ದಿಲ್ಲಿಗೂ ಬುರುಡೆ ಒಯ್ದಿದ್ದ ಚಿನ್ನಯ್ಯ!

Kannadaprabha News   | Kannada Prabha
Published : Aug 31, 2025, 05:47 AM IST
Dharmasthala Mask Man Chinnayya

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳನ್ನು ಹೂಳಿದ್ದೇನೆ ಎಂದು ಭೀಮಾ ಎನ್ನುವ ವ್ಯಕ್ತಿ ಹೇಳಿದ್ದರು. ಅವರಿಗೆ ನಾನು ಆಶ್ರಯ ನೀಡಿದ್ದು ನಿಜ ಎಂದು ಸೌಜನ್ಯ ಪರ ಹೋರಾಟಗಾರ ಬೆಳ್ತಂಗಡಿಯ ಜಯಂತ್‌ ಹೇಳಿಕೆ ನೀಡಿದ್ದಾರೆ.

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳನ್ನು ಹೂಳಿದ್ದೇನೆ ಎಂದು ಭೀಮಾ ಎನ್ನುವ ವ್ಯಕ್ತಿ ಹೇಳಿದ್ದರು. ಅವರಿಗೆ ನಾನು ಆಶ್ರಯ ನೀಡಿದ್ದು ನಿಜ ಎಂದು ಸೌಜನ್ಯ ಪರ ಹೋರಾಟಗಾರ ಬೆಳ್ತಂಗಡಿಯ ಜಯಂತ್‌ ಹೇಳಿಕೆ ನೀಡಿದ್ದಾರೆ.

ತಮ್ಮ ಬೆಂಗಳೂರಿನ ಮನೆಯನ್ನು ಎಸ್‌ಐಟಿ ಜಾಲಾಡುತ್ತಿರುವ ಬೆನ್ನಲ್ಲೇ ಬೆಳ್ತಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜಯಂತ್‌, ಶವ ಹೂತು ಹಾಕಿರುವುದಾಗಿ ಹೇಳಿರುವ ಭೀಮ (ಚಿನ್ನಯ್ಯ)ನಿಗೆ ನಾನು ಆಶ್ರಯ ನೀಡಿದ್ದೆ. ಆತ ತಂದಿದ್ದ ಮೆಟಿರಿಯಲ್ (ತಲೆ ಬುರುಡೆ)ಯನ್ನು ಕಾರಿನಲ್ಲಿ ನಾನು ದೆಹಲಿಗೂ ತೆಗೆದುಕೊಂಡು ಹೋಗಿದ್ದೆ. ಅಲ್ಲಿ ವಕೀಲರನ್ನು ಭೇಟಿಯಾಗಿ ಬಂದಿದ್ದೆ ಎಂದು ತಿಳಿಸಿದ್ದಾರೆ.

ಸುಮಾರು ಐದು ತಿಂಗಳ ಹಿಂದೆ ಏಪ್ರಿಲ್‌ನಲ್ಲಿ ಭೀಮನ ಮೊದಲ‌ ಪರಿಚಯ ಆಗಿತ್ತು. ಆಗ ಅವನನ್ನು ವಕೀಲರ ಬಳಿ ಕರೆದುಕೊಂಡು ಹೋಗಿದ್ದೆ. ಅವತ್ತು ರಾತ್ರಿ ಬೆಂಗಳೂರಿನ ನನ್ನ ಮನೆಯಲ್ಲಿ ಎರಡು ದಿನ ಉಳಿದುಕೊಳ್ಳಲು ಅವಕಾಶ ನೀಡಿದ್ದೆ. ಆಗ ಸುಪ್ರೀಂ ಕೋರ್ಟ್‌ಗೆ ದಾಖಲೆ ಸಲ್ಲಿಸಲು ಆತ ವಕೀಲರ ಬಳಿ ಬಂದು ಹೋಗುತ್ತಿದ್ದ. ಮೊದಲನೇ ಸಲ‌ ಬಂದಾಗ ಎರಡು ದಿನ ಇದ್ದು ಹೋಗಿದ್ದ ಎಂದಿದ್ದಾರೆ.

ಮತ್ತೊಮ್ಮೆ ಬರೋವಾಗ ಸುಪ್ರೀಂ ಕೋರ್ಟ್‌ಗೆ ಹೋಗುವ ಕಾರಣ ಬ್ಯಾಗ್ ಹಿಡಿದುಕೊಂಡು ಬಂದಿದ್ದ. ಆ ಬ್ಯಾಗ್‌ನಲ್ಲಿ ಒಂದು ಮೆಟಿರಿಯಲ್ ಇತ್ತು. ಆ ಮೆಟಿರಿಯಲ್ ಅನ್ನು ನಾನು ಕಾರಿನಲ್ಲಿ ಬೆಂಗಳೂರಿನಿಂದ ದೆಹಲಿಗೆ ಸಾಗಿಸಿ, ದೆಹಲಿಯಿಂದ ಮಂಗಳೂರಿಗೆ ತಂದಿದ್ದೆ. ಮಂಗಳೂರಿನಲ್ಲಿ ಪ್ರಕರಣ ದಾಖಲಿಸಲು, ಎಸ್ಪಿಗೆ ತೋರಿಸಲು ತಂದಿದ್ದೆ. ಈ ಪ್ರಕರಣದಲ್ಲಿ ನನ್ನ ಮನೆಯಲ್ಲಿ ಎರಡು ದಿನ ಉಳಿದಿರೋದಕ್ಕೆ ಹಾಗೂ ಮೆಟಿರಿಯಲ್ ಸಾಗಿಸಿದ್ದಕ್ಕೆ ತನಿಖೆಯಾಗುತ್ತಿದೆ ಎಂದರು.

ಎಸ್ಐಟಿ ತನಿಖೆಯನ್ನು ನಾನು ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ. ಇದು ದೇವಸ್ಥಾನದ ವಿರುದ್ಧ ಅಪಪ್ರಚಾರ ಮತ್ತು ತೇಜೋವಧೆ ಮಾಡಲು ಅಲ್ಲ. ಇದು ಅತ್ಯಾಚಾರಿಗಳ ವಿರುದ್ಧ ನನ್ನ ಹೋರಾಟ. ಸತ್ಯವಿದೆ, ಸತ್ಯದ ಮೇಲೆ‌ ಒಂದು ಬಂಡೆಕಲ್ಲು ಇದೆ. ಅದರ ಮೇಲೆ‌ ನಿಂತು ಯಾರೂ ತುಳಿಯಬೇಡಿ, ಎಲ್ಲರೂ ಸೇರಿ ಆ ಸತ್ಯವನ್ನು ಹೊರಗೆ ತರುವ ಕೆಲಸ ಮಾಡುವ ಎಂದರು.

ಎಸ್ಐಟಿ ದಾಳಿ ವೇಳೆ ನಾನು ಓಡಿ ಹೋಗಿಲ್ಲ, ನಾನು ಬೆಳ್ತಂಗಡಿಯಲ್ಲೇ ಇದ್ದೇನೆ. ಎಸ್ಐಟಿ ಕರೆದರೆ ತನಿಖೆಗೆ ಹಾಜರಾಗುತ್ತೇನೆ. ಎಸ್ಐಟಿಯವರು ಯಾವುದೇ ಮಾಹಿತಿ ನೀಡದೆ ಬೆಂಗಳೂರಿನ ನನ್ನ ಮನೆಗೆ ಹೋಗಿದ್ದಾರೆ ಎಂದು ಜಯಂತ್ ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌