
ವರದಿ: ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಸೆ.19): ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾಗಿರುವ ಅಸಹಜ ಸಾವುಗಳ ಪ್ರಕರಣ ತನಿಖೆ ವೇಳೆ ಬಂಗ್ಲೆಗುಡ್ಡೆಯಲ್ಲಿ ದೊರೆತ್ತಿರುವ ಆ ಒಂದು ಗುರುತ್ತಿನ ಚೀಟಿ ಕೊಡಗಿನ ವ್ಯಕ್ತಿಯದ್ದೇ ಇರಬಹುದು ಎನ್ನಲಾಗುತ್ತಿದೆ. ಹಾಗಾದರೆ ಕೊಡಗಿನ ವ್ಯಕ್ತಿಯ ಗುರುತಿನ ಚೀಟಿ ಬಂಗ್ಲೆಗುಡ್ಡೆಯಲ್ಲಿ ದೊರೆತ್ತಿದ್ದೇಗೆ? ವಿವರ ಇಲ್ಲಿದೆ ಮುಂದೆ ಓದಿ.
ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಯು ಬಿ ಅಯ್ಯಪ್ಪ ಯಾರು?
ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಎರಡನೇ ಬಾರಿಗೆ ಶೋಧ ನಡೆಸುತ್ತಿರುವ ಎಸ್ಐಟಿ ತಂಡಕ್ಕೆ ಅಸ್ತಿಪಂಜರದ ಬಳಿ ಯು.ಬಿ. ಅಯ್ಯಪ್ಪ ಎಂಬುವರ ಗುರುತ್ತಿನ ಚೀಟಿಯೊಂದು ದೊರೆತ್ತಿದೆ. ಹಾಗಾದರೆ ಯಾರು ಈ ಯು.ಬಿ. ಅಯ್ಯಪ್ಪ ಎಂದರೆ ಅದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿಯೇ ಈ ಯು.ಬಿ. ಅಯ್ಯಪ್ಪ ಎನ್ನುವುದು ಖಚಿತವಾಗಿದೆ.
ಇದನ್ನೂ ಓದಿ: ಧಾರವಾಡದಲ್ಲಿ ಜಾತಿ ಗಣತಿಯ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲು
ಎಲ್ಲೋ ಬದುಕಿರಬಹುದೆಂದು ನಂಬಿದ್ದ ಕುಟುಂಬಕ್ಕೆ ಶಾಕ್
ಹಾಗಾದರೆ ಯು.ಬಿ. ಅಯ್ಯಪ್ಪ ಅವರ ಗುರುತ್ತಿನ ಚೀಟಿ ಅಲ್ಲಿಗೆ ಹೋಗಿದ್ದಾದರೂ ಹೇಗೆ ಎಂದರೆ 2017 ರಲ್ಲಿಯೇ ಯು.ಬಿ. ಅಯ್ಯಪ್ಪ ಮೈಸೂರಿಗೆ ಆಸ್ಪತ್ರೆಗೆಂದು ಹೋದವರು ನಾಪತ್ತೆಯಾಗಿದ್ದರು. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಅಯ್ಯಪ್ಪ ಅವರನ್ನು ಮೈಸೂರಿಗೆ ಚಿಕಿತ್ಸೆಗೆಂದು ಜೂನ್ 18 ರಂದು ಅವರ ಮಗ ಜೀವನ್ ಅವರೇ ಮೈಸೂರಿನ ಬಸ್ಸು ಹತ್ತಿಸಿ ಕಳುಹಿಸಿದ್ದರು. ಆದರೆ ಮಧ್ಯಾಹ್ನ 2 ಗಂಟೆ ಎನ್ನುವಷ್ಟರಲ್ಲಿ ಅಯ್ಯಪ್ಪ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಅವರ ಮಗ ಜೀವನ್ ಮೈಸೂರಿನಲ್ಲಿ ಅವರು ತೋರಿಸುತ್ತಿದ್ದ ಆಸ್ಪತ್ರೆಗಳೆಲ್ಲಾ ಹುಡುಕಾಡಿದ್ದರು. ಆದರೂ ಅವರು ಸಿಗದಿದ್ದಾಗ ಕೊಡಗಿನ ಅರಣ್ಯ, ನದಿ ಹಾಗೂ ನೆಂಟರಿಷ್ಟರ ಮನೆಗಳಲೆಲ್ಲಾ ಮೂರು ದಿನಗಳ ಕಾಲ ಹುಡುಕಾಡಿದ್ದರು. ಸಿಗದಿದ್ದಾಗ ಜೀವನ್ ಅವರು ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಮೂರು ತಿಂಗಳ ಕಾಲ ಎಲ್ಲೆಡೆ ತಡಕಾಡಿದ್ದರು. ಆದರೂ ಸಿಗದಿದ್ದಾಗ ಎಲ್ಲೋ ಇರಬಹುದು ಎಂದು ಜೀವನ್ ಸುಮ್ಮನಾಗಿದ್ದರು.
ತಂದೆ ಆತ್ಮ೧ಹತ್ಯೆ ಮಾಡಿಕೊಳ್ಳುವವರಲ್ಲ:
ಇದೀಗ ಅಯ್ಯಪ್ಪ ಅವರ ಐ.ಡಿ. ಕಾರ್ಡ್ ಬಂಗ್ಲೆಗುಡ್ಡೆಯಲ್ಲಿ ಅಸ್ತಿ ಪಂಜರವೊಂದರ ಪಕ್ಕದಲ್ಲಿ ದೊರೆತ್ತಿದೆ. ಜೊತೆಗೆ ಅದರ ಪಕ್ಕದಲ್ಲಿಯೇ ವಾಕಿಂಗ್ ಸ್ಟಿಕ್ ಕೂಡ ದೊರೆತ್ತಿದ್ದು ಅದು ಕೂಡ ಯು.ಬಿ. ಅಯ್ಯಪ್ಪ ಅವರದ್ದೇ ಎನ್ನಲಾಗುತ್ತಿದೆ. ಅದು ಈಗ ಅಯ್ಯಪ್ಪ ಅವರ ಕುಟುಂಬಸ್ಥರನ್ನು ಕಂಗೆಡಿಸಿದೆ. ಎಲ್ಲೋ ಬದುಕಿರಬಹುದು ಎಂದುಕೊಂಡಿದ್ದೆವು. ಈಗ ನಮ್ಮ ತಂದೆಯವರ ಐ.ಡಿ ಕಾರ್ಡ್ ಸಿಕ್ಕಿದೆ ಎನ್ನುವುದು ಬೇಸರ ತರಿಸಿದೆ. ನಮ್ಮ ತಂದೆಯವರು ಹಲವು ದೇವಸ್ಥಾನಗಳಿಗೆ ಹೋಗುತ್ತಿದ್ದರು. ಅದರಲ್ಲೂ ಧರ್ಮಸ್ಥಳಕ್ಕೆ ವರ್ಷದಲ್ಲಿ ಎರಡು ಬಾರಿ ಹೋಗಿ ಬರುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ. ತುಂಬಾ ಧೈರ್ಯವಂತರಾಗಿದ್ದರು. ಆದರೆ ಹೇಗೆ ಅವರು ಅಲ್ಲಿಗೆ ಹೋಗಿ ಏನಾದರೂ ಮಾಡಿಕೊಂಡರು ಎನ್ನುವುದು ಪ್ರಶ್ನೆ ಕಾಡುತ್ತಿದೆ.
ಇದನ್ನೂ ಓದಿ: ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಲಿರುವ ಚಿನ್ನಯ್ಯ, ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿಗೆ ಕರೆತಂದ ಪೊಲೀಸರು
ಎಸ್‌ಐಟಿ ಕರೆದರೆ ಹೋಗುತ್ತೇವೆ:
ಒಂದು ವೇಳೆ ಎಸ್ಐಟಿ ತಂಡ ನಮ್ಮನ್ನು ಕರೆದರೆ ಹೋಗಿ ಐ.ಡಿ. ಕಾರ್ಡ್ ಪರಿಶೀಲಿಸುತ್ತೇನೆ. ಅದು ನಮ್ಮ ತಂದೆಯವರ ಅಸ್ತಿ ಪಂಜರವೇ ಆಗಿದ್ದರೆ ಅದನ್ನು ಕೊಟ್ಟರೆ ನಮ್ಮ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದಿದ್ದಾರೆ. ಏನೇ ಆಗಲಿ ಆಸ್ಪತ್ರೆಗೆಂದು ಕೊಡಗಿನ ಟಿ.ಶೆಟ್ಟಿಗೇರಿಯಿಂದ ಬಸ್ಸೇರಿ ಹೊರಟ ಯು.ಬಿ. ಅಯ್ಯಪ್ಪ ಅವರು ಏಳು ವರ್ಷಗಳ ಹಿಂದೆ ನಾಪತ್ತೆಯಾಗಿ ಈಗ ಅವರ ಗುರುತ್ತಿನ ಚೀಟಿ ಮಾತ್ರವೇ ದೊರೆತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ