
ಮಂಗಳೂರು: ಧರ್ಮಸ್ಥಳ ನೂರಾರು ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ವಿರುದ್ಧ ಎಐ (AI) ವಿಡಿಯೋ ವಿವಾದ ಈಗ ದೊಡ್ಡ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಸಮೀರ್ ವಿರುದ್ಧ ಇದೀಗ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇಂದು (ಆಗಸ್ಟ್ 16) ಸಮೀರ್ ಬಂಧನಕ್ಕೆ ಪೋಲೀಸರು ಮುಂದಾಗಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆನಂದ್ ಎನ್ ಅವರ ನೇತೃತ್ವದಲ್ಲಿ ವಿಶೇಷ ತಂಡ ಬೆಂಗಳೂರಿಗೆ ತೆರಳಿ, ಬನ್ನೇರುಘಟ್ಟದಲ್ಲಿರುವ ಸಮೀರ್ ಬಾಡಿಗೆ ಮನೆಯನ್ನು ಸುತ್ತುವರೆದಿದೆ. ಸಮೀರ್ ಬಂಧಿಸಿ ಧರ್ಮಸ್ಥಳಕ್ಕೆ ಕರೆತರಲಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ವಲಯದಲ್ಲಿ ಮಾಹಿತಿ ಲಭ್ಯವಾಗಿದೆ.
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಸಾಕ್ಷಿದಾರ ನೀಡಿದ ದೂರು ಮತ್ತು ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ ಮಾಹಿತಿಗಳನ್ನು ಬಿಟ್ಟು, ಸಮೀರ್ ಎಐ ತಂತ್ರಜ್ಞಾನವನ್ನು ಬಳಸಿ ಕಾಲ್ಪನಿಕ ವಿಡಿಯೋ ಸೃಷ್ಟಿಸಿದ ಆರೋಪ ಕೇಳಿಬಂದಿದೆ. ಆ ವಿಡಿಯೋದಲ್ಲಿ ಸಾಕ್ಷಿದಾರರ ಬಗ್ಗೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ, ಆದರೆ ತಪ್ಪು ಮಾಹಿತಿಗಳನ್ನು ಸೇರಿಸಿ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ವಿಡಿಯೋ ಮೂಲಕ ಉದ್ದೇಶಪೂರ್ವಕವಾಗಿ ಸಾರ್ವಜನಿಕರಲ್ಲಿ ಅಶಾಂತಿ ಉಂಟುಮಾಡುವ ಹಾಗೂ ಪ್ರಕರಣದ ಪ್ರಾಮಾಣಿಕತೆಯನ್ನು ಹಾಳುಮಾಡುವ ಪ್ರಯತ್ನ ನಡೆದಿದೆ ಎಂದು ಪೊಲೀಸರ ಆರೋಪ.
ಈ ಹಿನ್ನೆಲೆಯಲ್ಲಿ ಸಮೀರ್ ಎಂ.ಡಿ ವಿರುದ್ಧ ಬಿಎನ್‌ಎಸ್ 192, 240, 353(1)(b) ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಧರ್ಮಸ್ಥಳ ಪಿಎಸ್‌ಐ ಸಮರ್ಥ್ ನೀಡಿದ ದೂರಿನ ಆಧಾರದ ಮೇಲೆ ಜುಲೈ 12ರಂದು ಎಫ್‌ಐಆರ್ ದಾಖಲೆಯಾಗಿತ್ತು. ಆದರೆ, ಹಲವಾರು ಬಾರಿ ನೋಟಿಸ್ ನೀಡಿದರೂ ಸಮೀರ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡ ಕಾರಣದಿಂದ ಪೊಲೀಸರು ಇಂದು ಬಂಧನ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸಮೀರ್ ವಿರುದ್ಧ ಈಗಾಗಲೇ ಹಲವು ಆರೋಪಗಳು ಹೊರಬಿದ್ದಿದ್ದು, ಯೂಟ್ಯೂಬ್‌ನಲ್ಲಿ ಪ್ರಸಾರವಾದ ಆ ವಿಡಿಯೋ ಜನರಲ್ಲಿ ಆಕ್ರೋಶ ಹುಟ್ಟಿಸಿದೆ. ಕಾನೂನು ಪ್ರಕ್ರಿಯೆಗೆ ಧಕ್ಕೆ ಉಂಟುಮಾಡುವಂತಹ ವಿಡಿಯೋ ಪ್ರಕಟಿಸಿದ ಆರೋಪ ಗಂಭೀರವಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ