
ದಕ್ಷಿಣ ಕನ್ನಡ/ಉಡುಪಿ (ಆ.23): ಧರ್ಮಸ್ಥಳದ ವಿರುದ್ಧ ಸುಳ್ಳು ದೂರು ಮತ್ತು ಸಾಕ್ಷ್ಯಗಳನ್ನು ಸೃಷ್ಟಿಸಿದ ಪ್ರಕರಣದಲ್ಲಿ, ಆರಂಭದಲ್ಲಿ ಸಾಕ್ಷಿಯಾಗಿದ್ದ ಚಿನ್ನಯ್ಯ ಈಗ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದಾನೆ. ನಿನ್ನೆ ಸುಜಾತಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಬೆನ್ನಲ್ಲೇ, ಇಂದು ಚಿನ್ನಯ್ಯನನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ಬಂಧಿಸಿ, ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದೆ. ಈ ವೇಳೆ, ನ್ಯಾಯಾಧೀಶರ ಮುಂದೆ ಚಿನ್ನಯ್ಯ ಸಂಪೂರ್ಣ ಷಡ್ಯಂತ್ರವನ್ನು ಬಾಯ್ಬಿಟ್ಟಿದ್ದಾನೆ.
ಕೋರ್ಟ್‌ನಲ್ಲಿ ಚಿನ್ನಯ್ಯ ಹೇಳಿಕೆ
ಬೆಳಗ್ಗೆ 11 ಗಂಟೆಗೆ ಕೋರ್ಟ್‌ಗೆ ಹಾಜರಾದ ಚಿನ್ನಯ್ಯ, ನ್ಯಾಯಾಧೀಶರಾದ ವಿಜಯೇಂದ್ರ ಇ.ಹೆಚ್. ಅವರ ಮುಂದೆ ಇನ್-ಕ್ಯಾಮೆರಾ ವಿಚಾರಣೆಗೆ ಒಳಪಟ್ಟಿದ್ದಾನೆ. ನ್ಯಾಯಾಧೀಶರು, 'ಪೊಲೀಸರು ನಿಮಗೆ ಹೊಡೆದಿದ್ದಾರಾ?' ಎಂದು ಕೇಳಿದಾಗ, ಚಿನ್ನಯ್ಯ 'ನಾನು ಪೊಲೀಸರಿಂದಲೇ ಉಳಿದುಕೊಂಡಿದ್ದೇನೆ' ಎಂದು ಉತ್ತರಿಸಿದ್ದಾನೆ. ನ್ಯಾಯಾಧೀಶರು ವಕೀಲರ ಬಗ್ಗೆ ಕೇಳಿದಾಗ, ಚಿನ್ನಯ್ಯ, 'ನನಗೆ ಯಾರೂ ವಕೀಲರು ಬೇಡ, ನನ್ನ ಜತೆಗಿದ್ದ ವಕೀಲರ ಸಹವಾಸ ಬೇಡ' ಎಂದು ಹೇಳಿದ್ದಾನೆ. ಸರ್ಕಾರದಿಂದ ವಕೀಲರನ್ನು ನೇಮಿಸಿಕೊಳ್ಳುವುದಾದರೆ, ಸ್ವೀಕರಿಸುತ್ತೇನೆ ಎಂದು ಆತ ಹೇಳಿದ್ದಾನೆ. ಈ ಮೂಲಕ ತಾನು ಇದುವರೆಗೆ ಯಾರ ಒತ್ತಡದಲ್ಲಿ ಈ ಕೆಲಸ ಮಾಡಿದ್ದೇನೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಷಡ್ಯಂತ್ರದ ಬಗ್ಗೆ ಸಂಪೂರ್ಣ ವಿವರಣೆ:
ತನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದು ಎಸ್‌ಐಟಿ ಮುಂದೆ ಮೊದಲಿಗೆ ಹೇಳಿದ್ದ ಚಿನ್ನಯ್ಯ, ವಕೀಲರು ಹೋದ ಬಳಿಕ ಸಂಪೂರ್ಣ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. 'ಬುರುಡೆ ಗ್ಯಾಂಗ್'ನ ಷಡ್ಯಂತ್ರದ ಬಗ್ಗೆ ವಿವರಿಸಿದ ಆತ, ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟೆಣ್ಣವರ್ ಮತ್ತು ಜಯಂತ್ ಸುಳ್ಳು ದೂರು ನೀಡುವಂತೆ ತನಗೆ ಹೇಳಿದ್ದರು ಎಂದು ಕೋರ್ಟ್‌ಗೆ ತಿಳಿಸಿದ್ದಾನೆ.
ದುಡ್ಡು ಹಾಗೂ ಕೊಲೆ ಕೇಸ್ ಬೆದರಿಕೆ
'ಸುಳ್ಳು ದೂರು ಕೊಡುವಂತೆ ದುಡ್ಡಿನ ಆಸೆಯನ್ನು ತೋರಿಸಿದ್ದರು. ಒಂದು ವೇಳೆ ಸಹಕರಿಸದಿದ್ದರೆ ನನ್ನ ಮೇಲೆ ಕೊಲೆ ಕೇಸ್ ಹಾಕಿಸುತ್ತೇನೆ ಎಂದು ಬೆದರಿಸಿದ್ದರು' ಎಂದು ಯೂಟ್ಯೂಬರ್ ಸಮೀರ್ ಮತ್ತು ಅಜಯ್ ಸೇರಿದಂತೆ ಹಲವರ ಹೆಸರುಗಳನ್ನು ನ್ಯಾಯಾಧೀಶರ ಮುಂದೆ ಚಿನ್ನಯ್ಯ ಪ್ರಸ್ತಾಪಿಸಿದ್ದಾನೆ. 'ನನ್ನ ಪಾಡಿಗೆ ನಾನಿದ್ದವನನ್ನು ದಾರಿತಪ್ಪಿಸಿದರು' ಎಂದು ಆತ ಹೇಳಿದ್ದಾನೆ. ಈ ತಪ್ಪೊಪ್ಪಿಗೆಯನ್ನು ಆಧರಿಸಿ, ಎಸ್‌ಐಟಿ ತನಿಖೆಯನ್ನು ತೀವ್ರಗೊಳಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದ ಪ್ರಮುಖ ಸೂತ್ರಧಾರಿಗಳು ಯಾರು? ಎಂಬುದು ಬಯಲಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ