ಧರ್ಮಸ್ಥಳ ಪ್ರಕರಣ: 40ಕ್ಕೂ ಹೆಚ್ಚು ಯೂಟ್ಯೂಬರ್‌ಗಳು, 500 ಟ್ರೋಲ್‌ ಪೇಜ್‌ಗಳ ಷಡ್ಯಂತ್ರ ಬಯಲು

Published : Sep 08, 2025, 08:18 AM IST
ಧರ್ಮಸ್ಥಳ ಪ್ರಕರಣ: 40ಕ್ಕೂ ಹೆಚ್ಚು ಯೂಟ್ಯೂಬರ್‌ಗಳು, 500 ಟ್ರೋಲ್‌ ಪೇಜ್‌ಗಳ ಷಡ್ಯಂತ್ರ ಬಯಲು

ಸಾರಾಂಶ

ಇವರೆಲ್ಲರಿಗೂ ಫಂಡಿಂಗ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಯೂಟ್ಯೂಬರ್ಸ್‌ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್‌ ನೀಡಿ, ವಿಚಾರಣೆ ನಡೆಸುತ್ತಿದೆ.

ವಿಶೇಷ ವರದಿ

ಮಂಗಳೂರು (ಸೆ.08): ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ಸುಮಾರು 40ಕ್ಕೂ ಅಧಿಕ ಯೂಟ್ಯೂಬರ್, 400-500 ಟ್ರೋಲ್ ಪೇಜರ್‌ಗಳು ಹಾಗೂ 60ಕ್ಕೂ ಅಧಿಕ ಕಂಟೆಂಟ್ ಕ್ರಿಯೇಟರ್‌ಗಳು ಕೆಲಸ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಇವರೆಲ್ಲರಿಗೂ ಫಂಡಿಂಗ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಯೂಟ್ಯೂಬರ್ಸ್‌ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್‌ ನೀಡಿ, ವಿಚಾರಣೆ ನಡೆಸುತ್ತಿದೆ. ಹೀಗಾಗಿ, ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಹಾಗೂ ದೇವಸ್ಥಾನದ ತೇಜೋವಧೆ ಹಿಂದೆ ಭಾರಿ ಷಡ್ಯಂತ್ರವಿದೆ ಎಂದು ಹೇಳಲಾಗುತ್ತಿದೆ. ಯೂಟ್ಯೂಬರ್‌ಗಳಿಗೆ ವಿದೇಶಿ ಫಂಡಿಂಗ್‌ ಗುಮಾನಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ವಿಧ್ವಂಸಕ ಸಂಚಿನ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತನಿಖೆಗೂ ಕೇಂದ್ರದ ಮೇಲೆ ಒತ್ತಡ ಹೇರಲಾಗಿದೆ.

ಸಮೀರ್‌ನಿಂದ ಆರಂಭಿಸಿ ಕೇರಳ‍ದ ಮನಾಫ್‌ವರೆಗೆ: ದೂತ ಯೂಟ್ಯೂಬ್‌ ಚಾನೆಲ್‌ನ ಸಮೀರ್‌ ಎಂ.ಡಿ., ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್‌ನ ಅಭಿಷೇಕ್‌, ಗೋಲ್ಡನ್ ಕನ್ನಡಿಗ ಚಾನೆಲ್ ಯೂಟ್ಯೂಬರ್ ಸುಮಂತ್, ಚಂದನ್‌ ಗೌಡ, ಮತ್ತಿತರರನ್ನು ಕರೆಸಿ ಎಸ್‌ಐಟಿ ತನಿಖೆ ನಡೆಸಿದೆ. ಕೇರಳ ಯೂಟ್ಯೂಬರ್‌ ಮನಾಫ್‌ಗೂ ನೋಟಿಸ್‌ ಜಾರಿಗೊಳಿಸಿದೆ. ಜುಲೈನಲ್ಲಿ 23 ನಿಮಿಷಗಳ ವಿಡಿಯೋವನ್ನು ತನ್ನ ದೂತ ಚಾನೆಲ್‌ನಲ್ಲಿ ಸಮೀರ್‌ ಅಪ್‌ಲೋಡ್ ಮಾಡಿದ್ದ. ಈ ವೀಡಿಯೊವನ್ನು ಎಐ (ಕೃತಕ ಬುದ್ಧಿಮತ್ತೆ) ಬಳಸಿ ರಚಿಸಲಾಗಿತ್ತು. ಇದು ತಮಿಳು, ಮಲಯಾಳಂ ಮಾಧ್ಯಮಗಳಲ್ಲಿ ಹಾಗೂ ಪಾಕಿಸ್ತಾನ ಸೇರಿ ವಿದೇಶಗಳಲ್ಲೂ ಧರ್ಮಸ್ಥಳ ಬಗ್ಗೆ ಕೆಟ್ಟ ಅಭಿಪ್ರಾಯ ಬಿಂಬಿಸಲು ಕಾರಣವಾಯಿತು.

ನಂತರ, ಯೂಟ್ಯೂಬರ್ ಸುಮಂತ್ ಗೌಡ, ಅವರ ಸ್ನೇಹಿತ ಅಭಿಷೇಕ್‌ ಕೂಡ ಯೂಟ್ಯೂಬ್‌ ಮಾಡಿ, ಕ್ಷೇತ್ರದ ವಿರುದ್ದ ಅಪಪ್ರಚಾರ ನಡೆಸಿದ್ದು ಪತ್ತೆಯಾಯಿತು. ಇವರು, ಇವರ ಜೊತೆ ಇನ್ನಿತರ ಹಲವು ಇನ್‌ಫ್ಲುಯೆನ್ಸರ್‌ಗಳು ಹಣ ಪಡೆದು ದೇವಸ್ಥಾನದ ವಿರುದ್ಧ ವಿಡಿಯೋಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿವಿಧ ಮೂಲಗಳಿಂದ ಹಣ, ಕಂಟೆಂಟ್, ವಸತಿ ಮತ್ತು ಆಹಾರ ನೀಡಿ ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲಾಗಿತ್ತು. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಷಡ್ಯಂತ್ರದ ಭಾಗ ಎಂದು ಆರೋಪಿಸಲಾಗಿತ್ತು. ಇವೆಲ್ಲ ಕಾರಣಕ್ಕೆ ಎಸ್‌ಐಟಿ ಈ ಯೂಟ್ಯೂಬರ್‌ಗಳಿಗೆ ನೋಟಿಸ್‌ ಜಾರಿಗೊಳಿಸಿ, ಕರೆಸಿ, ವಿಚಾರಣೆ ನಡೆಸಿತ್ತು. ಈಗಲೂ ಅಭಿಷೇಕ್‌ ಮತ್ತಿತರರ ವಿಚಾರಣೆ ಮುಂದುವರಿಯುತ್ತಿದೆ.

ಅವಹೇಳನಕ್ಕೆ 8000 ಚಾನೆಲ್‌ ಬಳಕೆ?: ಧರ್ಮಸ್ಥಳ ಕ್ಷೇತ್ರದಿಂದ ಇಂತಹ ಚಾನೆಲ್‌ಗಳ ಮೇಲೆ ಗ್ಯಾಗ್‌ (ಮಾತನಾಡಲು ತಡೆ) ಆರ್ಡರ್ ಕೋರಲಾಯಿತು. ಆದರೆ, ಸುಪ್ರೀಂಕೋರ್ಟ್ ಅವುಗಳನ್ನು ನಿರ್ಬಂಧಿಸಲು ನಿರಾಕರಿಸಿತು. ಕರ್ನಾಟಕ ಹೈಕೋರ್ಟ್ ಕೂಡ ಕೆಲವು ಗ್ಯಾಗ್ ಆರ್ಡರ್‌ಗಳನ್ನು ರದ್ದುಗೊಳಿಸಿತು. ಈ ದಿನಗಳಲ್ಲಿ ಸುಮಾರು 8,000 ಯೂಟ್ಯೂಬ್ ಚಾನಲ್‌ಗಳು ದೇವಸ್ಥಾನದ ವಿರುದ್ಧ ಅವಹೇಳನಕಾರಿ ಕಂಟೆಂಟ್ ಹರಡುತ್ತಿವೆ ಎಂದು ಆರೋಪಿಸಲಾಗಿದೆ. ಇವುಗಳನ್ನು ತೆಗೆದುಹಾಕುವಂತೆ ಕೋರ್ಟ್‌ ಮೊರೆ ಹೋದರೂ ಪ್ರಯೋಜನವಾಗಿಲ್ಲ.

ಧರ್ಮಸ್ಥಳದ ಪಾಂಗಳದಲ್ಲಿ ಮೂರು ಯೂಟ್ಯೂಬರ್‌ಗಳು (ಅಜಯ್ ಅಂಚನ್, ಅಭಿಷೇಕ್, ವಿಜಯ್) ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ರಿಪೋರ್ಟರ್ ಮೇಲೆ ದಾಳಿ ನಡೆಯಿತು. ಯೂಟ್ಯೂಬರ್‌ಗಳು 2013ರಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕೊಲೆಗೀಡಾದ ಮಹಿಳೆಯ ಕುಟುಂಬದೊಂದಿಗೆ ಸಂದರ್ಶನ ನಡೆಸುತ್ತಿದ್ದರು. ಎಸ್‌ಐಟಿ ತನಿಖೆಯ ಬಗ್ಗೆ ವರದಿ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ದಾಳಿಯಲ್ಲಿ ವಾಹನಗಳು ಮತ್ತು ಕ್ಯಾಮರಾಗಳು ಹಾನಿಗೊಳಗಾದವು. ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದ್ದರು. ಅಕ್ರಮ ಕೂಟಕ್ಕೆ ಸಂಬಂಧಿಸಿ ಕೇಸು ಕೂಡ ದಾಖಲಾಗಿತ್ತು. ಇದೇ ಯೂಟ್ಯೂಬರ್ಸ್‌ ವಿರುದ್ಧವೂ ಕೇಸು ದಾಖಲಾಗಿದ್ದು, ಎಸ್‌ಐಟಿ ಅವರ ತನಿಖೆಯನ್ನೂ ತಡೆಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್