ಎಂಎಲ್ಸಿ ಹುದ್ದೆಯಲ್ಲಿ 45 ವರ್ಷ ಪೂರೈಸಿದ ಬಸವರಾಜ ಹೊರಟ್ಟಿಗೆ ಗೌರವ: ಸದಸ್ಯರ ಮೆಚ್ಚುಗೆ

Published : Aug 20, 2025, 07:41 AM IST
Basavaraj Horatti

ಸಾರಾಂಶ

ಹೊರಟ್ಟಿ ಅವರು ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಲು ಅವರು ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ, ಶಿಕ್ಷಕರ ಸಮಸ್ಯೆ ಬಗೆಹರಿಸಿರುವುದು ಕಾರಣವಾಗಿದೆ. ಪರಿಷತ್ತಿನ ಸದಸ್ಯರಾಗಿ 50 ವರ್ಷ ಸಹ ಪೂರೈಸಲಿ ಎಂದು ಆಶಿಸಿದರು.

ವಿಧಾನ ಪರಿಷತ್‌ (ಆ.20): ಕಳೆದ 45 ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುತ್ತಾ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಪಕ್ಷಾತೀತವಾಗಿ ಸದಸ್ಯರು ಅಭಿನಂದಿಸಿದರು. ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ, ವಿವಿಧ ಖಾತೆಗಳ ಸಚಿವರಾಗಿ, ಸಭಾಪತಿಯಾಗಿ ಹೊರಟ್ಟಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಂಡ ಸದಸ್ಯರು, ಹೊರಟ್ಟಿ ಅವರು ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಲು ಅವರು ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ, ಶಿಕ್ಷಕರ ಸಮಸ್ಯೆ ಬಗೆಹರಿಸಿರುವುದು ಕಾರಣವಾಗಿದೆ. ಅಪಾರ ಅನುಭವ ಹೊಂದಿರುವ ಹೊರಟ್ಟಿ ಅವರು ಪರಿಷತ್ತಿನ ಸದಸ್ಯರಾಗಿ 50 ವರ್ಷ ಸಹ ಪೂರೈಸಲಿ ಎಂದು ಸದಸ್ಯರು ಆಶಿಸಿದರು.

ಕಾಂಗ್ರೆಸ್ಸಿನ ಮಂಜುನಾಥ್‌ ಭಂಡಾರಿ ಮಾತನಾಡಿ, 18 ಮುಖ್ಯಮಂತ್ರಿಗಳು, 432 ಸಚಿವರು, ಐದು ಸಾವಿರ ಶಾಸಕರನ್ನು ನೋಡುವಂತಹ ಅವಕಾಶ ಬಸವರಾಜ ಹೊರಟ್ಟಿ ಅವರಿಗೆ ದೊರೆತಿದೆ. ಬಹುಶಃ ಇಂತಹ ಅವಕಾಶ ಬೇರೆ ಯಾರಿಗೂ ಸಿಗುವುದಿಲ್ಲ. ಹೊಸ ಸದಸ್ಯರಿಗೆ ಸಲಹೆ, ಸೂಚನೆ ನೀಡುವ ಮೂಲಕ ಸದಸ್ಯರು ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿಸಿಕೊಡುವ ಕೆಲಸ ಮಾಡಿದ್ದಾರೆ ಎಂದರು.

ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್‌, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಎಚ್‌.ವಿಶ್ವನಾಥ್‌, ಡಿ.ಟಿ. ಶ್ರೀನಿವಾಸ್‌, ಟಿ.ಎ.ಶರವಣ, ಬಿಜೆಪಿಯ ಕೆ.ಎಸ್‌.ನವೀನ್, ಸಚಿವರಾದ ಮಧು ಬಂಗಾರಪ್ಪ, ಆರ್.ಬಿ.ತಿಮ್ಮಾಪುರ, ಎಂ.ಬಿ.ಪಾಟೀಲ್‌, ಎನ್‌.ಚಲುವರಾಯಸ್ವಾಮಿ, ಬಿಜೆಪಿಯ ಸಿ.ಟಿ.ರವಿ, ಎನ್.ರವಿಕುಮಾರ್, ಎಂ.ನಾಗರಾಜ ಯಾದವ್‌, ಪ್ರತಾಪಸಿಂಹ ನಾಯಕ್‌, ಎಂ.ಆರ್‌.ಸೀತಾರಾಂ, ಭಾರತಿಶೆಟ್ಟಿ. ಎಸ್‌.ಎಲ್‌.ಬೋಜೇಗೌಡ, ಡಾ। ಧನಂಜಯ ಸರ್ಜಿ, ಹಣಮಂತ ನಿರಾಣಿ, ಬಲ್ಕಿಸ್‌ ಬಾನು ಮಾತನಾಡಿದರು.

ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, 1980ರಿಂದ ಸತತವಾಗಿ ಪರಿಷತ್ತಿಗೆ ಆಯ್ಕೆಯಾಗುತ್ತಾ ಬಂದಿರುವ ಹೊರಟ್ಟಿ ಅವರು ಅಪಾರ ಅನುಭವ, ಜ್ಞಾನದ ಮೂಲಕ ದಾರಿ ದೀಪವಾಗಿದ್ದಾರೆ. ಸಭಾಪತಿಯಾಗಿ ಆಯ್ಕೆಯಾದ ನಂತರ ತಾವು ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದು ಬಿಜೆಪಿಗೆ ರಾಜೀನಾಮೆ ನೀಡಿರುವುದು ಮುಂದೆ ಬರುವವರಿಗೆ ಮಾದರಿಯಾಗಿದೆ. ಪಕ್ಷಾತೀತವಾಗಿ ಎಲ್ಲರನ್ನೂ ಸಮಾನವಾಗಿ ನೋಡಿದ್ದೀರಿ. ಆದರೆ ಶಾಸಕರ ಬಗ್ಗೆ ತಪ್ಪಾಗಿ ನಡೆದುಕೊಳ್ಳುವ ಅಧಿಕಾರಿಗಳು ಅಥವಾ ಪೊಲೀಸರನ್ನು ಕರೆಯಿಸಿ ಛೀಮಾರಿ ಹಾಕುವ ಕೆಲಸ ಮಾಡಬೇಕಿತ್ತು ಎಂದರು.

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಿರುವ ಗುಟ್ಟನ್ನು ತಿಳಿದುಕೊಳ್ಳಲು ಪಿಎಚ್‌ಡಿ ಮಾಡಬೇಕಾಗುತ್ತದೆ ಎಂದರು. ಬಿಜೆಪಿ ಎಚ್‌.ವಿಶ್ವನಾಥ್‌ ಮಾತನಾಡಿ, ಬೇರೆ ಯಾರಿಗೂ ಸಿಗದ ದೊಡ್ಡ ಅನುಭವ ಹೊರಟ್ಟಿ ಅವರಿಗೆ ಸಿಕ್ಕಿದೆ. ತಮ್ಮ ಸ್ಥಾನಕ್ಕೆ ಚ್ಯುತಿ ಆಗದಂತೆ ನಡೆದುಕೊಂಡಿದ್ದಾರೆ ಎಂದರೆ, ಕಾಂಗ್ರೆಸ್ಸಿನ ಐವನ್‌ ಡಿಸೋಜಾ ಅವರು, ಸದನದಲ್ಲಿ ಗದ್ದಲ ಅಥವಾ ಸದಸ್ಯರು ತಪ್ಪು ಮಾಡಿದಾಗ ಮಧ್ಯಪ್ರವೇಶಿಸಿ ಸರಿಪಡಿಸುವ ಕೆಲಸವನ್ನು ಹಿರಿಯ ಸದಸ್ಯರಾಗಿ ಹೊರಟ್ಟಿ ಅವರು ಮಾಡುತ್ತಿರುವುದು ವಿಶೇಷವಾಗಿದೆ ಎಂದರು.

ಕಾಂಗ್ರೆಸ್ಸಿನ ಡಿ.ಟಿ. ಶ್ರೀನಿವಾಸ್‌, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬಸವರಾಜ ಹೊರಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡದ ಕೆಲಸವಿಲ್ಲ ಎಂದು ಹೇಳಿದರು. ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಹೊರಟ್ಟಿ ಅವರು ಶಿಕ್ಷಕರ ಪರ ಹೋರಾಟ ಮಾಡಿ ಸಂಘಟನೆ ಮಾಡಿದ್ದಾರೆ. ಶಿಕ್ಷಕರ ಅನೇಕ ಬೇಡಿಕೆ ಈಡೇರಲು ಕಾರಣರಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಅನೇಕ ವಿಷಯಗಳಿಗಾಗಿ ಉಪವಾಸ ಮಾಡಿದ್ದಾರೆ. ವೈಯಕ್ತಿಕ ಸಂಪನ್ಮೂಲ ಬಳಸಿ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಕಾರಣರಾಗಿದ್ದಾರೆ ಎಂದರು.

ಕಾಂಗ್ರೆಸ್ಸಿನ ಪುಟ್ಟಣ್ಣ ಮಾತನಾಡಿ, ಶಿಕ್ಷಕರ ವರ್ಗಾವಣೆಯಲ್ಲಿ ಪ್ರತಿ ವರ್ಷ ನೂರಾರು ಕೋಟಿ ರುಪಾಯಿ ಕೈ ಬದಲಾಗುತ್ತಿತ್ತು. ಎಲ್ಲ ಶಾಸಕರು ವರ್ಗಾವಣೆಗೆ ಪತ್ರಗಳನ್ನು ಇಲಾಖೆಗೆ ತರುತ್ತಿದ್ದರು. ಸಚಿವರಾಗಿದ್ದ ಹೊರಟ್ಟಿ ಅವರು ವರ್ಗಾವಣೆ ನಿಷೇಧ ಕಾಯ್ದೆ ತರುವ ಮೂಲಕ ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕ, ಲಂಚರಹಿತವಾಗಿಸಿದರು ಎಂದು ತಿಳಿಸಿದರು. ಜೆಡಿಎಸ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಎಲ್ಲ ಸದಸ್ಯರನ್ನು ಸಹಿಸುವ ಮತ್ತು ಕ್ಷಮಿಸುವ ಗುಣ ಹೊಂದಿರುವ ಹೊರಟ್ಟಿ ಅವರದ್ದು ತಾಯಿ ಹೃದಯ. ಇಂತಹ ಹಿರಿಯ ಸದಸ್ಯರನ್ನು ಹೊಂದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು. ಬಿಜೆಪಿಯ ಕೆ.ಎಸ್‌.ನವೀನ್ ಮಾತನಾಡಿ, ರಾಜಕಾರಣದಲ್ಲಿ ಇರುವವರು ಸದಾ ಮೇಲಿನ ಹುದ್ದೆಯನ್ನು ಬಯಸುತ್ತಾರೆ. ಆದರೆ, ಹೊರಟ್ಟಿಯವರು ಒಂದೇ ಹುದ್ದೆ, ಒಂದೇ ಕ್ಷೇತ್ರ, ಅದೇ ಮತದಾರರಿಂದ ಸತತವಾಗಿ ಆಯ್ಕೆಯಾಗಿರುವುದು ವಿಶೇಷ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ