
ದಕ್ಷಿಣ ಕನ್ನಡ (ಆ.23): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡುವ ಮೂಲಕ ನಾನೊಬ್ಬ ಸಾಕ್ಷಿದಾರ ಎಂದು ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಪೊಲೀಸರಿಂದ ರಕ್ಷಣೆ ಪಡೆದುಕೊಂಡಿದ್ದ ಅನಾಮಿಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯನ್ನು ರದ್ದುಗೊಳಿಸಿದ ಬೆನ್ನಲ್ಲಿಯೇ ಮುಸುಕುದಾರಿ ಅನಾಮಿಕನ ಹೆಸರು ಸಿ.ಎನ್. ಚಿನ್ನಯ್ಯ ಎಂದೂ ಹಾಗೂ ಆತನ ಮೂಲವನ್ನು ರಿವೀಲ್ ಮಾಡಿದೆ.
ಧರ್ಮಸ್ಥಳದ ಪ್ರಕರಣದಲ್ಲಿ ದೂರುದಾರನಾಗಿದ್ದ ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ, ಇದೀಗ ಆರೋಪಿಯಾಗಿ ಪರಿವರ್ತನೆಯಾಗಿದ್ದಾನೆ. ಎಸ್‌ಐಟಿ ತಂಡದಿಂದ ಬಂಧಿಸಲ್ಪಟ್ಟಿದ್ದಾನೆ. ನಿನ್ನೆ ಮಧ್ಯಾಹ್ನವೇ ಮಂಗಳೂರಿನ ಸಕ್ರಮ ಪ್ರಾಧಿಕಾರಕ್ಕೆ (Competent Authority) ಮನವಿ ಸಲ್ಲಿಸಿದ ಎಸ್‌ಐಟಿ, ಚಿನ್ನಯ್ಯನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ (Witness Protection Scheme) ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿತ್ತು.
ಸಾಕ್ಷ್ಯಗಳು ನೀಡಿದ ನಿರ್ಣಾಯಕ ತಿರುವು:
ಎಸ್‌ಐಟಿ ಸಲ್ಲಿಸಿದ ಮನವಿಯಲ್ಲಿ ಕೆಲವು ಮಹತ್ವದ ಸಾಕ್ಷ್ಯಗಳನ್ನು ನೀಡಲಾಗಿತ್ತು, ಇದು ಚಿನ್ನಯ್ಯ ನೀಡಿದ ಹೇಳಿಕೆಗಳು ಸುಳ್ಳು ಎಂದು ಸಾಬೀತುಪಡಿಸಿದವು. ಈ ಸಾಕ್ಷ್ಯಗಳ ಆಧಾರದ ಮೇಲೆ, ಸಕ್ರಮ ಪ್ರಾಧಿಕಾರವು ಆತನ ಸಾಕ್ಷಿ ಸಂರಕ್ಷಣೆಯನ್ನು ರದ್ದುಗೊಳಿಸಿದೆ. ಈ ಕ್ರಮದ ಬೆನ್ನಲ್ಲೇ, ಎಸ್‌ಐಟಿ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದೆ. ಆರಂಭದಲ್ಲಿ ಸಾಕ್ಷಿಯಾಗಿದ್ದ ವ್ಯಕ್ತಿ ಈಗ ಆರೋಪಿಯ ಸ್ಥಾನಕ್ಕೆ ಬಂದು ನಿಂತಿದ್ದು, ಇದು ತನಿಖೆಯ ದಿಕ್ಕಿನಲ್ಲಿ ಮಹತ್ವದ ತಿರುವನ್ನು ತಂದಿದೆ.
ಚಿನ್ನಯ್ಯ ಬಂಧನದ ವಿವರ:
ಚೆನ್ನ ಎಂಬಾತನಿಗೆ ಎಸ್‌ಐಟಿ 'ಗುನ್ನ ಇಟ್ಟಿದೆ' ಎಂದು ಹೇಳಲಾಗುತ್ತಿದ್ದು, ಇದು ಪ್ರಕರಣದಲ್ಲಿ ಎಸ್‌ಐಟಿ ತಂಡವು ಅಂತಿಮವಾಗಿ ಯಶಸ್ಸು ಗಳಿಸಿದೆ ಎಂಬುದನ್ನು ಸೂಚಿಸುತ್ತದೆ. ಸುಳ್ಳು ದೂರು ನೀಡಿ, ತನಿಖೆಯನ್ನು ದಾರಿತಪ್ಪಿಸಲು ಪ್ರಯತ್ನಿಸಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಹಲವು ಅಜ್ಞಾತ ಅಂಶಗಳನ್ನು ಬಯಲಿಗೆಳೆಯುವ ಸಾಧ್ಯತೆ ಇದೆ.
ಇದೇ ವೇಳೆ, ಮತ್ತೊಂದು ಬೆಳವಣಿಗೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಗಿರೀಶ್ ಮಟ್ಟಣ್ಣನವರ್ ಹಾಜರಾಗಿದ್ದಾರೆ. ತಿಮರೋಡಿ ಬಂಧನ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ, ನಿನ್ನೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧ, ಅವರು ವಿಚಾರಣೆಗೆ ಹಾಜರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಎರಡೂ ಪ್ರಕರಣಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳಾಗಿದ್ದು, ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ