ಆನ್‌ಲೈನ್ ಕಿರುಕುಳ ಪ್ರಕರಣ: ಕಟಕಟೆಯಲ್ಲಿ ನಿಂತ ನಟಿ ರಮ್ಯಾ, ಇದು ನನ್ನ ವೈಯಕ್ತಿಕ ಉದ್ದೇಶಕ್ಕಾಗಿ ಅಲ್ಲ ಎಂದ್ರು!

Published : Mar 10, 2026, 07:50 PM IST
Actress Ramya

ಸಾರಾಂಶ

ನಟಿ ರಮ್ಯಾ ಅವರು ತಮಗೆ ಬಂದ ಅಶ್ಲೀಲ ಸಂದೇಶ ಮತ್ತು ಬೆದರಿಕೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಇದು ವೈಯಕ್ತಿಕ ಹೋರಾಟವಲ್ಲ, ಬದಲಿಗೆ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಈ ಪ್ರಕರಣವನ್ನು ಮುಂದುವರಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 12 ಆರೋಪಿಗಳ ವಿರುದ್ಧದ ಈ ಪ್ರಕರಣದ ವಿಚಾರಣೆ ಆರಂಭವಾಗಿದೆ.

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆಗಳನ್ನು ಕಳುಹಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಟಿ ಹಾಗೂ ರಾಜಕಾರಣಿ ರಮ್ಯಾ (ದಿವ್ಯಾ ಸ್ಪಂದನ) ಇಂದು ಬೆಂಗಳೂರಿನ 46ನೇ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಸಾಕ್ಷ್ಯವನ್ನು ದಾಖಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ (ಟ್ರಯಲ್) ಆರಂಭವಾಗಿದ್ದು, ದೂರುದಾರೆಯಾಗಿರುವ ರಮ್ಯಾ ಮೊದಲ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ನಿಂತು ಹೇಳಿಕೆ ನೀಡಿದ್ದಾರೆ.

ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ಇಂದು ನ್ಯಾಯಾಲಯದಲ್ಲಿ ಸಾಕ್ಷಿ ನೀಡಲು ಬಂದಿದ್ದೆ. ಆರೋಪಿಗಳನ್ನು ನೋಡಿದಾಗ ನಿಜವಾಗಿಯೂ ಬೇಸರವಾಗುತ್ತದೆ. ಆದರೆ ಇದು ನನ್ನ ವೈಯಕ್ತಿಕ ಉದ್ದೇಶಕ್ಕಾಗಿ ಅಲ್ಲ. ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ರೀತಿಯಲ್ಲಿ ವರ್ತಿಸುವವರಿಗೆ ಭಯ ಹುಟ್ಟಬೇಕು ಎಂಬ ಕಾರಣದಿಂದಲೇ ಈ ಪ್ರಕರಣವನ್ನು ಮುಂದುವರಿಸುತ್ತಿದ್ದೇನೆ ಎಂದು ಹೇಳಿದರು.

ಮುಂದುವರಿದು ಮಾತನಾಡಿ, ಮಕ್ಕಳನ್ನೂ ಸೇರಿಸಿ ಅಶ್ಲೀಲವಾಗಿ ಕಾಮೆಂಟ್ ಮಾಡಿರುವುದು ಸಾಮಾನ್ಯ ವಿಷಯವಲ್ಲ. ಇಂತಹ ಘಟನೆಗಳನ್ನು ನಾವು ಗಮನಿಸದೆ ಬಿಟ್ಟರೆ ಮುಂದೆ ಇದೇ ರೀತಿಯ ದುರುಳತನ ಮುಂದುವರಿಯುತ್ತದೆ. ಅದಕ್ಕಾಗಿ ಎಲ್ಲಾ ಹೆಣ್ಣುಮಕ್ಕಳ ಪರವಾಗಿ ನಾನು ಈ ಪ್ರಕರಣವನ್ನು ಮುಂದುವರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ ಹಿನ್ನೆಲೆ

ನಟಿ ರಮ್ಯಾಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲ ಸಂದೇಶಗಳು ಹಾಗೂ ಅತ್ಯಾಚಾರದ ಬೆದರಿಕೆಗಳು ಬಂದಿದ್ದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದರು.

ತನಿಖೆಯ ನಂತರ ಪೊಲೀಸರು 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಚಾರ್ಜ್‌ಶೀಟ್ ಆಧರಿಸಿ ನ್ಯಾಯಾಲಯವು ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿ (ಚಾರ್ಜ್ ಫ್ರೇಮ್ ಮಾಡಿ) ಪ್ರಕರಣದ ವಿಚಾರಣೆಯನ್ನು ಆರಂಭಿಸಿದೆ.

ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ

ಈ ಪ್ರಕರಣದ ವಿಚಾರಣೆ ಬೆಂಗಳೂರಿನ 46ನೇ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ರಾಜೀವ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ನ್ಯಾಯಾಲಯವು ರಮ್ಯಾ ಸೇರಿದಂತೆ ಮೂವರು ಸಾಕ್ಷಿದಾರರಿಗೆ ಸಮನ್ಸ್ ಜಾರಿ ಮಾಡಿದ್ದು, ಅದರ ಮೇರೆಗೆ ರಮ್ಯಾ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯದಲ್ಲಿ ಕೆಲವು ಕ್ಷಣಗಳ ಕಾಲ ಕಟಕಟೆಯಲ್ಲಿ ನಿಂತು ರಮ್ಯಾ ತಮ್ಮ ಸಾಕ್ಷ್ಯವನ್ನು ದಾಖಲಿಸಿದರು. ಪ್ರಕರಣದಲ್ಲಿ ಅತ್ಯಾ*ಚಾರ ಬೆದರಿಕೆ ಆರೋಪಗಳೂ ಸೇರಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ‘ಇನ್-ಕ್ಯಾಮೆರಾ’ ವಿಧಾನದಲ್ಲಿ ನಡೆಸಲಾಗುತ್ತಿದೆ.

ನ್ಯಾಯಾಲಯದ ಮುಂದೆ ರಮ್ಯಾ ಹೇಳಿಕೆ

ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆಯಲ್ಲಿ ರಮ್ಯಾ ತಮ್ಮ ವೃತ್ತಿಜೀವನದ ಹಿನ್ನೆಲೆಯನ್ನೂ ವಿವರಿಸಿದರು. “ನಾನು ಚಿತ್ರ ನಟಿ ಹಾಗೂ ರಾಜಕಾರಣಿ. 2014ರವರೆಗೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಒಂದು ಸಿನಿಮಾವನ್ನು ನಿರ್ಮಾಣವೂ ಮಾಡಿದ್ದೇನೆ. 2014ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆ ಆಗಿ ಆಯ್ಕೆಯಾದೆ,” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆಗಳ ಕುರಿತು ಮಾಹಿತಿ ನೀಡಿದ ಅವರು, “2012ರಲ್ಲಿ ‘ರಮ್ಯಾ/ದಿವ್ಯಾ ಸ್ಪಂದನ’ ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಆರಂಭಿಸಿದ್ದೇನೆ. ಅದನ್ನು ಲಕ್ಷಾಂತರ ಮಂದಿ ಅನುಸರಿಸುತ್ತಿದ್ದಾರೆ. ಅಲ್ಲದೆ, ನನ್ನ ಟ್ವಿಟ್ಟರ್ ಖಾತೆಯನ್ನು ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ,” ಎಂದು ಹೇಳಿದ್ದಾರೆ.

ಸಮಾಜಕ್ಕೆ ಸಂದೇಶ

ಈ ಪ್ರಕರಣದ ಮೂಲಕ ಸಮಾಜದಲ್ಲಿ ಮಹಿಳೆಯರ ವಿರುದ್ಧ ನಡೆಯುವ ಆನ್‌ಲೈನ್ ಕಿರುಕುಳಗಳಿಗೆ ಕಾನೂನುಬದ್ಧವಾಗಿ ತಡೆ ಹಾಕಬೇಕೆಂಬ ಸಂದೇಶ ನೀಡಲು ಬಯಸಿರುವುದಾಗಿ ರಮ್ಯಾ ತಿಳಿಸಿದ್ದಾರೆ. ಮಹಿಳೆಯರ ವಿರುದ್ಧ ಅವಹೇಳನಕಾರಿ ಅಥವಾ ಬೆದರಿಕೆಯ ಮಾತುಗಳನ್ನು ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಇನ್ನಿತರ ಸಾಕ್ಷಿದಾರರ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಲಿದೆ. ಪ್ರಕರಣದ ತೀರ್ಪಿನತ್ತ ಇದೀಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಸರ್ಕಾರಿ ವೈದ್ಯರ ಬೇಡಿಕೆಗಳಿಗೆ ಸರ್ಕಾರದ ತಾತ್ವಿಕ ಒಪ್ಪಿಗೆ, ಸಂಧಾನ ಸಭೆ ಯಶಸ್ವಿ, ಒಪಿಡಿ ಸೇವೆ ಬಂದ್?
ಕರ್ನಾಟಕದ ಪ್ರತೀ ಜಿಲ್ಲೆಗಳಲ್ಲೂ LPG ಗ್ಯಾಸ್ ಸಿಲಿಂಡರ್ ಕೊರತೆ: ಹೋಟೆಲ್ ಮುಚ್ಚಲು ನಿರ್ಧರಿಸಿದ ಮಾಲೀಕರು!