US-Iran conflict: ನಿಜವಾಗ್ಲೂ ಗ್ಯಾಸ್ ಬೆಲೆ ಹೆಚ್ಚಾಯ್ತಾ? ಸಿಲಿಂಡರ್‌ ಬುಕ್ ಮಾಡಲು ಆಗುತ್ತಿಲ್ವ? ಅಸಲಿ ಕಾರಣ ಏನು?

Asianetnews Kannada Stories   | Kannada Prabha
Published : Mar 11, 2026, 04:49 AM IST
Did the Iran Israel war really hike gas prices Unable to book a cylinder Here is the reason

ಸಾರಾಂಶ

ಕೊಲ್ಲಿ ಯುದ್ಧದ ಪರಿಣಾಮವಾಗಿ ಸಿಲಿಂಡರ್ ಬೆಲೆ ಏರಿಕೆ ಮತ್ತು ಸಂಭವನೀಯ ಕೊರತೆಯ ಆತಂಕದಿಂದಾಗಿ, ಗ್ರಾಹಕರು ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಸ್ ಬುಕ್ ಮಾಡಲು ಮುಂದಾಗಿದ್ದಾರೆ. ಈ ಕಾರಣದಿಂದಾಗಿ, ವಿಶೇಷವಾಗಿ ಇಂಡೇನ್ ಗ್ಯಾಸ್‌ನ ಸರ್ವರ್‌ಗಳಲ್ಲಿ ಸಮಸ್ಯೆಯಾಗಿದೆ.

-ಬೆಂಗಳೂರು (ಮಾ.11): ಕೊಲ್ಲಿ ಯುದ್ಧದಿಂದಾಗಿ ವಾಣಿಜ್ಯ ಬಳಕೆ ಸಿಲಿಂಡರ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಬೆನ್ನಲ್ಲೇ ರಾಜ್ಯದಲ್ಲಿ ಗೃಹ ಬಳಕೆ ಸಿಲಿಂಡರ್‌ ಬುಕ್‌ ಮಾಡಲು ಪರದಾಟ ಶುರುವಾಗಿದೆ. ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಗ್ಯಾಸ್‌ ಬುಕ್‌ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಸರ್ವರ್‌ ಸಮಸ್ಯೆ ತಲೆದೋರಿ ಈ ಪರದಾಟ ಸೃಷ್ಟಿಯಾಗಿದೆ.

ಇಸ್ರೇಲ್‌-ಅಮೆರಿಕ ದಾಳಿಗೆ ಪ್ರತಿಯಾಗಿ ಕೊಲ್ಲಿರಾಷ್ಟ್ರಗಳ ಮೇಲೆ ಇರಾನ್‌ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ವ್ಯತ್ಯಯ ಉಂಟಾಗಿದ್ದು, ದೇಶದಲ್ಲೂ ಇದರ ಪರಿಣಾಮ ಬಿದ್ದಿದೆ. ಹೀಗಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ವೊಂದಕ್ಕೆ 115 ರು. ಮತ್ತು ಗೃಹ ಬಳಕೆಯ ಸಿಲಿಂಡರ್‌ ಬೆಲೆ 60 ರು. ಹೆಚ್ಚಳವಾಗಿತ್ತು. ಈ ಮಧ್ಯೆ, ವಾಣಿಜ್ಯ ಬಳಕೆಯ ಸಿಲಿಂಡರ್‌ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಹೋಟೆಲ್‌ ಉದ್ಯಮದವರು ಸೋಮವಾರ ಆರೋಪ ಮಾಡುತ್ತಿದ್ದಂತೆ ಆತಂಕಗೊಂಡ ಜನ ಸಿಲಿಂಡರ್‌ ಬುಕ್‌ ಮಾಡಲು ಮುಗಿಬಿದ್ದ ಕಾರಣ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿದೆ.

ಅನಿಲ ಸಿಲಿಂಡರ್‌ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ, ಸಿಲಿಂಡರ್‌ ಕೊರತೆ ಉಂಟಾಗಲಿದೆ ಎಂಬ ಆತಂಕದಿಂದ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪೆನಿಗಳ ಪೈಕಿ ಒಂದಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ನಿಯಮಿತ(ಐಓಸಿಎಲ್‌)ದ ‘ಇಂಡೇನ್‌’ ಅಡುಗೆ ಅನಿಲ ಬುಕ್‌ ಮಾಡಲು ಮುಗಿಬಿದ್ದಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈ ಬಗ್ಗೆ ಮಾಹಿತಿ ನೀಡಿದ ನಗರದ ಇಂಡೇನ್‌ ಸಿಲಿಂಡರ್‌ ಸರಬರಾಜುದಾರರಾಗಿರುವ ರಾಜಾ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಾರಾಯಣ್‌, ‘ಮಂಗಳವಾರ ಸರ್ವರ್‌ ಸಮಸ್ಯೆ ಉಂಟಾಗಿರುವುದು ನಿಜ. ಹೀಗಾಗಿ ಗ್ರಾಹಕರು ಸಿಲಿಂಡರ್‌ ಬುಕ್‌ ಮಾಡಲು ಸಾಧ್ಯವಾಗುತ್ತಿಲ್ಲ. ಶೀಘ್ರ ಸಮಸ್ಯೆ ಪರಿಹರಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಜೆಯಾದ ಬಳಿಕ ಬುಕ್‌ ಮಾಡಿ:

ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಚಿತ್ರದುರ್ಗ ಜಿಲ್ಲೆಯ ಸಿಲಿಂಡರ್‌ ಸರಬರಾಜುದಾರರೊಬ್ಬರು ಮಾಹಿತಿ ನೀಡಿ, ‘ಸರ್ವರ್‌ ಸಮಸ್ಯೆ ಉಂಟಾಗಿರುವುದು ಸತ್ಯ. ಸಿಲಿಂಡರ್‌ ಕೊರತೆ ಆತಂಕದ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ದಿನಕ್ಕೆ ಎಷ್ಟು ಸಿಲಿಂಡರ್‌ ಬುಕ್‌ ಆಗುತ್ತಿತ್ತೋ ಅದಕ್ಕಿಂತ 10 ಪಟ್ಟು ಅಧಿಕ ಸಿಲಿಂಡರ್‌ ಬುಕ್‌ ಮಾಡಲು ಗ್ರಾಹಕರು ಮುಂದಾಗಿದ್ದಾರೆ. ಆದ್ದರಿಂದ ಸರ್ವರ್‌ ಸಮಸ್ಯೆ ಉಂಟಾಗಿದೆ. ಇದನ್ನು ಗಮನಿಸಿದ ಕಂಪನಿಯು ಸಂಜೆ 6 ಗಂಟೆಯ ಮೇಲೆ ಬುಕ್‌ ಮಾಡುವಂತೆ ಗ್ರಾಹಕರಿಗೆ ಸೂಚಿಸಲು ತಿಳಿಸಿದೆ’ ಎಂದು ಸ್ಪಷ್ಟಪಡಿಸಿದರು.

‘ದೇಶಾದ್ಯಂತ 84549 55555 ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡುವ ಮೂಲಕ ಸಿಲಿಂಡರ್‌ ಬುಕ್‌ ಮಾಡಲು ಒಂದೇ ಸಂಖ್ಯೆ ಇದ್ದು, ಹೆಚ್ಚಿನ ಕರೆಗಳು ಬರುತ್ತಿರುವುದರಿಂದ ಸರ್ವರ್‌ ಸಮಸ್ಯೆ ಉಂಟಾಗಿದೆ. ಮೊದಲೆಲ್ಲ ಸಿಲಿಂಡರ್‌ ಬುಕ್‌ ಮಾಡಿದ ಎರಡು ದಿನಕ್ಕೆಲ್ಲ ಸರಬರಾಜು ಆಗುತ್ತಿತ್ತು. ಆದರೆ ಈಗ ನಾಲ್ಕು ದಿನವಾಗುತ್ತಿದೆ. ನಮಗೆ ಕಂಪೆನಿಯು ಸರಬರಾಜು ಮಾಡುವ ಸಿಲಿಂಡರ್‌ ಸಂಖ್ಯೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ’ ಎಂದು ಏಜೆನ್ಸಿಯೊಂದರ ಮೂಲಗಳು ವಿವರಿಸಿವೆ.

ಐವಿಆರ್‌ಎಸ್‌, ಮಿಸ್ಡ್‌ಕಾಲ್ ಬುಕ್ಕಿಂಗ್‌ನದ್ದೇ ಸಮಸ್ಯೆ

ಅಡುಗೆ ಅನಿಲ ಸಿಲಿಂಡರ್‌ ಅನ್ನು ಸಾಮಾನ್ಯವಾಗಿ ಮೂರ್ನಾಲ್ಕು ವಿಧಾನದಲ್ಲಿ ಬುಕ್‌ ಮಾಡಬಹುದು. ಐವಿಆರ್‌ಎಸ್‌ ಸಂಖ್ಯೆಗೆ ಕಾಲ್‌ ಮಾಡಿದರೆ, ಸಿಲಿಂಡರ್‌ ಬುಕ್ಕಿಂಗ್‌ ಮಾಡಲು ಒಂದನ್ನು ಒತ್ತಿ, ವಿಳಾಸ ಬದಲಾವಣೆಗೆ... ಹೀಗೆ ಬೇರೆ ಬೇರೆ ಆಯ್ಕೆಗಳಿವೆ. ಈ ವಿಧಾನದಲ್ಲೂ ಸರ್ವರ್‌ ಸಮಸ್ಯೆ ಉದ್ಭವವಾಗಿದೆ. ಇದಲ್ಲದೆ, ಮಿಸ್ಡ್‌ ಕಾಲ್‌ ಮೂಲಕವೂ ಸಿಲಿಂಡರ್‌ ಬುಕ್‌ ಮಾಡಬಹುದಾಗಿದ್ದು ಇಲ್ಲೂ ಸಿಲಿಂಡರ್‌ ಬುಕ್‌ ಮಾಡಲು ಅಡಚಣೆ ಆಗುತ್ತಿದೆ. ವಾಟ್ಸಪ್‌, ಆ್ಯಪ್‌ ಮೂಲಕ ಬುಕ್‌ ಮಾಡಲು ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ: ಠಾಣೆಗೆ ಮುತ್ತಿಗೆ ಹಾಕಿದ ವಕೀಲರು
ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಸಚಿವ ಮಧು ಬಂಗಾರಪ್ಪ