಂದ ಗಡ್ಡದ್ದೇವರಮಠ, ಮಾಜಿ ಶಾಸಕ ರಾಮಣ್ಣ ಲಮಾಣಿ, ಎಚ್.ಡಿ. ಮಾಗಡಿ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಅಜ್ಜು ಪಾಟೀಲ, ವಿ.ವಿ. ಕಪ್ಪತ್ತನವರ, ಸಿ.ಸಿ. ನೂರಶೆಟ್ಟರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಎಸ್ಪಿ ಜಗದೀಶ್, ಸಿಇಒ ಭರತ್ ಎಸ್, ಡಿಎಚ್‌ಓ ಡಾ. ಎಸ್.ಎಸ್. ನಿಲಗುಂದ, ಡಾ. ವೆಂಕಟೇಶ ರಾಠೋಡ, ಡಾ.ಸುಭಾಸ ದೈಗೊಂಡ, ಬಿ.ಬಿ. ಅಸೂಟಿ, ಶಿವನಗೌಡ ಪಾಟೀಲ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!