ಧರ್ಮಸ್ಥಳ ಬುರುಡೆ ಪತ್ತೆ ಸ್ಥಳದ ಮಣ್ಣನ್ನು ಲ್ಯಾಬ್‌ಗೆ ಕಳುಹಿಸಿದ ಎಸ್‌ಐಟಿ: ಚಿನ್ನಯ್ಯ ಕಣ್ಣೀರು!

Published : Sep 08, 2025, 09:18 AM IST
ಧರ್ಮಸ್ಥಳ ಬುರುಡೆ ಪತ್ತೆ ಸ್ಥಳದ ಮಣ್ಣನ್ನು ಲ್ಯಾಬ್‌ಗೆ ಕಳುಹಿಸಿದ ಎಸ್‌ಐಟಿ: ಚಿನ್ನಯ್ಯ ಕಣ್ಣೀರು!

ಸಾರಾಂಶ

ಧರ್ಮಸ್ಥಳ ಗ್ರಾಮದ ಬುರುಡೆ ಕೇಸಿನಲ್ಲಿ ಆರೋಪಿ ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟ ಸೌಜನ್ಯಳ ಮಾವ ವಿಠಲ ಗೌಡನ ಸ್ಥಳ ಮಹಜರು ನಡೆಸಿದ ಸ್ಥಳದ ಮಣ್ಣನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎಸ್‌ಐಟಿ ತಂಡ ಕಳುಹಿಸಿದೆ.

ಮಂಗಳೂರು (ಸೆ.08): ಧರ್ಮಸ್ಥಳ ಗ್ರಾಮದ ಬುರುಡೆ ಕೇಸಿನಲ್ಲಿ ಆರೋಪಿ ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟ ಸೌಜನ್ಯಳ ಮಾವ ವಿಠಲ ಗೌಡನ ಸ್ಥಳ ಮಹಜರು ನಡೆಸಿದ ಸ್ಥಳದ ಮಣ್ಣನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎಸ್‌ಐಟಿ ತಂಡ ಕಳುಹಿಸಿದೆ. ಈ ಸ್ಥಳದಲ್ಲಿ ಮತ್ತೆ ಎಲುಬಿನ ಅವಶೇಷ ಪತ್ತೆಯಾಗಿದೆ ಎಂದು ಹೇಳಲಾಗಿದ್ದರೂ ಎಸ್‌ಐಟಿ ಅದನ್ನು ದೃಢಪಡಿಸಿಲ್ಲ. ಬುರುಡೆ ಪ್ರಕರಣ ವೇಳೆ ಯುಟ್ಯೂಬ್‌ನಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮಿಥ್ಯಾರೋಪ ಮಾಡಿದ ಕೇರಳದ ಲಾರಿ ಮಾಲೀಕ ಮನಾಫ್‌ಗೆ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ ಜಾರಿ ಮಾಡಿದೆ. ಇದೇ ರೀತಿ ಬುರುಡೆ ಗ್ಯಾಂಗ್‌ ಜೊತೆ ಸಂಪರ್ಕದಲ್ಲಿ ಆರೋಪಕ್ಕೆ ಒಳಗಾಗಿರುವ ಕೇರಳ ಸಿಪಿಎಂ ಸಂಸದ ಸಂತೋಷ್‌ ಕುಮಾರ್‌ಗೂ ವಿಚಾರಣೆ ಹಾಜರಾಗಲು ನೋಟಿಸ್‌ ನೀಡಲು ಎಸ್ಐಟಿ ಚಿಂತಿಸಿದೆ. ಭಾನುವಾರ ರಜಾ ದಿನವಾದ್ದರಿಂದ ಎಸ್‌ಐಟಿ ಯಾರನ್ನೂ ವಿಚಾರಣೆ ನಡೆಸಿಲ್ಲ. ಸೋಮವಾರ ಇವರೆಲ್ಲರೂ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ತಡರಾತ್ರಿ ವರೆಗೂ ವಿಚಾರಣೆ: ಬುರುಡೆ ಕೇಸ್‌ನಲ್ಲಿ ಸೌಜನ್ಯ ಪರ ಹೋರಾಟಗಾರ ಜಯಂತ್‌, ಗಿರೀಶ್‌ ಮಟ್ಟೆಣ್ಣವರ್‌, ಯೂಟ್ಯೂಬರ್‌ ಅಭಿಷೇಕ್‌ನ್ನು ಶನಿವಾರ ತಡರಾತ್ರಿ ವರೆಗೂ ಎಸ್‌ಐಟಿ ವಿಚಾರಣೆ ನಡೆಸಿದೆ. ಅಲ್ಲದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ ನೀಡಿದೆ. ಆದರೆ ಭಾನುವಾರ ಯಾವುದೇ ವಿಚಾರಣೆ ನಡೆದಿಲ್ಲ. ಶನಿವಾರ ರಾತ್ರಿ ವಿಠಲ ಗೌಡ ಮತ್ತು ಆತನೊಂದಿಗೆ ಇದ್ದ ಪ್ರದೀಪ್‌ ಗೌಡನನ್ನೂ ಎಸ್ಐಟಿ ವಿಚಾರಣೆ ನಡೆಸಿ, ಸ್ಥಳ ಮಹಜರಿಗೂ ಕರೆದುಕೊಂಡು ಬಂದಿದ್ದು, ತಲೆಬುರುಡೆಗೆ ಸಂಬಂಧಿಸಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ.

ಇಂದು ವಿಠಲ ಗೌಡ ಬಂಧನ ಸಾಧ್ಯತೆ?: ತನಿಖೆಗೆ ಹೊಸ ತಿರುವು ನೀಡಿದ ತಲೆಬುರುಡೆ ರಹಸ್ಯ ಪ್ರಕರಣದಲ್ಲಿ ತಾನೇ ಬಂಗ್ಲೆಗುಡ್ಡ ಕಾಡಿನಿಂದ ನಾನೇ ತಲೆಬುರುಡೆ ತಂದುಕೊಟ್ಟಿರುವುದನ್ನು ಸೌಜನ್ಯ ಮಾವ ವಿಠಲ ಗೌಡ ಎಸ್‌ಐಟಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಈಗ ವಿಠಲ ಗೌಡ ಕರೆದುಕೊಂಡು ಸ್ಥಳ ಮಹಜರು ನಡೆಸಿದ್ದು, ತಲೆಬುರುಡೆ ತಂದ ರಹಸ್ಯ ಬಯಲಾದ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ವಿಠಲ ಗೌಡನನ್ನು ಎಸ್‌ಐಟಿ ಬಂಧಿಸುವ ಸಾಧ್ಯತೆ ಇದೆ. ಬುರುಡೆ ಗ್ಯಾಂಗ್‌ಗೆ ಆರೋಪಿ ಚಿನ್ನಯ್ಯನ ಪರಿಚಯಿಸಿದ್ದೇ ಸೌಜನ್ಯ ಮಾವ ವಿಠಲ ಗೌಡ. ಈ ಮೂಲಕ ಚಿನ್ನಯ್ಯನ ಪರಿಚಯಿಸಿ ಬಂಗ್ಲೆಗುಡ್ಡೆ ಕಾಡಿನಿಂದ ವಿಠಲ ಗೌಡ ಬುರುಡೆ ಕೂಡ ತಂದುಕೊಟ್ಟಿದ್ದರು.

ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಸ್ಥಿಪಂಜರ ಅವಶೇಷದ ಬುರುಡೆ ಅದಾಗಿತ್ತು. ಹೀಗಾಗಿ ಬುರುಡೆ ಗ್ಯಾಂಗ್‌ಗೂ ಮೊದಲೇ ವಿಠಲ ಗೌಡನಿಗೆ ಚಿನ್ನಯ್ಯ ಪರಿಚಿತನಾಗಿದ್ದ. ನೇತ್ರಾವತಿ ನದಿ ಪರಿಸರದಲ್ಲಿ ಅನಾಥ ಶವ ಹಾಗೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳ ಶವಗಳನ್ನು ಚಿನ್ನಯ್ಯ ಹೂಳುತ್ತಿದ್ದ ಮಾಹಿತಿ ವಿಠಲ ಗೌಡಗೆ ತಿಳಿದಿತ್ತು. ಅದರಂತೆ ಗಿರೀಶ್ ಮಟ್ಟಣ್ಣನವರ್ ರೂಪಿಸಿದ ಪ್ಲಾನ್‌ಗೆ ಚಿನ್ನಯ್ಯ ಪಾತ್ರಧಾರಿ ಆಗಿದ್ದ. ಈ ಪ್ಲಾನ್‌ನ್ನು ಕಾರ್ಯಗತಗೊಳಿಸಲು ಬುರುಡೆ ತಂಡ 2014ರಲ್ಲಿ ಧರ್ಮಸ್ಥಳ ಬಿಟ್ಟಿದ್ದ ಚಿನ್ನಯ್ಯನಿಗಾಗಿ ಹುಡುಕಾಟ ನಡೆಸಿತ್ತು. ವಿಠಲ ಗೌಡ ನೀಡಿದ ಮಾಹಿತಿಯಂತೆ ಚಿನ್ನಯ್ಯನ ಹುಡುಕಾಟ ನಡೆಸಿದಾಗ ಕೊನೆಗೆ ಚಿನ್ನಯ್ಯ ಸಿಕ್ಕಿದ್ದ.

ಉಜಿರೆ ಹೊಟೇಲ್‌ನಲ್ಲಿ ಪ್ಲಾನ್‌?: ಉಜಿರೆಯ ಹಳ್ಳಿ ಮನೆ ಹೊಟೇಲ್‌ನಲ್ಲಿ ಗಿರೀಶ್ ಮಟ್ಟಣ್ಣೆವರ್‌, ಚಿನ್ನಯ್ಯ ಹಾಗೂ ವಿಠಲ ಗೌಡ ಸಭೆ ನಡೆಸಿದ್ದರು. ಅಲ್ಲೇ ಕೆಲವು ಪ್ಲಾನ್ ರೂಪಿಸಿ ಬುರುಡೆ ಗ್ಯಾಂಗ್‌ ಬುರುಡೆ ಕಥೆ ಹೆಣೆದಿತ್ತು. ಆ ಬಳಿಕದ ಕಥೆಯಲ್ಲಿ ವಿಠಲ ಗೌಡ ಕಾಣಿಸಿಕೊಳ್ಳದೆ ಮರೆಯಾಗಿದ್ದ. ಆದರೂ ಮಟ್ಟಣ್ಣೆವರ್, ಜಯಂತ್ ಇವರು ಚಿನ್ನಯ್ಯ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಿದ್ದರು. ಈ ಎಲ್ಲ ವಿಚಾರಗಳನ್ನು ಎಸ್ಐಟಿ ವಿಚಾರಣೆ ವೇಳೆ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಬುರುಡೆ ತಂದುಕೊಟ್ಟ ಬಳಿಕ ಕಥೆಯಿಂದ ಹೊರಗಿದ್ದಂತೆ ನಟಿಸಿದ್ದ ವಿಠಲ ಗೌಡನನ್ನೂ ಅಧಿಕಾರಿಗಳು ಪ್ರಶ್ನಿಸಿದಾಗ ಬುರುಡೆ ರಹಸ್ಯ ಬಯಲಿಗೆ ಬಂದಿತ್ತು.

ಸಂದರ್ಶನದಲ್ಲಿ ಒಪ್ಪಿದ್ದ: ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರಗಳಿರುವ ರಹಸ್ಯ ವಿಠಲ ಗೌಡನಿಗೆ ಮೊದಲೇ ಗೊತ್ತಿತ್ತು. ಧರ್ಮಸ್ಥಳ ನೇತ್ರಾವತಿ ಕಾಡಿನಲ್ಲಿ ಬುರುಡೆಗಳಿವೆ ಎನ್ನುವುದನ್ನು ವಿಠಲ ಗೌಡ ಮೊದಲೇ ಹೇಳಿದ್ದ. ಆ ತಲೆ ಬುರುಡೆಗಳನ್ನು ನಾನೇ ನೋಡಿದ್ದಾಗಿ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ವಿಠಲ ಗೌಡ ಒಪ್ಪಿಕೊಂಡಿದ್ದ. ಅಲ್ಲದೆ ಬಂಗ್ಲೆಗುಡ್ಡೆ, ನೇತ್ರಾವತಿ ಭಾಗದ ಕಾಡಿನಲ್ಲಿ ಬುರುಡೆ ಎಲುಬುಗಳು ಇದೆ ಎಂದಿದ್ದ ವಿಠಲ ಗೌಡ. ಬಹಳ ಹಿಂದಿನ ಎಲುಬುಗಳು ಈ ಕಾಡಿನಲ್ಲಿ ಸಿಗುತ್ತದೆ ಎಂದೂ ಹೇಳಿದ್ದ.

ನೇತ್ರಾವತಿ ಸ್ನಾನಘಟ್ಟದ ಬಳಿ ಹೊಟೇಲ್ ಇದ್ದಾಗ ವಿಠಲ ಗೌಡ ಕಾಡಿನಲ್ಲಿ ಸುತ್ತಾಡಿದ್ದ. ಈ ಭಾಗದ ಕಾಡಿನಲ್ಲಿ ಬುರುಡೆ, ಅಸ್ಥಿಪಂಜರ ಇರುವುದನ್ನು ವಿಠಲ ಗೌಡ ಗಮನಿಸಿದ್ದ. ಆತ್ಮಹತ್ಯೆ ಮಾಡಿಕೊಂಡವರ ಅಸ್ಥಿಪಂಜರಗಳು ಕಾಡಿನಲ್ಲಿ ಇತ್ತು. ಯಾರೂ ಆ ಜಾಗಗಳಿಗೆ ಹೋಗದ ಕಾರಣ ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಆದರೆ ವಿಠಲ ಗೌಡನಿಗೆ ಬಂಗ್ಲೆಗುಡ್ಡೆ ಕಾಡಿನ ಅಸ್ಥಿಪಂಜರ ರಹಸ್ಯ ಗೊತ್ತಿತ್ತು. ಹೀಗಾಗಿಯೇ ಬುರುಡೆ ಗ್ಯಾಂಗ್‌ಗೆ ಬಂಗ್ಲೆಗುಡ್ಡೆಯಿಂದ ಬುರುಡೆ ತಂದುಕೊಟ್ಟಿದ್ದ ವಿಠಲ. ಆ ವೇಳೆ ಬುರುಡೆ ತೆಗೆಯುವುದರ ವೀಡಿಯೋ ಕೂಡ ಮಾಡಿದ್ದರು. ಮಟ್ಟಣ್ಣೆವರ್ ಹೇಳಿಕೆ ಆಧಾರದಲ್ಲೇ ವಿಠಲ ಗೌಡನ ವಿಚಾರಣೆ ನಡೆಸಲಾಗಿದೆ. ಆಗ ಬುರುಡೆ ತಂದುಕೊಟ್ಟ ವಿಠಲ ಗೌಡನ ಬಗ್ಗೆ ಮಟ್ಟಣ್ಣೆವರ್ ಬಾಯಿಬಿಟ್ಟಿದ್ದರು.

ಬುರುಡೆ ತರಲು ಸಾಥ್‌ ಯಾರು?: ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತರಲು ವಿಠಲ ಗೌಡನಿಗೆ ಸಹಕರಿಸಿದ್ದು ಯಾರು? ಬುರುಡೆ ಕಥೆಯಲ್ಲಿ ವಿಠಲ ಗೌಡನ ಜೊತೆಗಿದ್ದವನ ತೀವ್ರ ವಿಚಾರಣೆ ನಡೆಸಲಾಗಿದೆ. ಬಂಗ್ಲೆಗುಡ್ಡೆ ವಿಠಲ ಗೌಡನ ಜೊತೆ ತೆರಳಿದ್ದ ಪ್ರದೀಪ್ ಗೌಡನ ತೀವ್ರ ವಿಚಾರಣೆ ನಡೆಸಲಾಗಿದೆ. ವಿಠಲನ ಜೊತೆ ಪ್ರದೀಪ್ ಗೌಡ ಕಾಡಿಗೆ ಹೋಗಿರುವ ಮಾಹಿತಿಯನ್ನು ಎಸ್‌ಐಟಿ ಪಡೆದಿದೆ. ಕತ್ತಿ ಹಾಗೂ ಗೋಣಿಚೀಲ ಹಿಡಿದುಕೊಂಡು ಪ್ರದೀಪ್‌ ಕೂಡ ಕಾಡಿಗೆ ಹೋಗಿದ್ದ. ಬಂಗ್ಲೆಗುಡ್ಡೆಯಲ್ಲಿ ಬುರುಡೆ ಇರುವುದನ್ನು ಇಬ್ಬರೂ ರಾತ್ರಿ ವೇಳೆ ಅಲ್ಲಿಗೆ ತೆರಳಿ ಖಾತರಿ ಪಡಿಸಿಕೊಂಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಜೈಲಿನಲ್ಲಿ ಕಣ್ಣೀರು ಹಾಕಿದ ಚಿನ್ನಯ್ಯ: ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ಬುರುಡೆ ಕೇಸಿನ ಆರೋಪಿ ಚಿನ್ನಯ್ಯನ ಜಾಮೀನಿಗೆ ಸರ್ಕಾರ ನೀಡಿದ ವಕೀಲರು ಅರ್ಜಿ ಸಲ್ಲಿಸಿದ್ದು, ಇದು ಸೆ.9 ರಂದು ವಿಚಾರಣೆಗೆ ಬರಲಿದೆ. ಶಿವಮೊಗ್ಗ ಜೈಲಿಗೆ ತೆರಳುವಾಗ ಚಿನ್ನಯ್ಯ ಕಣ್ಣೀರು ಹಾಕಿದ್ದು, ತಾನು ತಪ್ಪಿನಲ್ಲಿ ಸಿಲುಕಿಕೊಂಡ ಬಗ್ಗೆ ಪಶ್ಚತ್ತಾಪ ಪಟ್ಟಿದ್ದಾನೆ ಎನ್ನಲಾಗಿದೆ. ಅಲ್ಲಿ ಕಾವೇರಿ ಸೆಲ್‌ನಲ್ಲಿ ವಿಚಾರಣಾಧೀನ ಕೈದಿಯಾಗಿ ಈತನಿಗೆ 1104/ 25 ಸಂಖ್ಯೆ ನೀಡಲಾಗಿದೆ.

ಮನಾಫ್‌ ಕಂಗಾಲು!: ಬುರುಡೆ ಪ್ರಕರಣದಲ್ಲಿ ಒಂದೊಂದೇ ವಿಚಾರ ಬಹಿರಂಗವಾಗುತ್ತಿರುವುದರಿಂದ ವಿಚಾರಣೆಗೆ ಬುಲಾವ್‌ ಪಡೆದಿರುವ ಕೇರಳದ ಯೂಟ್ಯೂಬರ್ ಮನಾಫ್‌ ಕಂಗಾಲಾಗಿದ್ದಾರೆ ಎನ್ನಲಾಗಿದೆ. ಸುಜಾತ ಭಟ್ ಪ್ರಕರಣ ಮುಳುವಾಗುತ್ತಿದ್ದಂತೆ ಮನಾಫ್‌ ರಾಗ ಬದಲಿಸಿದ್ದ. ಕೇರಳದಲ್ಲಿ ನನ್ನ ಮರ್ಯಾದೆ ಹೋಯಿತು ಎಂದು ಗೋಳಿಟ್ಟ ಮನಾಫ್ ಆಡಿಯೋ ವೈರಲ್‌ ಆಗಿತ್ತು. ಸುಜಾತಾ ಭಟ್ ಪ್ರಕರಣ ಕುರಿತು ಆಡಿಯೋದಲ್ಲಿ ಮನಾಫ್‌ ಮಾತನಾಡಿದ್ದ. ಮನಾಫ್ ಆಡಿಯೋದಿಂದ ಕೇರಳ ಲಿಂಕ್ ಬಯಲಾಗಿತ್ತು.

ನಾನೊಬ್ಬನೇ ಕೇರಳದಲ್ಲಿ ಈ ಹೋರಾಟದಲ್ಲಿ ನಿಂತಿದ್ದೇನೆ. ಈ ವಿಚಾರದಲ್ಲಿ ನನಗೆ ತುಂಬಾ ಜನರು ಅವಮಾನ ಮಾಡಿದ್ದಾರೆ. ಬುರುಡೆ ಗ್ಯಾಂಗ್‌ನವರು ವಿಚಾರಣೆಯಲ್ಲಿ ಎಲ್ಲವನ್ನು ನನ್ನ ಬಗ್ಗೆ ಹೇಳಿದ್ದಾರೆ. ನಾನು ಸ್ವಂತ ಅಮ್ಮ ಎಂದು ಭಾವಿಸಿ ಸುಜಾತ ಭಟ್ ಜೊತೆ ನಿಂತಿದ್ದೆ. ಇಂಥವರನ್ನು ನಂಬಬಾರದು. ಅವರಿಂದ ನಮಗೆ ತುಂಬಾ ತೊಂದರೆ ಆಗಿದೆ. ನಾನು ತುಂಬಾ ಬೇಜಾರಿನಿಂದ ಈ ಮಾತು ಹೇಳುತ್ತಿದ್ದೇನೆ. ಕೇರಳದಲ್ಲಿ ನನಗೆ ಅಷ್ಟು ಅವಮಾನ ಆಗಿದೆ, ನಮ್ಮ ವಿಶ್ವಾಸಾರ್ಹತೆ ಹೋಗಿದೆ ಎಂದು ವಿಡಿಯೋದಲ್ಲಿ ಮನಾಫ್ ಅಲವತ್ತುಕೊಂಡಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?