
ಮಂಡ್ಯ (ಆ.21): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ಮುಸುಕುಧಾರಿ ಅನಾಮಿಕನ ನಿಜಬದುಕು ಈಗ ಆತನ ಮೊದಲ ಪತ್ನಿಯಿಂದಲೇ ಬಯಲಾಗಿದೆ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆತನ ಮೊದಲ ಪತ್ನಿ, ಅನಾಮಿಕನ ಬಗ್ಗೆ ಹಲವು ಆಘಾತಕಾರಿ ಮಾಹಿತಿಗಳನ್ನು ಹೊರಹಾಕಿದ್ದು, ಆತ 'ಮೋಸಗಾರ, ಸುಳ್ಳುಗಾರ' ಎಂದು ಆರೋಪಿಸಿದ್ದಾರೆ.
ಸುಳ್ಳು ಹೇಳಿಯೇ ನನ್ನನ್ನು ಬಿಟ್ಟು ಹೋಗಿದ್ದ:
1999ರಲ್ಲಿ ನಮ್ಮಿಬ್ಬರ ಮದುವೆ ಆಗಿತ್ತು. ಏಳು ವರ್ಷ ನಾವು ಸಂಸಾರ ಮಾಡಿದ್ದೆವು. ನಮಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಆದರೆ, ಅವನ ಬಳಿ ಒಳ್ಳೆಯತನ ಇರಲೇ ಇಲ್ಲ. ಬರೀ ಸುಳ್ಳು ಹೇಳುತ್ತಿದ್ದ, ನನಗೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ' ಎಂದು ಮೊದಲ ಪತ್ನಿ ತಮ್ಮ ನೋವು ತೋಡಿಕೊಂಡಿದ್ದಾರೆ. ನನ್ನಿಂದ ವಿಚ್ಛೇದನ ಪಡೆಯುವಾಗ ಮಕ್ಕಳಿಗೆ ಜೀವನಾಂಶ ಕೊಡುವುದನ್ನು ತಪ್ಪಿಸಿಕೊಳ್ಳಲೆಂದೇ ಅನಾಮಿಕನು ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದ. 'ನಾನು ಜೀವನಕ್ಕಾಗಿ ಯಾವುದೇ ಕೆಲಸ ಮಾಡ್ತಿಲ್ಲ' ಎಂದು ಹೇಳಿದ್ದರಿಂದ ಕೋರ್ಟ್‌ನಲ್ಲಿ ತಮಗೆ ನ್ಯಾಯ ಸಿಗಲಿಲ್ಲ. ಇದರಿಂದಾಗಿ ಮಕ್ಕಳನ್ನು ತನ್ನ ತಾಯಿಯೇ ಸಾಕಿದರು ಎಂದು ಆಕೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಕಸ ಗುಡಿಸುತ್ತಿದ್ದ, ಅಷ್ಟೇ
ನಮ್ಮ ಮದುವೆಯಾದ ಬಳಿಕ ನಾನು ಆತನ ಜೊತೆ 7 ವರ್ಷ ಧರ್ಮಸ್ಥಳದ ನೇತ್ರಾವತಿ ಬಳಿ ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದೆ. ಅಲ್ಲಿ ಆತ ಕಸ ಗುಡಿಸುವುದು, ಶೌಚಾಲಯ ತೊಳೆಯುವುದು ಇಂತಹ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಈಗ ಅವನು ಹೇಳುತ್ತಿರುವುದು ಸಂಪೂರ್ಣ ಸುಳ್ಳು' ಎಂದು ಮೊದಲ ಪತ್ನಿ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಅತ್ಯಾ*ಚಾರ ಮತ್ತು ಕೊಲೆಯಾದ ಯುವತಿಯರು, ಮಹಿಳೆಯರ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದು ಅನಾಮಿಕ ಹೇಳಿರುವುದು ಸುಳ್ಳು. ಧರ್ಮಸ್ಥಳದಲ್ಲಿ ಈ ರೀತಿಯ ಘಟನೆಗಳ ಬಗ್ಗೆ ತನಗೆ ಎಂದಿಗೂ ಹೇಳಿರಲಿಲ್ಲ. ಹಣದ ಆಸೆಯಿಂದ ಆತ ಹೀಗೆ ಮಾಡಿರಬಹುದು ಎಂದು ಪತ್ನಿ ಅನುಮಾನ ವ್ಯಕ್ತಪಡಿಸಿದ್ದಾರೆ. 'ಧರ್ಮಸ್ಥಳವೆಂದರೆ ನಮ್ಮೆಲ್ಲರಿಗೂ ಪ್ರೀತಿ, ಆ ಸ್ಥಳಕ್ಕೆ ಅವನು ಅನ್ಯಾಯ ಮಾಡಬಾರದು. ಹೆಗ್ಗಡೆಯವರು ತುಂಬಾ ಒಳ್ಳೆಯವರು' ಎಂದು ಹೇಳಿದರು.
ಎರಡನೇ ಪತ್ನಿಯ ಒತ್ತಡದಿಂದ ಹೀಗೆ ಮಾಡುತ್ತಿದ್ದಾನೆ?
ಒಂದು ಕಡೆ ಗುಂಡಿ ತೋಡಿದರೂ ಏನು ಸಿಕ್ಕಿಲ್ಲ ಅಂದ್ರೆ, ಏನೋ ಕಿತಾಪತಿ ಮಾಡ್ತಿದ್ದಾನೆ ಎನಿಸುತ್ತದೆ" ಎಂದು ಮೊದಲ ಪತ್ನಿ ಹೇಳಿದ್ದಾರೆ. ಅಲ್ಲದೆ, ಎರಡನೇ ಹೆಂಡತಿ ಆತನನ್ನು 'ಮದುವೆಯಾದ ಮೇಲೆ ನಮಗೆ ಏನು ಮಾಡಿದ್ದೀಯಾ? ಎಂದು ಬೈಯುತ್ತಿದ್ದಳಂತೆ. ಆಕೆಯ ಒತ್ತಡ ಹಾಗೂ ಆಮಿಷಕ್ಕೆ ಒಳಗಾಗಿ ಅವನು ಈ ರೀತಿ ಮಾಡುತ್ತಿದ್ದಾನೆ ಎಂದು ಮೊದಲ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.
ಅಹಂಕಾರಿ ಸ್ವಭಾವದ ಅನಾಮಿಕ ತನ್ನ ಅಣ್ಣ-ತಮ್ಮಂದಿರಿಗೂ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದ. 'ನನ್ನನ್ನು ಬಿಟ್ಟು ಹೋಗಿ ಒಳ್ಳೆಯದಾಯಿತು. 2ನೇ ಹೆಂಡತಿಯನ್ನು ಮದುವೆಯಾಗಲು ನನಗೆ ಚಿತ್ರಹಿಂಸೆ ಕೊಟ್ಟು ಓಡಿಸಿದ' ಎಂದು ಆಕೆ ನೋವಿನಿಂದ ಹೇಳಿದ್ದಾರೆ. 'ಕೆಲಸ ಕೊಟ್ಟ, ಅನ್ನ ಕೊಟ್ಟ ಜಾಗಕ್ಕೆ ಅನ್ಯಾಯ ಮಾಡಬಾರದು. ದೇವಸ್ಥಾನದ ಹೆಸರು ಕೆಡಿಸುತ್ತಿರುವ ಅವನು ಹಾಳಾಗಬೇಕು. ಅವನು ಸತ್ತು ಹೆಣವಾದರೂ ನಾವು ಹೋಗಿ ನೋಡುವುದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾಮಿಕನ ಅಣ್ಣ ಮತ್ತು ಮನೆಯವರೆಲ್ಲ ಒಳ್ಳೆಯವರು. ಆತ ತನಗೆ ಹೊಡೆದಾಗಲೂ ಅವರು ತನ್ನ ಪರವಾಗಿ ನಿಂತಿದ್ದರು ಎಂದು ಮೊದಲ ಪತ್ನಿ ತಿಳಿಸಿದ್ದಾರೆ. ಟಿವಿಯಲ್ಲಿ ಅವನನ್ನು ನೋಡಿದ ತಕ್ಷಣವೇ ಅವನ ದೇಹದ ಆಕಾರ ಮತ್ತು ನೇತ್ರಾವತಿಯಲ್ಲಿ ಕೆಲಸ ಮಾಡಿದ್ದನ್ನು ಹೇಳಿದಾಗ ಆತ ತನ್ನ ಮಾಜಿ ಪತಿ ಎಂದು ಖಚಿತವಾಯಿತು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ