
ದಕ್ಷಿಣ ಕನ್ನಡ (ಆ.31): ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡುವುಕ್ಕಾಗಿ ಮಾನವ ಹಕ್ಕು ಆಯೋಗದ ಅಧಿಕಾರಿ ಹೆಸರಿನಲ್ಲಿ ಸುಳ್ಳು ಮತ್ತು ಅವಹೇಳನಕಾರಿ ಮಾಹಿತಿಯನ್ನು ಪ್ರಸಾರ ಮಾಡಿದ ಆರೋಪದಡಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಮದನ್ ಬುಗುಡಿ ಎಂಬುವವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ವಿವರ:
ಧರ್ಮಸ್ಥಳದ ಭಕ್ತರಾದ ಪ್ರವೀಣ್ ಕೆ.ಆರ್. ಎಂಬುವವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದೂರಿನ ಪ್ರಕಾರ, ಗಿರೀಶ್ ಮಟ್ಟಣ್ಣನವರ್ ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾಗ ಮದನ್ ಬುಗುಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಸುಳ್ಳಾಗಿ ಪರಿಚಯಿಸಿದ್ದಾರೆ. ಈ ಮೂವರು ಸೇರಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಮತ್ತು ಅಪಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಳ್ತಂಗಡಿ ಪೊಲೀಸರು ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್‌ಗಳಾದ 204, 319(2), ಮತ್ತು 353(2) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮದನ್ ಬುಗುಡಿ ಅವರನ್ನು ಮಾನವ ಹಕ್ಕು ಆಯೋಗದ ಅಧಿಕಾರಿಯೆಂದು ಸುಳ್ಳು ಪರಿಚಯಿಸಿದ್ದು, ಮಾಧ್ಯಮಗಳ ಮೂಲಕ ಧರ್ಮಸ್ಥಳದ ಘನತೆಗೆ ಧಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮಹೇಶ್ ಶೆಟ್ಟಿ ತಿಮರೋಡಿ ಅವರು ಸಹ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಮತ್ತು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಲಾಗಿದೆ.
ಈ ಪ್ರಕರಣದ ದಾಖಲಾತಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಮತ್ತು ವಿಚಾರಣೆ ಪ್ರಗತಿಯಲ್ಲಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾಗಿ ಹೇಳಿದ್ದ ಪ್ರಕರಣದಲ್ಲಿ ಸುಳ್ಳು ಹೇಳಿ ಪೊಲೀಸ್ ಠಾಣೆಗೆ ಬುರುಡೆಯನ್ನು ತೆಗೆದುಕೊಂಡು ಹೋಗಿದ್ದ ಅನಾಮಿಕನೇ ಇದೀಗ ಸಿಕ್ಕಿಬಿದ್ದಿದ್ದಾನೆ. ಈ ಬುರುಡೆ ಎಲ್ಲಿಂದ ಬಂತು ಎಂಬುದನ್ನು ಹೇಳಲಾಗದೇ ಪರದಾಡಿದ್ದು, ಇದೀಗ ಬೆಂಗಳೂರಿನಿಂದ ತಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ, ಬುರುಡೆಯನ್ನು ಬೆಂಗಳೂರಿನಿಂದ ಎಲ್ಲಿಂದ ತರಲಾಗಿದೆ ಎಂಬ ಮಾಹಿತಿ ಕಲೆಹಾಕಲು ಚಿನ್ನಯ್ಯನನ್ನು ಬೆಂಗಳೂರಿಗೆ ಕರೆತಂದಿದ್ದು, ಜಯಂತ್ ಮನೆಗೂ ಕರೆದೊಯ್ಯಲಾಗಿತ್ತು. ಈ ವೇಳೆ ಜಯಂತ್ ಕುರಿತಾಗಿ ಆತನ ಸ್ನೇಹಿತನ ಬಳಿಯೂ ವಿಚಾರಣೆ ಮಾಡಲಾಗಿದೆ.
ಧರ್ಮಸ್ಥಳ ಷಡ್ಯಂತ್ರ ಆರೋಪದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬೆಂಗಳೂರಿನ ಪೀಣ್ಯ ಮಿನಿ ಕಾಲೋನಿಯಲ್ಲಿರುವ ಜಯಂತ್ ಎಂಬಾತನ ನಿವಾಸದಲ್ಲಿ ಪೊಲೀಸರು ಮಹಜರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಚಿನ್ನಯ್ಯ, ಜಯಂತ್ ಬಳಿಯಿಂದ ಬುರುಡೆ ಪಡೆದುಕೊಂಡಿದ್ದಾನೆಂಬ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮಹಜರು ನಡೆಸಿದರು. ಮಹಜರು ಸಮಯದಲ್ಲಿ ಚಿನ್ನಯ್ಯ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು. ಆತನ ಚಲನೆ ಮತ್ತು ಹೇಳಿಕೆಗಳನ್ನೆಲ್ಲಾ ವಿಡಿಯೋ ಚಿತ್ರೀಕರಿಸಲಾಯಿತು. ಸಂಪೂರ್ಣ ಪ್ರಕ್ರಿಯೆಯನ್ನು ಸೋಕೋ (Scene of Crime Officers) ತಂಡ ಸೂಕ್ಷ್ಮವಾಗಿ ಪರಿಶೀಲಿಸಿ ದಾಖಲೆ ಮಾಡಿದೆ. ಈ ವೇಳೆ ಯಾವುದೇ ಅನಾಹುತ ಅಥವಾ ಅಶಾಂತಿ ಉಂಟಾಗದಂತೆ ಮಾಡಲು ಬಾಗಲಗುಂಟೆ ಪೊಲೀಸ್ ಠಾಣೆಯ ಸಿಬ್ಬಂದಿ ಭದ್ರತೆ ಒದಗಿಸಿದರು.
ಬೆಂಗಳೂರಲ್ಲಿ ನಡೆದಿತ್ತು ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಚಿನ್ನಯ್ಯನನ್ನು ಕರೆತಂದು ಪೀಣ್ಯದಲ್ಲಿ ಮಹಜರು!
ಚಿನ್ನಯ್ಯ ಮತ್ತು ಜಯಂತ್ ನಡುವಿನ ಸಂಪರ್ಕಗಳು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಚಿನ್ನಯ್ಯನನ್ನು ಮುಂದಿನ ಮಹಜರು ಪ್ರಕ್ರಿಯೆಗಾಗಿ ಹುಟ್ಟೂರಾದ ತಮಿಳುನಾಡು ಮತ್ತು ಮಂಡ್ಯ ಭಾಗಗಳಿಗೆ ಕರೆದುಕೊಂಡು ಹೋಗಲು ನಿರ್ಧಿರಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಕೊನೇ ಕ್ಷಣದಲ್ಲಿ ಅಲ್ಲಿನ ಎಲ್ಲ ಬೆಳವಣಿಗೆಗಳ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಚಿನ್ನಯ್ಯನನ್ನು ವಾಪಸ್ ಬೆಳ್ತಂಗಡಿಗೆ ಶಿಫ್ಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ