
ಬೆಳ್ತಂಗಡಿ (ಆ.20): ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ) ಮಂಗಳವಾರವೂ ಅನಾಮಿಕ ದೂರುದಾರನ ವಿಚಾರಣೆ ನಡೆಸಿತು. ಜೊತೆಗೆ, ಎಸ್‌ಐಟಿ ಅಧಿಕಾರಿಗಳು ಮಂಗಳವಾರ 19 ವರ್ಷಗಳ ಕಾಲ ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ, ಅಂದಿನ ಜನಪ್ರತಿನಿಧಿಗಳನ್ನು ಕರೆಸಿಕೊಂಡು ಹೇಳಿಕೆ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಇವರ ಹೇಳಿಕೆಯೊಂದಿಗೆ ಅನಾಮಿಕ ದೂರುದಾರ ನೀಡಿದ ಮಾಹಿತಿಗಳನ್ನು ತಾಳೆ ಹಾಕುತ್ತಿದ್ದಾರೆ.
ದೂರುದಾರ, ತಾನು ಧರ್ಮಸ್ಥಳ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನೂರಾರು ಶವಗಳನ್ನು ಬೇರೆಯವರ ಆದೇಶದಂತೆ ಹೂತು ಹಾಕಿದ್ದೇನೆ ಎಂದು ಹೇಳಿದ್ದ. ದಫನ ಮಾಡಿದ ಸ್ದಳಗಳನ್ನು ತೋರಿಸಿದ್ದ. ಅಂತಹ 17 ಸ್ಥಳಗಳಲ್ಲಿ ಅಗೆತ ಮಾಡಿದರೂ ಹೇಳಿಕೊಳ್ಳುವಂಥ ಮಹತ್ವದ ಅಸ್ಥಿಪಂಜರಗಳು ಸಿಕ್ಕಿರಲಿಲ್ಲ. ಇದರಿಂದ ದೂರುದಾರನ ಮೇಲೆಯೇ ಅನುಮಾನಗಳು ವ್ಯಕ್ತವಾಗುತ್ತಿದ್ದು, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಸ್‌ಐಟಿ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾಕ್ಷಿಗಳನ್ನು ತಾಳೆ ಹಾಕುವ ಮಹತ್ವದ ಕಾರ್ಯದಲ್ಲಿ ತೊಡಗಿದೆ ಎನ್ನಲಾಗಿದೆ.
ವಿವಿಧ ಆಯಾಮಗಳಲ್ಲಿ ತನಿಖೆ: ಸದ್ಯಕ್ಕೆ ಗುಂಡಿ ಅಗೆತ ನಿಲ್ಲಿಸಿರುವ ಎಸ್ ಐಟಿ, ಇನ್ನಿತರ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಅಗೆತ ನಡೆಸಿದ ಸ್ಥಳದಲ್ಲಿ ಯಾವುದೇ ಅಸ್ಥಿಪಂಜರ ಸಿಗದೇ ಇರುವ ಕಾರಣ ಅಲ್ಲಿನ ಮಣ್ಣನ್ನೇ ಸಂಗ್ರಹಿಸಿ, ಅದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ಮುಂದುವರಿಸಿದೆ. ಪಾಯಿಂಟ್ 6ರಲ್ಲಿ ಸಿಕ್ಕಿದ ಎಲುಬುಗಳು, ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಅಸ್ಥಿಪಂಜರ ಮತ್ತು ದೂರುದಾರ ತಾನೇ ಅಗೆದು ಪೊಲೀಸರಿಗೊಪ್ಪಿಸಿದ ತಲೆಬುರುಡೆಯನ್ನು ಈಗಾಗಲೇ ಎಫ್‌ಎಸ್‌ಎಲ್ ತನಿಖೆಗೆ ಕಳಿಸಲಾಗಿದೆ.
ಉಳಿದಂತೆ ಅಸ್ಥಿಪಂಜರ ಸಿಗದಿರುವ ಗುಂಡಿಗಳ ಮಣ್ಣನ್ನೂ ಎಫ್‌ಎಸ್‌ಎಲ್ ತನಿಖೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಗಾಗಿ ಎಸ್‌ಐಟಿ ಕಾಯುತ್ತಿದೆ. ಖಾಲಿ ಮಣ್ಣಲ್ಲಿ ಕೊಳೆತ ಶವ, ಇಲ್ಲವೇ ಅಸ್ಥಿಪಂಜರದ ಅಂಶ ಇದೆಯೇ ಎಂಬುದು ಪರೀಕ್ಷೆಯಲ್ಲಿ ಗೊತ್ತಾಗಲಿದೆ. ಒಂದು ವೇಳೆ, ಅಸ್ಥಿಪಂಜರದ ಅಂಶ ಮಣ್ಣಲ್ಲಿ ಇದ್ದಿದ್ದೇ ಆದಲ್ಲಿ ಮುಂದಿನ ತನಿಖೆ ಇನ್ನಷ್ಟು ಸವಾಲಾಗಿ ಪರಿಣಮಿಸಲಿದೆ.
ಬುರುಡೆಗೂ, ನನಗೂ ಸಂಬಂಧವಿಲ್ಲ: ಈ ಮಧ್ಯೆ, ಧರ್ಮಸ್ಥಳ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳ ಮೃತದೇಹವನ್ನು ಸರಿಯಾಗಿ ಮಹಜರು ನಡೆಸದೆ ವಿಲೇವಾರಿ ಮಾಡಲಾಗಿದೆ ಎಂದು ಎಸ್ ಐಟಿಗೆ ದೂರು ನೀಡಿರುವ ಇಚ್ಲಂಪಾಡಿಯ ಜಯಂತ ಟಿ., ಮಂಗಳವಾರ ಎಸ್ಐಟಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಹೋರಾಟ ಯಾರ ವಿರುದ್ಧವೂ ಅಲ್ಲ. ನಮ್ಮದು ನ್ಯಾಯಕ್ಕಾಗಿ ಹೋರಾಟ. ಸಾಕ್ಷಿ ದೂರುದಾರ ತಂದ ಬುರುಡೆಯನ್ನು ಜಯಂತ್ ತಂದಿದ್ದಾರೆ ಎಂದು ಕೆಲವು ಮಾಧ್ಯಮಗಳು ಹೇಳುತ್ತಿವೆ. ಆದರೆ, ಇದು ಸತ್ಯಕ್ಕೆ ದೂರವಾದ ವಿಚಾರ. ಬುರುಡೆಗೂ, ನನಗೂ ಸಂಬಂಧವಿಲ್ಲ. ಈ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ.
ಮೃತದೇಹ ಹೂತು ಹಾಕಿರುವುದನ್ನು ನೋಡಿದ ಬಗ್ಗೆ ದೂರು ನೀಡಿದ್ದು, ಆ ಜಾಗವನ್ನು ಎಸ್ಐಟಿ ತಂಡಕ್ಕೆ ಈಗಾಗಲೇ ತೋರಿಸಿದ್ದೇವೆ. ಆ ಸ್ಥಳದ ಮಹಜರು ನಡೆಸಲಾಗಿದೆ. ದೂರುದಾರ ತೋರಿಸಿದ ಜಾಗ, ನಾನು ತೋರಿಸಿದ ಜಾಗ ಬೇರೆ, ಬೇರೆಯಾಗಿದೆ. ಈ ಜಾಗದಲ್ಲಿ ಇನ್ನೂ ಅಗೆಯುವ ಕಾರ್ಯ ನಡೆದಿಲ್ಲ. ತನಿಖೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ದೂರು ನೀಡಿದ ಬಳಿಕ ನನ್ನನ್ನು ಕೆಲವರು ಹಿಂಬಾಲಿಸುತ್ತಿದ್ದಾರೆ. ಜೀವಕ್ಕೆ ಅಪಾಯ ಮಾಡುವ ಭಯವಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ