
ಹುಬ್ಬಳ್ಳ (ಡಿ.19): ಈಗಾಗಲೇ 3 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶ ಸೇರಿ 5 ಕಡೆ ಮತದಾರ ಪಟ್ಟಿ ‘ವಿಶೇಷ ತೀವ್ರ ಪರಿಷ್ಕರಣೆ’ ಕಾರ್ಯ ನಡೆದಿದೆ. ಆದರೆ, ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡುವ ಮೊದಲೇ ಎಸ್ಐಆರ್ ಕಾರ್ಯ ಜೋರಾಗಿ ನಡೆದಿದೆ.
ಈಗಾಗಲೇ ಧಾರವಾಡದಲ್ಲಿ ಬಿಎಲ್ಒಗಳು ತಮ್ಮ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಹಲವು ರಾಜ್ಯಗಳಲ್ಲಿ ಅಧಿಕೃತವಾಗಿ ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಆರಂಭಿಸಿದ್ದು, ರಾಜ್ಯದಲ್ಲಿ ಅಧಿಕೃತವಾಗಿ ಎಸ್ಐಆರ್ ಆರಂಭಿಸಿಲ್ಲ. ಆದರೂ, ರಾಜ್ಯ ಚುನಾವಣಾ ಆಯೋಗ ಆದೇಶ ಮಾಡಿದ ನಂತರ ಗಡಿಬಿಡಿ ಅಥವಾ ಗೊಂದಲ ಆಗದಿರಲಿ ಎಂದು ಈಗಾಗಲೇ ಎಸ್ಐಆರ್ ಕಾರ್ಯ ಆರಂಭಿಸಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲೇ ನಗರಗಳು ಮತ್ತು ಹಳ್ಳಿಗಳಲ್ಲಿ 58,000 ಬ್ಲಾಕ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.
ಈಗಾಗಲೇ ಕುಂದಗೋಳ ತಾಲೂಕು ಶೇ.75ರಷ್ಟು ಪರಿಷ್ಕರಣೆ ಮಾಡಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ನವಲಗುಂದ ತಾಲೂಕಿನಲ್ಲಿ ಶೇ.74 ಮತ್ತು ಕಲಘಟಗಿ ಶೇ.72, ನವಲಗುಂದ ತಾಲೂಕಿನಲ್ಲಿ 105 ಬಿಎಲ್ಒಗಳು ಶೇ.74ರಷ್ಟು ಕಾರ್ಯ ಪೂರ್ಣಗೊಳಿಸಿದ್ದಾರೆ. ಸದ್ಯ ಯಾವುದೇ ಮತದಾರರ ಹೆಸರನ್ನು ಅಳಿಸುವ ಕಾರ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 2002ರಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗಿತ್ತು. 2002ರಲ್ಲಿ 3.4 ಕೋಟಿ ಮತದಾರರಿದ್ದರು. ಈ ಸಂಖ್ಯೆ ಇದೀಗ 5.4 ಕೋಟಿಯಾಗಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಗುರುತಿಸಲು ಪ್ರಸ್ತುತ 2025ರ ಡೇಟಾವನ್ನು 2002ರ ಡೇಟಾದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.
ಎಸ್‌ಐಆರ್‌ಗೆ ಪೂರ್ವ ತಯಾರಿ ನಡೆಸಲಾಗುತ್ತಿದೆ. ವೋಟರ್ ಮ್ಯಾಪಿಂಗ್ ಮಾಡುವ ಸೂಚನೆ ಇದೆ. ಅದರಂತೆ ಮ್ಯಾಪಿಂಗ್ ಕಾರ್ಯ ನಡೆದಿದೆ. ಎಸ್‌ಐಆರ್ ನೋಟಿಫಿಕೇಶನ್ ಬಂದ ಮೇಲೆ ಆ ಪ್ರಕ್ರಿಯೆ ಆರಂಭಿಸಲಾಗುವುದು. ಈಗ ಮತದಾರರ ಚೀಟಿ ಪರಿಶೀಲನೆ ಕಾರ್ಯ ಮಾಡಲಾಗುತ್ತಿದೆ.
-ದಿವ್ಯಪ್ರಭು, ಧಾರವಾಡ ಜಿಲ್ಲಾಧಿಕಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ