ಗಡಿ ತಾಲೂಕಿಗೆ ಆರೋಗ್ಯ ರಕ್ಷೆ: ಭಾಗ್ಯನಗರದಲ್ಲಿ ಸೆ.1ಕ್ಕೆ ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್ ಉದ್ಘಾಟನೆ

Published : Aug 31, 2025, 09:43 PM IST
sai swasthya wellness center

ಸಾರಾಂಶ

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈ ಆರೋಗ್ಯ ಕೇಂದ್ರವನ್ನು ನಿರ್ವಹಿಸಲಿದೆ. ಈ ಆರೋಗ್ಯ ಕೇಂದ್ರವು 'ಒಂದು ಜಗತ್ತು ಒಂದು ಕುಟುಂಬದ ಸಾಯಿ ಸ್ವಾಸ್ಥ್ಯ ಚಿಕಿತ್ಸಾಲಯ' ಸಮೂಹದ ಭಾಗವಾಗಲಿದೆ.

ಚಿಕ್ಕಬಳ್ಳಾಪುರ (ಆ.31): ಬಾಗೇಪಲ್ಲಿ (ಭಾಗ್ಯನಗರ) ಪಟ್ಟಣದಲ್ಲಿ ಸೋಮವಾರ (ಸೆ.1) ಶಾಹ್ ಹ್ಯಾಪಿನೆಸ್ ಅರ್ಜೆಂಟ್ ಕೇರ್ ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್ ಆರಂಭವಾಗಲಿದೆ. 'ಒಂದು ಜಗತ್ತು ಒಂದು ಕುಟುಂಬ' ಪ್ರತಿಷ್ಠಾನವು ಕ್ಯಾಲಿಫೋರ್ನಿಯಾ ಮೂಲದ ದತ್ತಿ ಸಂಸ್ಥೆ 'ಶಾಹ್ ಹ್ಯಾಪಿನೆಸ್ ಫೌಂಡೇಷನ್' ಹಾಗೂ ಸರ್ವಮಂಗಳ್ ಕುಟುಂಬ ದತ್ತಿಯ ಸಹಯೋಗದಲ್ಲಿ ಈ ಕೇಂದ್ರವನ್ನು ನಾಡಿಗೆ ಲೋಕಾರ್ಪಣೆ ಮಾಡುತ್ತಿದೆ.

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈ ಆರೋಗ್ಯ ಕೇಂದ್ರವನ್ನು ನಿರ್ವಹಿಸಲಿದೆ. ಈ ಆರೋಗ್ಯ ಕೇಂದ್ರವು 'ಒಂದು ಜಗತ್ತು ಒಂದು ಕುಟುಂಬದ ಸಾಯಿ ಸ್ವಾಸ್ಥ್ಯ ಚಿಕಿತ್ಸಾಲಯ' ಸಮೂಹದ ಭಾಗವಾಗಲಿದೆ. ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕೆನ್ನುವ ಗುರಿಯನ್ನು ಈ ಚಿಕಿತ್ಸಾಲಯವು ಹೊಂದಿದೆ.

ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್‍‌ನಲ್ಲಿ ಲಭ್ಯವಿರುವ ಸೌಲಭ್ಯಗಳು
* ದಿನ ನಿತ್ಯದ ಅನಾರೋಗ್ಯ ಸಮಸ್ಯೆಗಳಿಗೆ ತುರ್ತು ಸೇವೆಗಳು, ಪ್ರಥಮ ಚಿಕಿತ್ಸೆ ಹಾಗೂ ತುರ್ತು ಸಾಮಾನ್ಯ ವೈದ್ಯಕೀಯ ಸೇವೆಗಳು

* ಎಕ್ಸ್-ರೇ, ಪ್ರಯೋಗಾಲಯ ಹಾಗೂ ಆಪ್ಟೋಮೆಟ್ರಿ ಘಟಕಗಳು ಸೇರಿದಂತೆ ಡಯೋಗ್ನಸ್ಟಿಕ್ ಸೌಲಭ್ಯಗಳು

* ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಡಿಯಾಲಜಿ ಮತ್ತು ಕಾರ್ಡಿಯೋಥೊರಾಸಿಕ್ ಸರ್ಜಿ (ಸಿಟಿವಿಎಸ್), ಆರ್ಥೋಪೆಡಿಕ್ಸ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಜನರಲ್ ಸರ್ಜರಿ, ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ನೇತ್ರವಿಜ್ಞಾನ ಹಾಗೂ ಇಎನ್‌ಟಿ ಮುಂತಾದ ವಿಭಾಗಗಳ ತಜ್ಞರೊಂದಿಗೆ ವಿಶೇಷ ಸಮಾಲೋಚನೆ

* ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳೂ ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳ ನಿರ್ವಹಣೆ

* ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ತಜ್ಞರೊಂದಿಗೆ ಟೆಲಿ ಮೆಡಿಸಿನ್ ಸೇವೆಗಳ ಮೂಲಕ ವರ್ಚುವಲ್ ಸಮಾಲೋಚನೆ, ಅನುಪಾಲನಾ ಆರೈಕೆ ಮತ್ತು ಮೇಲ್ವಿಚಾರಣೆ

* ಅಗತ್ಯವಿರುವ ರೋಗಿಗಳಿಗೆ ಮುದ್ದೇನಹಳ್ಳಿಯ ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಕರೆದೊಯ್ಯಲು ಸುಗಮ ಸಾರಿಗೆ ಮತ್ತು ಸುಧಾರಿತ ಮಧ್ಯಂತರ ಚಿಕಿತ್ಸಾ ಸೌಲಭ್ಯ

ಲಭ್ಯವಿರುವ ವೈದ್ಯಕೀಯ ಸಿಬ್ಬಂದಿ
ಈ ಕೇಂದ್ರದಲ್ಲಿ ಪೂರ್ಣಾವಧಿ ವೈದ್ಯರು, ನರ್ಸ್ ಹಾಗೂ ಪ್ರಯೋಗಾಲಯ ತಂತ್ರಜ್ಞರು ಇರುತ್ತಾರೆ. ಪೂರ್ವನಿಗದಿಯಂತೆ ವಾರವಿಡೀ ರೊಟೇಷನ್ ಆಧಾರದಲ್ಲಿ ತಜ್ಞ ವೈದ್ಯರು ಭೇಟಿ ನೀಡುತ್ತಾರೆ. ಗ್ರಾಮೀಣ ಭಾರತದಲ್ಲಿ ಉಚಿತ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ವಿಸ್ತರಿಸುವ ಧ್ಯೇಯದೊಂದಿಗೆ ಈ ಮಹತ್ವದ ಹೆಜ್ಜೆ ಇರಿಸಲಾಗಿದೆ. ಈ ಉಪ್ರಕಮವು ಆಧುನಿಕ ವೈದ್ಯಕೀಯ ಪರಿಣತಿಯನ್ನು ಸಹಾನುಭೂತಿಯ ಸೇವೆಯೊಂದಿಗೆ ಸಂಯೋಜಿಸಲಿದೆ.

ಉದ್ಘಾಟನಾ ಸಮಾರಂಭ
ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಭಾಗವಹಿಸಲಿದ್ದಾರೆ. ಮನು ಭಾವಿ ಶಾ, ಡಾ ನಿತಿನ್ ಭಾಯಿ ಶಾ, ಎಂಎಎಸ್ಐ ಭಾರತದ ತಂಡದ ಸದಸ್ಯರು ಉಪಸ್ಥಿತರಿರುತ್ತಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ತಂಡವು ತಂಡ ವರ್ಚುವಲ್ ಆಗಿ ಭಾಗವಹಿಸುತ್ತದೆ. ಕಾರ್ಯಕ್ರಮವು ಸೆ 1 ರಂದು ಬೆಳಗ್ಗೆ 6 ಗಂಟೆಗೆ ಸಾಂಪ್ರದಾಯಿಕ ಪೂಜೆಯೂಂದಿಗೆ ಪ್ರಾರಂಭವಾಗುತ್ತದೆ. ನಂತರ ಸದ್ಗುರುಗಳ ಆಶೀರ್ವಚನ, ನಾಮಫಲಕ ಅನಾವರಣ ಹಾಗೂ ಕೇಂದ್ರದಲ್ಲಿರುವ ಸೌಲಭ್ಯಗಳು ಲೋಕಾರ್ಪಣೆಯಾಗಲಿವೆ.

ಸ್ಥಳ: ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಲಯ, ಡಿವಿಜಿ ರಸ್ತೆ, ಭಾಗ್ಯನಗರ (ಬಾಗೇಪಲ್ಲಿ), ಮಾಹಿತಿಗೆ 92402 62091, www.saiswasthya.org

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ: ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌