ಯೂಟ್ಯೂಬರ್ ಮುಕಳೆಪ್ಪನ ವಿರುದ್ಧ ದೂರು: ಸುಳ್ಳು ದಾಖಲೆ ನೀಡಿ ಹಿಂದೂ ಯುವತಿ ಜೊತೆ ವಿವಾಹ ಆರೋಪ

Published : Sep 19, 2025, 12:33 PM ISTUpdated : Sep 19, 2025, 04:35 PM IST
YouTuber Mukaleppa Case

ಸಾರಾಂಶ

ಉತ್ತರ ಕರ್ನಾಟಕದ ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ, ಸುಳ್ಳು ದಾಖಲೆ ನೀಡಿ ಹಿಂದೂ ಯುವತಿ ವಿವಾಹವಾಗಿದ್ದಾರೆ ಮತ್ತು ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಬಜರಂಗದಳ ದೂರು ದಾಖಲಿಸಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸರು ದಂಪತಿಯನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರೆದಿದೆ.

ಧಾರವಾಡ (ಸೆ.19): ಉತ್ತರ ಕರ್ನಾಟಕದ ಜನಪ್ರಿಯ ಯೂಟ್ಯೂಬರ್ ಮತ್ತು ಶಾರ್ಟ್‌ ವಿಡಿಯೋ ಸ್ಟಾರ್‌ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನು ವಿವಾಹವಾಗಿದ್ದಾನೆ ಮತ್ತು ತನ್ನ ವೀಡಿಯೊಗಳಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಸುಳ್ಳು ದಾಖಲೆ ಸೃಷ್ಟಿಸಿ ವಿವಾಹ:

ದೂರಿನ ಪ್ರಕಾರ, ಜೂನ್ 5, 2025ರಂದು ಮುಕಳೆಪ್ಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್‌ ರಿಜಿಸ್ಟರ್ ಕಚೇರಿಯಲ್ಲಿ ಹಿಂದೂ ಯುವತಿಯಾದ ಗಾಯತ್ರಿಯನ್ನು ವಿವಾಹವಾಗಿದ್ದಾನೆ. ಈ ವಿವಾಹಕ್ಕಾಗಿ, ಆತ ತನ್ನ ವಿಳಾಸವನ್ನು ಶಿರಹಟ್ಟಿ ಗಾಂಧಿನಗರ ಎಂದು ನಮೂದಿಸಿ ನಕಲಿ ದಾಖಲೆಗಳನ್ನು ನೀಡಿದ್ದಾನೆ ಎಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ. ಮುಕಳೆಪ್ಪ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ವಂಚನೆ ಮಾಡುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ.

ಹಿಂದೂ ಧರ್ಮಕ್ಕೆ ಅವಮಾನ ಆರೋಪ:

ಕ್ವಾಜಾ ಅಲಿಯಾಸ್ ಮುಕಳೆಪ್ಪ ಹಿಂದೂ ಯುವತಿಯರೊಂದಿಗೆ ಹೆಚ್ಚಾಗಿ ವಿಡಿಯೋಗಳನ್ನು ಮಾಡುತ್ತಾನೆ. ಆತನ ವಿಡಿಯೋಗಳಲ್ಲಿ ಹಿಂದೂ ಧರ್ಮ ಮತ್ತು ಆಚರಣೆಗಳನ್ನು ಅವಮಾನಿಸುವ ಅಂಶಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಿಂದುತ್ವ ಮತ್ತು ಹಿಂದೂ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಮುಕಳೆಪ್ಪ ಇಂತಹ ವಿಡಿಯೋಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಿರುವ ಬಜರಂಗದಳದ ಸಂಚಾಲಕ ಸಿದ್ದು ಹಿರೇಮಠ ಮತ್ತು ಕಾರ್ಯಕರ್ತ ಶಂಕರ್, ಇಂತಹ ವಿಡಿಯೋಗಳು ಸಮಾಜದಲ್ಲಿ ಧಾರ್ಮಿಕ ಅಶಾಂತಿಯನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ.

ದಂಪತಿಯ ವಿಚಾರಣೆ:

ಬಜರಂಗದಳದ ಕಾರ್ಯಕರ್ತರು ದೂರು ನೀಡಿದ ನಂತರ, ಧಾರವಾಡ ಗ್ರಾಮೀಣ ಪೊಲೀಸರು ಮುಕಳೆಪ್ಪ ಮತ್ತು ಆತನ ಪತ್ನಿ ಗಾಯತ್ರಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಗಾಯತ್ರಿಯನ್ನು ಮನವೊಲಿಸಲು ಪ್ರಯತ್ನಿಸಿದಾಗ, ಆಕೆ ತನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಅವರ ಮನವಿಯನ್ನು ತಿರಸ್ಕರಿಸಿದ್ದಾಳೆ.

'ಹಿಂದೂ ಹೆಣ್ಣುಮಕ್ಕಳು ಇಂತಹ ಮತಾಂದರಿಂದ ದೂರವಿರಬೇಕು' ಎಂದು ಬಜರಂಗದಳದ ಕಾರ್ಯಕರ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಮುಕಳೆಪ್ಪ ನೀಡಿದ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌