Latest Videos

ಜನರು ಸಂಗ್ರಹಿಸಿದ್ದ ಅಕ್ರಮ ವನ್ಯಜೀವಿ ಅಂಗಾಂಗ ವಶ: ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು

By Kannadaprabha NewsFirst Published May 24, 2024, 8:45 AM IST
Highlights

ಅಕ್ರಮವಾಗಿ ಸಂಗ್ರಹಿಸಿದ ವನ್ಯಜೀವಿಗಳ ಅಂಗಾಗಗಳನ್ನು ರಾಜ್ಯ ಅರಣ್ಯ ಇಲಾಖೆ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಗಡುವು ನೀಡಲಾಗಿತ್ತು. ಅದರಂತೆ ಏಪ್ರಿಲ್‌ 11ರವರೆಗೆ ಹಲವರು ಹುಲಿ ಉಗುರು ಸೇರಿದಂತೆ ಇನ್ನಿತರ ವನ್ಯಜೀವಿ ಅಂಗಾಗಗಳನ್ನು ಇಲಾಖೆ ವಶಕ್ಕೆ ನೀಡಿದ್ದಾರೆ. ಆದರೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ: ಅರಣ್ಯ ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು(ಮೇ.24): ಅಕ್ರಮವಾಗಿ ಸಂಗ್ರಹಿಸಿದ್ದ ಹುಲಿ ಉಗುರು ಸೇರಿ ಇನ್ನಿತರ ವನ್ಯಜೀವಿಗಳ ಅಂಗಾಂಗವನ್ನು ರಾಜ್ಯ ಅರಣ್ಯ ಇಲಾಖೆ ವಶಕ್ಕೆ ಪಡೆಯುವ ವಿಚಾರಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವ್ಯಕ್ತಪಡಿಸಿರುವ ಆಕ್ಷೇಪದ ಕುರಿತಂತೆ ಕಾನೂನು ತಜ್ಞರ ಸಲಹೆ ಪಡೆಯಲು ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಅಕ್ರಮವಾಗಿ ಸಂಗ್ರಹಿಸಿದ್ದ ಹುಲಿ ಉಗುರನ್ನು ರಾಜ್ಯ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆಯುವ ವಿಚಾರಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಹುಲಿ ಉಗುರನ್ನು ವಶಕ್ಕೆ ಪಡೆಯುವ ವಿಚಾರ ರಾಜ್ಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಆ ಕುರಿತು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪತ್ರದ ಮೂಲಕ ತಿಳಿಸಿದೆ. ಈ ಕುರಿತಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಬ್ಯಾಗಿನಲ್ಲಿ ಹುಲಿ ತಲೆಬರುಡೆ, ಉಗುರು, ಹಲ್ಲು ಪತ್ತೆ, ಚಿಕ್ಕಮಗಳೂರಿನಲ್ಲಿ ಇಬ್ಬರು ಅರೆಸ್ಟ್

ಅಕ್ರಮವಾಗಿ ಸಂಗ್ರಹಿಸಿದ ವನ್ಯಜೀವಿಗಳ ಅಂಗಾಗಗಳನ್ನು ರಾಜ್ಯ ಅರಣ್ಯ ಇಲಾಖೆ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಗಡುವು ನೀಡಲಾಗಿತ್ತು. ಅದರಂತೆ ಏಪ್ರಿಲ್‌ 11ರವರೆಗೆ ಹಲವರು ಹುಲಿ ಉಗುರು ಸೇರಿದಂತೆ ಇನ್ನಿತರ ವನ್ಯಜೀವಿ ಅಂಗಾಗಗಳನ್ನು ಇಲಾಖೆ ವಶಕ್ಕೆ ನೀಡಿದ್ದಾರೆ. ಆದರೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಹುಲಿ ಉಗುರು ವಶಕ್ಕೆ ಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಹೇಳಿದೆ. ಈ ಬಗ್ಗೆ ಕಾನೂನು ಇಲಾಖೆ ಜತೆಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

click me!