
ಬೆಂಗಳೂರು (ಆ.19): ಧರ್ಮಸ್ಥಳದಲ್ಲಿ ಅಕ್ರಮವಾಗಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಿದ್ದ 'ಅನಾಮಿಕ ಮಾಸ್ಕ್ ಮ್ಯಾನ್'ನ ಹೇಳಿಕೆಗಳು ಇದೀಗ ಮತ್ತೊಬ್ಬ ಮಾಜಿ ಸಹಾಯಕನಿಂದ ಸುಳ್ಳು ಎಂದು ದೃಢಪಟ್ಟಿವೆ. ಮಾಸ್ಕ್‌ಮ್ಯಾನ್‌ನೊಂದಿಗೆ 9 ವರ್ಷಗಳ ಕಾಲ ಶವ ಸಂಸ್ಕಾರದ ಕೆಲಸ ಮಾಡಿದ್ದ ರಾಜು ಎಂಬಾತ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿ ಹಲವು ಸ್ಫೋಟಕ ಸತ್ಯಗಳನ್ನು ಬಯಲು ಮಾಡಿದ್ದಾನೆ.
ಅನಾಮಿಕ ಮಾಸ್ಕ್ ಮ್ಯಾನ್ ಹೇಳಿಕೆ ಸುಳ್ಳು:
ಅನಾಮಿಕ ಮಾಸ್ಕ್ ಮ್ಯಾನ್ ಜೊತೆಗೆ ತಾನು 100ಕ್ಕೂ ಹೆಚ್ಚು ಶವಗಳನ್ನು ಹೂತುಹಾಕಿರುವುದಾಗಿ ರಾಜು ಹೇಳಿದ್ದಾನೆ. ಆದರೆ, ಇದು ಯಾವುದೇ ಅಪರಾಧದ ಕೃತ್ಯವಲ್ಲ. ಬದಲಾಗಿ, ವಾರಸುದಾರರಿಲ್ಲದ, ಅನಾಥ ಶವಗಳನ್ನು ಕಾನೂನುಬದ್ಧವಾಗಿ ಅಂತ್ಯಸಂಸ್ಕಾರ ಮಾಡಿದ ಕೆಲಸವಿದು ಎಂದು ರಾಜು ಸ್ಪಷ್ಟಪಡಿಸಿದ್ದಾರೆ. ವೈದ್ಯರು ಮತ್ತು ಪೊಲೀಸರ ಸಮ್ಮುಖದಲ್ಲಿಯೇ ಈ ಶವ ಸಂಸ್ಕಾರಗಳನ್ನು ನಡೆಸಲಾಗುತ್ತಿತ್ತು. ಪ್ರತಿ ಶವ ಸಂಸ್ಕಾರಕ್ಕೆ ದೇವಸ್ಥಾನದ ಮಾಹಿತಿ ಕೇಂದ್ರದಿಂದಲೇ 50 ರೂಪಾಯಿ ಪಡೆಯುತ್ತಿದ್ದೆವು ಎಂದು ರಾಜು ತಿಳಿಸಿದ್ದಾರೆ. ಆಗಸ್ಟ್ 8 ರಂದು ರಾಜು ಅವರು ಈ ಕುರಿತು 6 ಗಂಟೆಗಳ ಕಾಲ ಎಸ್‌ಐಟಿ ಅಧಿಕಾರಿಗಳ ಮುಂದೆ ಸಂಪೂರ್ಣ ಹೇಳಿಕೆಯನ್ನು ದಾಖಲಿಸಿದ್ದಾರೆ.
ಅನಾಮಿಕ ಹೂತ ಜಾಗವನ್ನು ತಪ್ಪಾಗಿ ತೋರಿಸುತ್ತಿದ್ದಾನೆಯೇ?
ಮಾಸ್ಕ್‌ಮ್ಯಾನ್ ತನ್ನ ಆರೋಪಗಳಲ್ಲಿ ಶವಗಳನ್ನು ಹೂತಿದ್ದ ಸ್ಥಳದ ಬಗ್ಗೆ ಹೇಳಿದ್ದ. ಆದರೆ, ರಾಜು, ಅನಾಮಿಕ ಮಾಸ್ಕ್‌ಮ್ಯಾನ್ ಬೇರೆ ಬೇರೆ ಸ್ಥಳಗಳನ್ನು ತೋರಿಸುತ್ತಿದ್ದಾನೆ. ಅವನು ಹೇಳುತ್ತಿರುವ ಜಾಗಗಳು ನಿಜವಾದವುಗಳಲ್ಲ. ನಾನು ಬೇಕಾದರೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸರಿಯಾದ ಸ್ಥಳವನ್ನು ತೋರಿಸುತ್ತೇನೆ' ಎಂದು ಸವಾಲು ಹಾಕಿದ್ದಾನೆ. ಇದರಿಂದ ಅನಾಮಿಕನ ಉದ್ದೇಶದ ಬಗ್ಗೆ ಸಂಶಯಗಳು ಮೂಡುತ್ತಿವೆ ಎಂದು ರಾಜು ಹೇಳಿದ್ದಾನೆ.
ರಾಜು ಅವರ ಹೇಳಿಕೆಯ ಪ್ರಕಾರ, ಅನಾಮಿಕ ವ್ಯಕ್ತಿ ಹಣದ ಆಸೆಯಿಂದ ಇಂತಹ ಸುಳ್ಳುಗಳನ್ನು ಹೇಳುತ್ತಿರಬಹುದು. ಶವಗಳ ಮೇಲಿದ್ದ ಚಿನ್ನದ ಒಡವೆಗಳನ್ನು ಈತ ಕದಿಯುತ್ತಿದ್ದ. ಈ ಕೃತ್ಯದಲ್ಲಿ ಪಾಲು ಕೇಳಿದಾಗ ರಾಜುಗೆ ಪಾಲು ಕೊಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಅನಾಮಿಕ ಮಾಡುತ್ತಿರುವುದು ತಪ್ಪು ಕೆಲಸ ಎಂದು ರಾಜು ಎಚ್ಚರಿಕೆ ಕೂಡ ನೀಡಿದ್ದನು.
ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ?
ಈ ಪ್ರಕರಣದಲ್ಲಿ ಮಾಸ್ಕ್‌ಮ್ಯಾನ್ ಮಾಡಿರುವ ಆರೋಪಗಳು ಆತನ ಆರ್ಥಿಕ ಆಸೆಗೆ ಸಂಬಂಧಿಸಿವೆ ಎಂದು ರಾಜು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ, ಧರ್ಮಸ್ಥಳದಲ್ಲಿ ನಡೆದ ಶವ ಸಂಸ್ಕಾರಗಳು ಕಾನೂನುಬದ್ಧವಾಗಿಯೇ ನಡೆದಿವೆ ಎಂಬುದು ರಾಜು ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಮೂಲಕ, ಅನಾಮಿಕನ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದ್ದು, ಈ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ. ಮುಂದಿನ ತನಿಖೆಗಳು ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯನ್ನು ಬಯಲು ಮಾಡಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ